ಬಿಜೆಪಿ-ಕೆಜೆಪಿ ಸಮರ ತಾತ್ಕಾಲಿಕ ಶಮನ
ಬೆಂಗಳೂರು: ಕೊನೆಗೂ ಬಿಜೆಪಿ ಸ್ವಲ್ಪ ಮಟ್ಟಿಗೆ ಸಮಾಧಾನದ ನಿಟ್ಟುಸಿರು ಬಿಟ್ಟಿದೆ. ಇದಕ್ಕೆ ಕಾರಣ ಪಕ್ಷದ ಮತ್ತಷ್ಟು ಶಾಸಕರು ಶನಿವಾರದೊಳಗೆ ರಾಜಿನಾಮೆ ನೀಡುತ್ತಾರೆ ಎಂಬ ವದಂತಿ ಸುಳ್ಳಾಗಿದೆ.
ಇದರಿಂದಾಗಿ ಬಜೆಟ್ ಮಂಡನೆಗೆ ಯಾವುದೇ ಅಡ್ಡಿ ಇಲ್ಲ. ಬಜೆಟ್ ಮಂಡನೆಯಾದ ಬಳಿಕ ಏನು ಬೇಕಾದರೂ ಆಗಲಿ ಎಂದುಕೊಂಡು ಸೋಮವಾರದಿಂದ ಆರಂಭವಾಗಲಿರುವ ಅಧಿವೇಶನಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಇದುವರೆಗೆ ಪಕ್ಷದ 14 ಶಾಸಕರು ರಾಜಿನಾಮೆ ನೀಡಿದ್ದು, ಈ ಪೈಕಿ 12 ಶಾಸಕರ ರಾಜಿನಾಮೆ ಅಂಗೀಕಾರವಾಗಿದೆ. ಉಳಿದಿಬ್ಬರ ರಾಜಿನಾಮೆ ಅಂಗೀಕಾರವಾದರೂ ಅದರಿಂದ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ಈ ಮಧ್ಯೆ ಶನಿವಾರದೊಳಗೆ ಇನ್ನಷ್ಟು ಶಾಸಕರು ರಾಜಿನಾಮೆ ನೀಡಲಿದ್ದಾರೆ ಎಂಬ ಕೆಜೆಪಿ ನಾಯಕರ ಹೇಳಿಕೆ ಸುಳ್ಳಾಗಿರುವುದು ಬಿಜೆಪಿಗೆ ಸಮಾಧಾನ ತಂದಿದೆ. ಆದರೂ ಬಜೆಟ್ ಮಂಡನೆಯಾಗಲು ಇನ್ನೂ ಐದು ದಿನ ಇರುವುದರಿಂದ ಅಷ್ಟರೊಳಗೆ ಇನ್ನೇನಾಗುವುದೋ ಎಂಬ ಸಣ್ಣ ಆತಂಕವಂತೂ ಉಳಿದುಕೊಂಡಿದೆ.
ಸಮರಕ್ಕೆ ತಾತ್ಕಾಲಿಕ ತೆರೆ: ಈ ಮಧ್ಯೆ ಶಾಸಕರಿಂದ ರಾಜಿನಾಮೆ ಕೊಡಿಸಿ ಸರ್ಕಾರ ಉರುಳಿಸುವ ವಿಚಾರದಲ್ಲಿ ಕೆಜೆಪಿ ಮತ್ತು ಬಿಜೆಪಿ ನಡುವಿನ ಸಮರಕ್ಕೆ ತಾತ್ಕಾಲಿಕ ತೆರೆ ಬಿದ್ದಂತಾಗಿದೆ.
ರಾಜಿನಾಮೆ ನೀಡಲು ಮುಂದಾಗಿದ್ದ ಶಾಸಕರ ಪೈಕಿ ಬಹುತೇಕರು ಉತ್ತರ ಕರ್ನಾಟಕ ಭಾಗದವರಾಗಿದ್ದು, ಆ ಭಾಗದ ಸಚಿವರೊಬ್ಬರೇ ನಡೆಸಿದ ಸಂಧಾನ ಯಶಸ್ವಿಯಾಗಿದೆ. ಮೇಲಾಗಿ ಅಧಿವೇಶನ ಮುಗಿದ ಬಳಿಕ ನಿಮ್ಮ ನಿರ್ಧಾರ ಕೈಗೊಳ್ಳಿ ಎಂದು ಈ ಸಚಿವರು ಶಾಸಕರಿಗೆ ಹೇಳಿದ್ದು, ಇದಕ್ಕೆ ಒಪ್ಪಿಕೊಂಡು ಅವರೆಲ್ಲರೂ ಬಜೆಟ್ ಮಂಡನೆಗೆ ಸಹಕರಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ರಾಜಿನಾಮೆ ಸ್ವೀಕಾರ: ಈ ಮಧ್ಯೆ ವಿಠಲ ಕಟಕದೊಂಡ ಮತ್ತು ಡಿ.ಎಸ್. ಸುರೇಶ್ ಅವರು ನೀಡಿರುವ ರಾಜಿನಾಮೆ ಸ್ವೀಕಾರವಾಗುವ ವಿಚಾರ ಇನ್ನೂ ಪ್ರಶ್ನಾರ್ಥಕವಾಗಿಯೇ ಇದೆ. ರಾಜಿನಾಮೆ ಸ್ವೀಕರಿಸುವಂತೆ ಸ್ಪೀಕರ್ ಮೇಲಿನ ಒತ್ತಡವೂ ಕಡಿಮೆಯಾಗಿದ್ದು, ಸೋಮವಾರ ಸ್ಪೀಕರ್ ಈ ಕುರಿತು ನಿರ್ಧಾರ ಕೈಗೊಳ್ಳುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ.
ಕಟಕದೊಂಡ ಅವರ ಬಲವಂತಕ್ಕೆ ಕಟ್ಟುಬಿದ್ದು ರಾಜಿನಾಮೆ ನೀಡಿದ್ದಾರೆ ಎಂದೂ ಸ್ಪೀಕರ್ ಅಭಿಪ್ರಾಯಪಟ್ಟಿದ್ದಾರೆ. ಅಂಗೀಕರಿಸುವಂತೆ ಒತ್ತಾಯ ಮಾಡಿದರೆ ಮಾತ್ರ ಈ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.