ಚಿರತೆ ದಾಳಿಗೆ ಗ್ರಾಪಂ ಸದಸ್ಯೆ ಬಲಿ
ಮಾಗಡಿ: ತಾಲೂಕಿನ ಮಾಡಬಾಳ್ ಹೋಬಳಿಯ ಜೇನುಕಲ್ಲು ಪಾಳ್ಯದಲ್ಲಿ ಶನಿವಾರ ಚಿರತೆ ದಾಳಿಗೆ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಆದಿವಾಸಿ ಬಡಕಟ್ಟು ಸಮುದಾಯದ ಮದ್ದೂರಮ್ಮ (42) ಬಲಿಯಾದ ಮಹಿಳೆ. ಇವರು ಗ್ರಾಮ ಪಂಚಾಯ್ತಿ ಸದಸ್ಯೆಯಾಗಿದ್ದಾರೆ. ಶುಕ್ರವಾರ ಮೇಯಲು ಕಾಡಿಗೆ ಹೋಗಿದ್ದ ಹಸುಗಳು ಮನೆಗೆ ಬಂದಿರಲಿಲ್ಲ. ಶನಿವಾರ ಬೆಳಗ್ಗೆ ಪತಿ ಮೋಟಯ್ಯ ಅವರೊಂದಿಗೆ ಮದ್ದೂರಮ್ಮ ಹಸುಗಳ ಹುಡುಕಾಟಕ್ಕೆ ತೆರಳಿದ್ದಾಗ ಪೊದೆಯಲ್ಲಿ ಅವಿತಿದ್ದ ಚಿರತೆ ಮದ್ದೂರಮ್ಮ ಅವರ ಮೇಲೆ ಹಠಾತ್ ದಾಳಿ ಮಾಡಿದೆ. ಅನತಿ ದೂರದಲ್ಲಿ ಹಸು ಹುಡುಕುತ್ತಿದ್ದ ಮೋಟಯ್ಯ ಪತ್ನಿಯ ಆಕ್ರಂದನ ಕೇಳಿ ಓಡಿ ಬಂದಾಗ ಚಿರತೆ ಬಾಯಿಗೆ ಸಿಲುಕಿದ್ದ ಪತ್ನಿಯನ್ನು ನೋಡಿದ್ದಾರೆ. ಕೂಡಲೇ ದೊಣ್ಣೆಯಿಂದ ಹೊಡೆದು ಚಿರತೆಯನ್ನು ಓಡಿಸಿದ್ದಾರೆ.