ಸಾಲಗಾರರ ಕಿರುಕುಳ: ದಂಪತಿ ಆತ್ಮಹತ್ಯೆ
ರಾಮನಗರ: ಸಾಲಗಾರರ ಕಿರುಕುಳದಿಂದ ಬೇಸತ್ತು ದಂಪತಿ ಆತ್ಮಹತ್ಯೆಗೆ ಮೊರೆ ಹೋದ ಘಟನೆ ನಗರದ ಐಜೂರು ಬಡಾವಣೆಯಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.
ಐಜೂರಿನ ವಾಟರ್ ಟ್ಯಾಂಕ್ ವೃತ್ತದ ಬಳಿ ವಾಸವಿದ್ದ ಮೂಲತಃ ತಮಿಳುನಾಡಿನ ವಿಜಯಾನಂದಶೆಟ್ಟಿ ಮತ್ತು ಮೈಸೂರಿನ ಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡವರು. ಆನಂದ ಶೆಟ್ಟಿ ಶವ ನೇಣು ಬಿಗಿದ ಸ್ಥಿತಿಯಲ್ಲಿದ್ದರೆ, ಲಕ್ಷ್ಮಿ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯಿದೆ.
ಮೈಸೂರಿನಲ್ಲಿ ಬೇರೊಬ್ಬರ ಜತೆ ಮದುವೆಯಾಗಿ ಎರಡು ಮಕ್ಕಳ ತಾಯಿಯಾದ ಲಕ್ಷ್ಮಿ ಪತಿಯನ್ನು ತೊರೆದು, ವಿಜಯಾನಂದ ಶೆಟ್ಟಿ ಜತೆ 5 ವರ್ಷದಿಂದ ರಾಮನಗರದಲ್ಲಿ ವಾಸವಿದ್ದರು. ಆನಂದ ಶೆಟ್ಟಿ ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಆತ್ಮಹತ್ಯೆಗೂ ಮುನ್ನ ವಿಜಯಾನಂದಶೆಟ್ಟಿ ಕೆಲ ಸ್ನೇಹಿತರ ಮೊಬೈಲ್ಗಳಿಗೆ ಸಂದೇಶ ರವಾನಿಸಿದ್ದರು. ಈ ದಂಪತಿ ಸಾವಿಗೂ ಮುನ್ನ ಡೆತ್ ನೋಟ್ ಬರೆದು, ಮನೆಯ ಬೀರುವಿನ ಮೇಲೆ ಅದನ್ನು ಅಂಟಿಸಿದ್ದರು.
ನಾವು ಯಾರಿಗೋ ಮೋಸ ಮಾಡಿಲ್ಲ. ನಮಗೆ ಶತ್ರುಗಳಿಲ್ಲ, ಎಲ್ಲರಿಗೂ ಸಾಧ್ಯವಾದಷ್ಟು ಒಳ್ಳೆಯದನ್ನೇ ಮಾಡಿದ್ದೇವೆ. ನಮಗೆ ನಂಬಿದವರೇ ದ್ರೋಹ ಮಾಡಿದರು. ಸಾಲ ತೀರಿಸಿಯೂ ಚೆಕ್ ಮತ್ತು ಆಭರಣಗಳನ್ನು ವಾಪಸ್ ನೀಡಲಿಲ್ಲ ಎಂದು ಬರೆದಿಟ್ಟ ಡೆತ್ ನೋಟ್ನಲ್ಲಿದೆ.
ಮೋಸ ಮಾಡಿದವರು, ಕಿರುಕುಳ ನೀಡಿದವರ ಹೆಸರು ಬರೆದಿಲ್ಲ. ತಮಗೆ ಸಂಬಂಧಿಕರಿಲ್ಲ. ಮೃತ ದೇಹಗಳನ್ನು ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿಗೆ ದಾನ ಮಾಡಬೇಕು ಎಂದು ಅವರು ಕೋರಿದ್ದಾರೆ. ಐಜೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.