9ರಂದು ಕೆಪಿಸಿಸಿ ಚುನಾವಣಾ ಸಮಿತಿ ಸಭೆ
ಬೆಂಗಳೂರು: ಪ್ರದೇಶ ಕಾಂಗ್ರೆಸ್ನ (ಕೆಪಿಸಿಸಿ) ಮಹತ್ವದ ಚುನಾವಣಾ ಸಮಿತಿ ಸಭೆಯನ್ನು ಫೆ.9ರಂದು ನಡೆಸಲು ನಿರ್ಧರಿಸಲಾಗಿದ್ದು, ಆಕಾಂಕ್ಷಿಗಳಲ್ಲಿ ಆಸೆಯ ಗರಿ ಮೂಡಿಸಿದೆ.
ಆದರೆ ಈ ಸಭೆ ಕೇವಲ ಔಪಚಾರಿಕತೆಗೆ ಸೀಮಿತಗೊಳಿಸುವ ಲಕ್ಷಣವೂ ಕಾಣುತ್ತಿದ್ದು, ಕೆಪಿಸಿಸಿಗೆ ಸಲ್ಲಿಕೆಯಾದ 2100 ಆಕಾಂಕ್ಷಿಗಳ ಅರ್ಜಿ ಪರಿಶೀಲಿಸಿ ಸಭೆ ಮುಕ್ತಾಯಗೊಳಿಸುವ ಸಾಧ್ಯತೆಯೂ ಇದೆ.
ಕೆಪಿಸಿಸಿ ಮೂಲಗಳ ಪ್ರಕಾರ ಸಭೆಯನ್ನು ಔಪಚಾರಿಕತೆಗೆ ಸೀಮಿತಗೊಳಿಸುವುದಕ್ಕೆ ಮುಖ್ಯ ಕಾರಣ ಎಂದರೆ ಚುನಾವಣಾ ಸಮಿತಿ ಸದಸ್ಯರನ್ನು ಇನ್ನೂ ಅಖೈರುಗೊಳಿಸಿಲ್ಲ. ಈ ಸಮಿತಿಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಅವರೇ ಮುಖ್ಯಸ್ಥರಾಗಿದ್ದು, ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ಹಾಗೂ ಎಸ್.ಆರ್. ಪಾಟೀಲ್ ನಂತರದ ಮಹತ್ವದ ವ್ಯಕ್ತಿಗಳಾಗಿದ್ದಾರೆ.
ಆದಾಗಿಯೂ ರಾಜ್ಯವನ್ನು ಪ್ರತಿನಿಧಿಸುವ ನಾಲ್ವರು ಕೇಂದ್ರ ಸಚಿವರು, ಕೆಪಿಸಿಸಿ ಮಾಜಿ ಅಧ್ಯಕ್ಷರು, ಸಂಸದರು, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಮಧುಸೂದನ ಮಿಸ್ತ್ರಿ, ಎನ್. ಶಾಂತಾರಾಂ ನಾಯಕ್, ಹನುಮಂತರಾವ್ ಅವರಿಗೆ ಕಡ್ಡಾಯ ಆಹ್ವಾನ ನೀಡುವುದರ ಜತೆಗೆ ರಾಜ್ಯ ಕಾಂಗ್ರೆಸ್ನಿಂದ ಹಲವರನ್ನು ಈ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಬೇಕಿದೆ. ಇದುವರೆಗೆ ಚುನಾವಣಾ ಸಮಿತಿ ಸದಸ್ಯರ ನೇಮಕ ನಡೆದಿಲ್ಲ. ಹೀಗಾಗಿ 9ರಂದು ನಡೆಯುವ ಸಭೆ ಔಪಚಾರಿಕತೆಗೆ ಸೀಮಿತವಾದೆ ಎಂದು ತಿಳಿದು ಬಂದಿದೆ.
ಹಾಲಿ ಶಾಸಕರ ಸಮಸ್ಯೆ: ಇದರ ಜತೆಗೆ ಕಾಂಗ್ರೆಸ್ನ ಹಾಲಿ ಶಾಸಕರ ಪೈಕಿ ಕೆಲವರು ಈ ಬಾರಿ ಸೋಲಿನ ಭೀತಿ ಎದುರಿಸುತ್ತಿದ್ದಾರೆ. ಅವರನ್ನು ಮತ್ತೆ ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕೇ? ಬೇಡವೇ? ಎಂಬ ಬಗ್ಗೆ ರಾಜ್ಯ ಕಾಂಗ್ರೆಸ್ನಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಕೆಲವರು ಸಂಪ್ರದಾಯ ಮುರಿಯುವುದು ಬೇಡ ಎಂಬ ಅಭಿಪ್ರಾಯ ಸೂಚಿಸಿದ್ದರೆ, ಇನ್ನು ಕೆಲವು ಮುಖಂಡರು ಸೋಲುವವರಿಗೆ ಟಿಕೆಟ್ ಕೊಟ್ಟು ಅಧಿಕಾರ ಕಳೆದುಕೊಂಡು ದಶಮಾನೋತ್ಸವ ಆಚರಿಸಬೇಕೇ? ಎಂದು ಪ್ರಶ್ನಿಸುತ್ತಿದ್ದಾರೆ. ಸೋಲಿನ ಭೀತಿ ಎದುರಿಸುತ್ತಿರುವ 20 ಹಾಲಿ ಶಾಸಕರು ಬಿಸಿ ತುಪ್ಪವಾಗಿ ಪರಿಣಮಿಸಿದ್ದಾರೆ.
ಶೇ.40 ಸ್ಥಾನಕ್ಕೆ ಒಂದೇ ಹೆಸರು: ಅದೇ ರೀತಿ 2100 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರೂ ಶೇ.40 ರಷ್ಟು ಕ್ಷೇತ್ರಗಳಿಗೆ ವಿವಾದವಿಲ್ಲದೇ ಒಂದೇ ಹೆಸರನ್ನು ಹೈಕಮಾಂಡ್ಗೆ ಕಳುಹಿಸಿ ಕೊಡಲು ನಿರ್ಧರಿಸಲಾಗಿದೆ. ಅಂದರೆ ಇವು ಕಾಂಗ್ರೆಸ್ನ ಪಕ್ಕಾ ಗೆಲ್ಲುವ ಕುದುರೆಗಳ ಪಟ್ಟಿ. ಶೇ.30ರಷ್ಟು ಸ್ಥಾನಗಳಿಗೆ ಎರಡು ಹೆಸರು ಕಳುಹಿಸಲಾಗುತ್ತದೆ.
ಶೇ.10 ರಷ್ಟು ಸ್ಥಾನಗಳಿಗೆ ಮೂರು ಹಾಗೂ ಮೇಲ್ಪಟ್ಟು ಹೆಸರನ್ನು ಹೈಕಮಾಂಡ್ಗೆ ಕಳುಹಿಸಲು ನಿರ್ಧರಿಸಲಾಗಿದೆ. ಕಾಂಗ್ರೆಸ್ನ ಸೋಲುವ ಅಭ್ಯರ್ಥಿಗಳು ಇದೇ ಪಟ್ಟಿಯಲ್ಲಿ ಇರುತ್ತಾರೆ ಎಂಬುದು ಕುತೂಹಲಕಾರಿ ಸಂಗತಿ. ಅದೇ ರೀತಿ ಶೇ.10 ರಷ್ಟು ಸ್ಥಾನ ಹೊರಗಿನಿಂದ ಬರುವ ಗೆಲ್ಲುವ ಕುದುರೆಗಳಿಗೆ ಮೀಸಲಿಡಲಾಗುತ್ತಿದ್ದು, ಇನ್ನುಳಿದಿದ್ದು ಶಿಫಾರಸು ಪತ್ರ ಆಧರಿಸಿ ನಿರ್ಧಾರವಾಗಲಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.