ಬಿಜೆಪಿ ಬೆಂಬಲಿಸಿ: ಶಿಕ್ಷಕರಿಗೆ ನೀಲಯ್ಯ ಕರೆ
ಮಾಗಡಿ: ಶಿಕ್ಷಣ ಕ್ಷೇತ್ರದ ಕ್ರಾಂತಿಗೆ ಮತ್ತು ಶಿಕ್ಷಕರ ಅನೇಕ ಜ್ವಲಂತ ಸಮಸ್ಯೆಗಳ ನಿವಾರಣೆಗಾಗಿ, ಪ್ರಜ್ಞಾವಂತ ಶಿಕ್ಷಕರು, ನನ್ನ ಗೆಲವಿಗೆ ಒಗ್ಗಟ್ಟಿನಿಂದ ಪ್ರಾಮಾಣಿಕವಾಗಿ ಮತ ಚಲಾಯಿಸಿ ಸೇವೆಗೆ ಒಮ್ಮೆ ಅವಕಾಶ ಮಾಡಿಕೊಡುವಂತೆ ಬೆಂಗಳೂರು ಶಿಕ್ಷಕರ ಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂ. ನೀಲಯ್ಯ ಕರೆ ನೀಡಿದರು.
ಅವರು ಶಿಕ್ಷಕರ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ಶಿಕ್ಷಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾ ಸಾಗಿದ್ದರೂ ಇಲ್ಲಿಯವರೆವಿಗೂ ಯಾವ ಶಿಕ್ಷಕ ಪ್ರತಿನಿಧಿಯೂ ಸಮಪರ್ಕವಾಗಿ ಸ್ಪಂದಿಸದ ಕಾರಣ ಶಿಕ್ಷಕರು ತೊಂದರೆಗೆ ಒಳಗಾಗಿದ್ದಾರೆ. ಶಿಕ್ಷಕರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಲು ಈ ಬಾರಿ ಶಿಕ್ಷಕರೆಲ್ಲರೂ ಬಂದೇ ಮನಸ್ಸಿನಿಂದ ನನ್ನ ಗೆಲುವಿಗೆ ಪ್ರಾಮಾಣಿಕವಾಗಿ ಮತಚಲಾಯಿಸಿ ಗೆಲ್ಲಿಸುವಂತೆ ನೀಲಯ್ಯ ಮನವಿ ಮಾಡಿದರು. ಮೇ 29 ರಂದು ಮಧ್ಯಾಹ್ನ 3 ಗಂಟೆಗೆ ನಾಮ ಪತ್ರ ಸಲ್ಲಿಸಲಿದ್ದೇನೆ. ನಿಮ್ಮೆಲ್ಲರ ಸಂಪೂರ್ಣ ಆರ್ಶೀವಾದ ನನ್ನ ಮೇಲಿರಲಿ, ನನ್ನನ್ನು ಬಹುಮತದಿಂದ ಗೆಲ್ಲಿಸಿ, ನಿಮ್ಮ ಸೇವೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು. ಸಿದ್ದಗಂಗಾ ಮಠದ ವ್ಯವಸ್ಥಾಪಕ ಹುಚ್ಚವೀರಯ್ಯ ಮಾತನಾಡಿ ಚಿರಪರಿಚಿತರಾಗಿರುವ ಎಂ.ನೀಲಯ್ಯ ಅವರು, ಈಗಾಗಲೇ ಸಹಸ್ರಾರು ಶಿಕ್ಷಕರ ಮನಗೆದ್ದಿದ್ದಾರೆ. ಶಿಕ್ಷಕ ಮನಸ್ಸುಗಳು ಬಂದಾಗಬೇಕು. ಒಮ್ಮತದಿಂದ ಈ ಬಾರಿ ಎಂ. ನೀಲಯ್ಯ ಅವರನ್ನು ಗೆಲ್ಲಿಸುವ ಮೂಲಕ ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಸೇವೆ ಸಲ್ಲಿಸಲು ಅವರಿಗೆ ಅವಕಾಶ ನೀಡಬೇಕು ಎಂದರು.