ಬಿರುಗಾಳಿಯಿಂದ ಕೂಡಿದ ಮಳೆ
ದೇವನಹಳ್ಳಿ: ದೇವನಹಳ್ಳಿ ತಾಲೂಕಿನ ಸಾವುಕನಹಳ್ಳಿ, ಅಕ್ಕುಪೇಟೆ ಅಲ್ಲದೆ ಇತರ ಗ್ರಾಮಗಳಲ್ಲಿ ಮಂಗಳವಾರ ಮಧ್ಯಾಹ್ನ 2 ರಿಂದ 3 ಗಂಟೆ ಒಳಗೆ ಗುಡುಗು ಹಾಗೂ ಬಿರುಗಾಳಿಂದ ಕೂಡಿದ ಮಳೆ ಬಿರುಸಾಗಿ ಬಿದ್ದು 30ಕ್ಕೂ ಹೆಚ್ಚು ಮನೆಗಳ ಚಾವಣಿ ಹಾರಿಹೋಗಿದ್ದು ಸುಮಾರು ಐದು ಲಕ್ಷ ರು.ಗಳಿಗೂ ಹೆಚ್ಚು ಹಾನಿಯಾಗಿದೆ.
ಸಾವುಕನಹಳ್ಳಿಯ ರಸ್ತೆಯಲ್ಲಿ ಎಲ್ಲಿ ನೋಡಿದರೂ ಪುಡಿ ಪುಡಿಯಾದ ಸೀಮಂಟ್ ಶೀಟ್‌ಗಳು ಬಿದ್ದಿದ್ದು ಇಂತಹ ಬಿರುಗಾಳಿ ತಮ್ಮ ಜೀವಮಾನದಲ್ಲೇ ನೋಡಿಲ್ಲ ಎಂದು ಹಿರಿಯರೊಬ್ಬರು ತಿಳಿಸಿದರು. ಇದೇ ಗ್ರಾಮದ ಕಾಳಪ್ಪನವರ ಮಂಜುನಾಥ ಎಂಬುವರ ಮನೆಯಲ್ಲಿ ಮನೆಯ ಮೇಲಿನ ಎಲ್ಲ ಶೀಟುಗಳು ಹಾರಿಹೋಗಿದ್ದು ಈ ಸಂದರ್ಭದಲ್ಲಿ ಮನೆಯ ಒಡತಿ ಪ್ರಮೀಳಮ್ಮ ಅವರ ತಲೆ ಮೇಲೆ ಶೀಟ್ ಬಿದ್ದು ತಲೆಗೆ ಗಾಯವಾಗಿದೆ. ಇದೇ ಗ್ರಾಮದ ವಾಟರ್‌ಮನ್ ಮುನಿಯಪ್ಪ, ರತ್ನಮ್ಮ ಹಾಗೂ ಕೃಷ್ಣಪ್ಪ, ಬಸಮ್ಮ ಅವರ ಮನೆಯ ಶೀಟ್‌ಗಳು ಸಹ ಗಾಳಿಗೆ ಹಾರಿಹೋಗಿವೆ.
ಮುಖಂಡರಾದ ಮುನಿರಾಜು ಹಾಗೂ ಮುನಿರಾಮಯ್ಯ ಪತ್ರಕರ್ತರೊಂದಿಗೆ ಮಾತನಾಡಿ ಜಿಲ್ಲಾಧಿಕಾರಿಗಳು, ತಹಸೀಲ್ದಾರ್ ಹಾಗೂ ಶಾಸಕರು ಭೇಟಿ ನೀಡಿ ಬಡವರಿಗೆ ಪರಿಹಾರಕೊಡಿಸಬೇಕೆಂದು ಕೋರಿದ್ದಾರೆ. ಸ್ಥಳಕ್ಕೆ ಗ್ರಾಮ ಲೆಕ್ಕಿಗ ಸಿ. ಜಯರಾಂ ಬಿದಲೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಜಯರಾಂ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಿರುಗಾಳಿ ಹಾಗೂ ಮಳೆಯಿಂದಾಗಿ ಅಕ್ಕುಪೇಟೆಯಲ್ಲಿ ತೆಂಗಿನಮರವೊಂದು ವಿದ್ಯುತ್ ಲೈನಿನ ಮೇಲೆ ಬಿದ್ದು ವಿದ್ಯುತ್ ಕಂಬ ಕೆಳಕ್ಕೆ ಬಿದ್ದುಹೋಗಿದೆ. ಯಾರಿಗೂ ಪ್ರಾಣಾಪಾಯವಾಗಿಲ್ಲ ಎನ್ನಲಾಗಿದೆ.