ಚಿನ್ನ ಪಾಲಿಷ್ ನೆಪ: ಮಹಿಳೆಯರಿಗೆ ವಂಚನೆ
ಹೊಸಕೋಟೆ: ಚಿನ್ನಾಭರಣ ಪಾಲಿಷ್ ಮಾಡಿಕೊಡುವ ನೆಪದಲ್ಲಿ ಮಹಿಳೆಯರನ್ನು ವಂಚಿಸಿದ ಪ್ರಕರಣ ತಾಲೂಕಿನ ಕಣ್ಣೂರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಾಳಿಗಪ್ಪ ಎಂಬುವರ ಪತ್ನಿ ಭಾರತಿ, ವೆಂಕಟಪ್ಪ ಎಂಬುವರ ಪತ್ನಿ ಸುರೇಖಾ ವಂಚನೆಗೊಳಗಾದವರು. ಮಧ್ಯಾಹ್ನ ಇಬ್ಬರು ಅಪರಿಚಿತರು ಮನೆಗೆ ಬಂದು ಚಿನ್ನ ಪಾಲಿಷ್ ಮಾಡಿಕೊಡುವುದಾಗಿ ಹೇಳಿದಾಗ, ಭಾರತಿ ತಮ್ಮ ಕತ್ತಿನಲ್ಲಿದ್ದ 72 ಗ್ರಾಂ ತೂಕದ ಮಾಂಗಲ್ಯ ತೆಗೆದುಕೊಟ್ಟರು. ಪಕ್ಕದ ಮನೆಯ ಸುರೇಖಾ ಕೂಡ ಕತ್ತಿನಲ್ಲಿದ್ದ 48 ಗ್ರಾಂ ತೂಕದ ಚಿನ್ನದ ಸರವನ್ನು ನೀಡಿದರು. ಕುಕ್ಕರ್ ತೆಗೆದುಕೊಂಡು ಬರಲು ಹೇಳಿ, ನಂತರ ನೀರು ಬಿಸಿ ಮಾಡಿಕೊಂಡು ಬರಲು ತಿಳಿಸಿದರು. ಒಳಗೆ ಹೋಗಿ ಹಿಂದಿರುಗಿ ಬಂದು ನೋಡಿದಾಗ ಯುವಕರು ಪರಾರಿಯಾಗಿದ್ದರು. ಸುತ್ತಮುತ್ತ ಹುಡುಕಾಟ ನಡೆಸಿದರೂ ಯುವಕರು ಪತ್ತೆಯಾಗಿಲ್ಲ. ಯುವಕರು 25-30 ವರ್ಷ ವಯಸ್ಸಿನವರಾಗಿದ್ದು, ಕನ್ನಡ ಮಾತನಾಡುತ್ತಿದ್ದರು. ಶನಿವಾರ ಭಾರತಿ ನೀಡಿದ ದೂರಿನನ್ವಯ ಹೊಸಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.