ಕಳೆಗುಂದಿದ 'ಸೌಂದರ್ಯಸೌಧ'
ನಿರ್ವಹಣೆ ಕೊರತೆಯಿಂದ ಮೆರುಗು ಕಳೆದುಕೊಳ್ಳುತ್ತಿದೆ ಶಕ್ತಿ ಕೇಂದ್ರ ವಿಧಾನಸೌಧ
ಬೆಂಗಳೂರು: ವರ್ಷದ ಮೊದಲ ಅಧಿವೇಶನಕ್ಕೆ ವಿಧಾನಸೌಧದ ಕೆಲವು ಭಾಗಗಳೇನೋ ಶೃಂಗಾರಗೊಂಡು ರಾಜ್ಯಪಾಲರು, ಮುಖ್ಯಮಂತ್ರಿ, ಮಂತ್ರಿಗಳು ಮತ್ತು ಶಾಸಕರ ಸ್ವಾಗತಕ್ಕೆ ಸಿದ್ಧವಾಗುತ್ತಿದೆ. ಆದರೆ, ಬಹುತೇಕ ಭಾಗಗಳು ನಿರ್ವಹಣೆ ಕೊರತೆಯಿಂದ ಕಳೆಗುಂದುತ್ತಿವೆ
ದೇಶದಲ್ಲೇ ಅತ್ಯಂತ ಸ್ಫುರದ್ರೂಪಿ ಮತ್ತು ವಿಶಿಷ್ಟವಾದ ಶಕ್ತಿಕೇಂದ್ರ ಎನಿಸಿಕೊಂಡಿರುವ ವಿಧಾನಸೌಧ ನಿರ್ವಹಣೆ ಕೊರತೆಯಿಂದ ದಿನಕಳೆದಂತೆ ತನ್ನ ಸೌಂದರ್ಯ ಕಳೆದುಕೊಳ್ಳುತ್ತಿದೆ
ಇತ್ತೀಚಿನ ದಿನಗಳಲ್ಲಿ ವಿಧಾನಸೌಧದ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಯಾವಾಗ ಕಟ್ಟಡದಲ್ಲಿ ರಾತ್ರಿ ವೇಳೆ ವಿದ್ಯುದ್ದೀಪಾಲಂಕಾರ ವ್ಯವಸ್ಥೆ ಸ್ಥಗಿತಗೊಳಿಸಲಾಯಿತೋ ನಂತರದಲ್ಲಿ ಕಟ್ಟಡದ ಒಳಭಾಗದಲ್ಲಿ ದುರಸ್ತಿ, ಪಾಲಿಶಿಂಗ್ ಮುಂತಾದ ಕೆಲಸಗಳು ಸಮರ್ಪಕವಾಗಿ ನಡೆಯದೆ ಒಳ ಆವರಣದ ಸೌಂದರ್ಯ ಹಾಳಾಗುತ್ತಿದೆ.
ತೇಪೆ ಹಾಕಿದಂತೆ ಕಾಣುವ ಮೆಟ್ಟಿಲುಗಳು: ಪೂರ್ವದ್ವಾರದಲ್ಲಿ ವಿಧಾನಸೌಧದ ಒಳಗಿರುವ ಮುಭಾಗದ ಮೆಟ್ಟಿಲುಗಳನ್ನು ಗಮನಿಸಿದರೆ ಯಾವುದೋ ರೋಗಕ್ಕೆ ತುತ್ತಾಗಿ ಮೈಯೆಲ್ಲಾ ಬಿಳುಚಿದವರಂತೆ ಕಾಣಿಸುತ್ತದೆ. ಇದು ಕೇವಲ ಮುಂಭಾಗದ ಮೆಟ್ಟಿಲುಗಳ ಪರಿಸ್ಥಿತಿ ಮಾತ್ರವಲ್ಲ, ಎಲ್ಲಾ ಕಡೆಯೂ ಇದೇ ರೀತಿ ಇದೆ.
ವಿಧಾನಸೌಧದ ಕಾರಿಡಾರ್ ಮತ್ತು ಮೆಟ್ಟಿಲುಗಳಿಗೆ ಬಿಳಿ ಮಿಶ್ರಿತ ಮೊಸಾಯಿಕ್ಗಳನ್ನು ಹಾಕಲಾಗಿದೆ. ಕೆಲವು ಮೆಟ್ಟಿಲುಗಳಲ್ಲಿ ಈ ಮೊಸಾಯಿಕ್ ಚಪ್ಪಡಿಗಳು ಕಿತ್ತುಹೋಗಿದ್ದು, ಆ ಜಾಗಕ್ಕೆ ಕಂದು ಮಿಶ್ರಿತ ಮೊಸಾಯಿಕ್ ಚಪ್ಪಡಿ ತುಂಡುಗಳನ್ನು ಅಳವಡಿಸಲಾಗಿದೆ. ಮೆಟ್ಟಿಲುಗಳ ಬಳಿ ವಿದ್ಯುತ್ ದೀಪ ಉರಿಸಿದರೆ ಮೆಟ್ಟಲುಗಳು ತೇಪೆ ಹಾಕಿದ ಬಟ್ಟೆಯಂತೆ ಕಾಣುತ್ತಿವೆ.
ಗಲೀಜು ತುಂಬಿದ ಕಿಟಕಿ, ಬಾಗಿಲು: ಇನ್ನು ವಿಧಾನಸೌಧದಲ್ಲಿರುವ ಕಚೇರಿಗಳ ಕಿಟಕಿ- ಬಾಗಿಲುಗಳ ಪರಿಸ್ಥಿತಿ ದೇವರಿಗೇ ಪ್ರೀತಿ. ಕಳೆದ ಕೆಲವು ವರ್ಷಗಳಿಂದ ಪಾಲಿಶ್ ಇಲ್ಲದೆ ಬಹುತೇಕ ಕಿಟಕಿ, ಬಾಗಿಲುಗಳು ನಿಜವಾದ ಬಣ್ಣ ಕಳೆದುಕೊಂಡು ಮಣ್ಣಿನ ಇಲ್ಲವೇ ಕಪ್ಪು ಬಣ್ಣಕ್ಕೆ ತಿರುಗಿವೆ.
ಬಹುತೇಕ ಕಿಟಕಿ, ಬಾಗಿಲುಗಳನ್ನು ತೇಗದ ಮರಗಳಿಂದ ತಯಾರಿಸಲಾಗಿದೆ. ಹೀಗಾಗಿ ಹಲವು ದಶಕಗಳ ಹಿಂದೆ ತಯಾರಿಸಿದ್ದಾರೂ ಇವು ಈಗಲು ಗಟ್ಟಿಯಾಗಿವೆ. ಆದರೆ, ಕಾಲಕಾಲಕ್ಕೆ ಪಾಲಿಶ್ ಮಾಡದ ಕಾರಣ ಮುರುಕಲು ಮರದಿಂದ ಸಿದ್ಧಪಡಿಸಿದಂತೆ ಕಾಣುತ್ತಿವೆ.
ಇನ್ನು ವಿಧಾನಸೌಧದ ಗೋಡೆ, ಕಾಂಪೌಂಡ್ ಸೇರಿದಂತೆ ಎಲ್ಲಾ ನಿರ್ಮಾಣಗಳೂ ತಮ್ಮ ಮೂಲ ಬಣ್ಣ ಕಳೆದುಕೊಂಡು ಹಳೇ ಕಾಲದ, ಯಾರೂ ಬಳಸದ ಕಟ್ಟಡವೇನೋ ಎನ್ನುವಂತೆ ಭಾಸವಾಗುತ್ತಿದೆ.
ನಿರ್ವಹಣೆಗೆ ಕ್ರಮವೇ ಇಲ್ಲ: ವಿಧಾನಸೌಧದಲ್ಲಿ ಏನೇ ಕಾಮಗಾರಿ ಆಗಬೇಕಿದ್ದರೂ ಅದನ್ನು ಲೋಕೋಪಯೋಗಿ ಇಲಾಖೆಯೇ ನೋಡಿಕೊಳ್ಳಬೇಕು. ಆದರೆ, ಒಟ್ಟಾರೆ ನಿರ್ವಹಣೆ ಮಾತ್ರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಡಿಪಿಎರ್) ಇಲಾಖೆಯದ್ದು. ಲೋಕೋಪಯೋಗಿ ಇಲಾಖೆಯೇ ಆಗಲಿ, ಯಾರೇ ಆಗಲಿ, ಒಂದು ಸಣ್ಣ ಕಲ್ಲು, ಮರದ ತುಂಡನ್ನು ಒಂದು ಭಾಗದಿಂದ ಎತ್ತಿ ಇನ್ನೊಂದು ಭಾಗದಲ್ಲಿಡಬೇಕಾದರೂ ಡಿಪಿಎಆರ್ ಅನುಮತಿ ಪಡೆದುಕೊಳ್ಳಲೇ ಬೇಕು.
ನಿರ್ವಹಣೆ ಬಗ್ಗೆ ಲೋಕೋಪಯೋಗಿ ಇಲಾಖೆಯವರನ್ನು ಪ್ರಶ್ನಿಸಿದರೆ, ಡಿಪಿಎಆರ್ನವರು ಅನುಮತಿ ನೀಡಬೇಕು ಎನ್ನುತ್ತಾರೆ. ಡಿಪಿಎಆರ್ ಅಧಿಕಾರಿಗಳನ್ನು ಪ್ರಶ್ನಿಸಿದರೆ ಇದಕ್ಕೆ ಪ್ರತ್ಯೇಕ ಅನುದಾನ ನೀಡಿಲ್ಲ ಎಂಬ ಉತ್ತರ ಬರುತ್ತದೆ. ಹೀಗಾಗಿ ವಿಧಾನಸೌಧದ ಕಿಟಕಿ, ಬಾಗಿಲುಗಳಿಗೆ ಪಾಲಿಶ್ ಮಾಡಿಸಬೇಕು. ಕಟ್ಟಡವನ್ನು ಸಮರ್ಪಕ ರೀತಿಯಲ್ಲಿ ನಿರ್ವಹಣೆ ಮಾಡಬೇಕು ಎಂದು ಹಲವು ಬಾರಿ ಡಿಪಿಎಆರ್ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ ಎನ್ನುತ್ತಾರೆ ವಿಧಾನಸೌಧದ ಸಿಬ್ಬಂದಿ.
ಈ ಮಧ್ಯೆ ಕೆಲವು ಸಿಬ್ಬಂದಿ ಡಿಪಿಎಆರ್ ಅಧಿಕಾರಿಗಳನ್ನು ಸಂಪರ್ಕಿಸಿ, ತಕ್ಷಣವೇ ಸಮರ್ಪಕ ನಿರ್ವಹಣೆಗೆ ಕ್ರಮ ಕೈಗೊಳ್ಳದಿದ್ದರೆ ವಿಧಾನಮಂಡಲ ಅಧಿವೇಶನ ಸಂದರ್ಭದಲ್ಲಿ ಸದಸ್ಯರ ಮೂಲಕ ಪ್ರಸ್ತಾಪಿಸಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ. ಆ ಸಂದರ್ಭದಲ್ಲಿ, ಅಂತಹ ಕೆಲಸಕ್ಕೆ ಕೈಹಾಕಿ ಮುಜುಗರ ಉಂಟುಮಾಡಬೇಡಿ. ಶೀಘ್ರವೇ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂಬ ಉತ್ತರ ಬಂದಿತ್ತಾದರೂ ಪ್ರಯೋಜನ ಮಾತ್ರ ಶೂನ್ಯ ಎಂದು ಬೇಸರ ವ್ಯಕ್ತಪಡಿಸುತ್ತಾರೆ.
- ಪ್ರದೀಪ್ ಕುಮಾರ್ ಎಂ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.