ಮರಣಪತ್ರ ನೀಡುವಾಗ ವಾಸ್ತವ ಅರಿವಿರಲಿ: ಬಿ.ಎಸ್. ಹಿರೇಮಠ್
ಬೆಂಗಳೂರು: ಪ್ರತಿ ವೈದ್ಯರು ವೃತ್ತಿಗೆ ಬೆಲೆ ನೀಡಿ ವಾಸ್ತವ ಸಂಗತಿ ಆಧಾರದ ಮೇಲೆ ಮರಣ ಪತ್ರ ನೀಡಬೇಕು. ಕಳಪೆ ಮರಣ ಪತ್ರಗಳ ಅಂಕಿ ಅಂಶದಿಂದ ಸರ್ಕಾರ ಅಭಿವೃದ್ಧಿ ಕಾರ್ಯಕ್ರಮ ರೂಪಿಸುವುದು ಕಷ್ಟ ಎಂದು ರಾಜ್ಯ ಕಾರ್ಯತಾಂತ್ರಿಕ ಸಾಂಖ್ಯಿಕ ಅಭಿವೃದ್ಧಿ ಸಂಸ್ಥೆ ಯೋಜನಾ ನಿರ್ದೇಶಕ ಬಿ.ಎಸ್. ಹಿರೇಮಠ್ಹೇಳಿದರು.
ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಶುಕ್ರವಾರ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಭಾಂಗಣದಲ್ಲಿ ಆಯೋಜಿಸಿದ್ದ 'ಮರಣ ಕಾರಣ ವೈದ್ಯಕೀಯ ಪ್ರಮಾಣ ಪತ್ರ' ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಒಬ್ಬ ವ್ಯಕ್ತಿ ಸತ್ತ ನಂತರ ಆ ವ್ಯಕ್ತಿ ಹೃದಯಾಘತದಿಂದ ಸತ್ತನೋ, ಅಪಘಾತದಿಂದ ಸತ್ತನೋ ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವೈದ್ಯರು ಮರಣ ಪತ್ರದಲ್ಲಿ ಸ್ಪಷ್ಟವಾಗಿ ನಮೂದಿಸಬೇಕು.
ಮರಣದ ಪ್ರಮಾಣ ಪತ್ರ ನೀಡುವಲ್ಲಿ ಸ್ವಲ್ಪ ಎಡವಟ್ಟು ಮಾಡಿದರೂ, ಕಳಪೆ ಅಂಕಿ ಅಂಶಗಳ ಮೇಲೆ ಅಭಿವೃದ್ಧಿ ಕಾರ್ಯ ರೂಪಿಸುವುದು ಕಷ್ಟವಾಗುತ್ತದೆ. ಜನನ ಪ್ರಮಾಣ ಪತ್ರ ನೀಡುವಾಗ ಎಷ್ಟು ಜವಾಬ್ದಾರಿ ವಹಿಸುತ್ತೆವೆಯೋ, ಅಷ್ಟೇ ಜವಾಬ್ದಾರಿ ಮರಣ ಪತ್ರ ನೀಡುವಾಗಲೂ ಇರಬೇಕು. ವೈದ್ಯರು ವೃತ್ತಿ ಸೇರುವಾಗ ತೆಗೆದುಕೊಳ್ಳುವ ಪ್ರಮಾಣ ವಚನಕ್ಕೆ ಬದ್ಧರಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಬೆಂಗಳೂರುಗ್ರಾಮಾಂತರ ಜಿಪಂ ಉಪಕಾರ್ಯದರ್ಶಿ ಮುನಿರಾಜು ಮಾತನಾಡಿ, ಆಸ್ತಿಗಾಗಿ ವಯೋವೃದ್ಧರನ್ನು ಕೊಲೆ ಮಾಡುವ ಪ್ರಕರಣ ಹೆಚ್ಚಾಗುತ್ತಿವೆ. ಇಂತಹ ಸಮಯದಲ್ಲಿ ವೈದ್ಯರು ಕೆಲವು ರಾಜಕೀಯ ವ್ಯಕ್ತಿಗಳ ಮಾತಿಗೆ ಬೆಲೆ ಕೊಟ್ಟು ಕೊಲೆಯನ್ನು ನೈಸರ್ಗಿಕ ಮರಣ ಎಂದು ಪ್ರಮಾಣ ಪತ್ರ ನೀಡಬಾರದು ಎಂದು ಎಚ್ಚರಿಸಿದರು.
ಬೆಂಗಳೂರು ಗ್ರಾಮಾಂತರ ಆಸ್ಪತ್ರೆಯ ವೈದ್ಯರು, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಎನ್. ಮಾಧುರಾವ್, ಸಾಂಖ್ಯಿಕ ಅಧಿಕಾರಿ ಚಂದ್ರಕಲಾ, ಬಿ.ಜಿ. ಕೃಷ್ಣಮೂರ್ತಿ, ಜನ ಗಣತಿ ನಿರ್ದೇಶನಾಲಯ ಸಹಾಯ ನಿರ್ದೇಶಕರಾದ ಲೇಜರ್, ಡಾ. ಪ್ರೇಮ್ ಮೋನಿ, ಪಿ. ರತ್ನಾಕರ್ ಭಾಗವಹಿಸಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.