ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ನಗರ

ನಕಲಿ ಭೂಮಾಪಕರು ಗಡಗಡ

Parashurama
Updated On : 16 Feb 2013, 11:33 am

ಬೆಂಗಳೂರು: ಭೂಮಾಪಕರ ನೇಮಕ ಸಂದರ್ಭದಲ್ಲಿ ಅನುಭವಸ್ಥರನ್ನು ಪರಿಗಣಿಸಬೇಕು ಎಂದು ಹೈಕೋರ್ಟ್ ನೀಡಿರುವ ತೀರ್ಪು ಹುದ್ದೆ ಆಕಾಂಕ್ಷಿಗಳಲ್ಲಿ ಸಂತಸ ತಂದಿರುವ ಬೆನ್ನಲ್ಲೇ, ನಕಲಿ ಸೇವಾ ಪ್ರಮಾಣಪತ್ರ ಸಲ್ಲಿಸಿ ಈಗಾಗಲೇ ಕೆಲಸ ಗಿಟ್ಟಿಸಿಕೊಂಡಿರುವ ಭೂಮಾಪಕರಲ್ಲಿ ನಡುಕ ಆರಂಭಗೊಂಡಿದೆ.
ಭೂಮಾಪನ ಇಲಾಖೆಯಲ್ಲಿನ 1,834 ಭೂಮಾಪಕರ ಹುದ್ದೆಗಳಿಗೆ ಕರೆದಿದ್ದ ಅರ್ಜಿಗೆ ಅನೇಕ ಆಕಾಂಕ್ಷಿಗಳು ನಕಲಿ ಸೇವಾನುಭವ ಪ್ರಮಾಣಪತ್ರ ಸಲ್ಲಿಸಿ ಪರೀಕ್ಷೆ ಬರೆದಿರುವುದು ಬೆಳಕಿಗೆ ಬಂದಿದೆ. ಇವರಲ್ಲಿ ಅನೇಕರು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಕೆಲವರನ್ನು ಹುದ್ದೆಗೆ ಆಯ್ಕೆ ಮಾಡಲಾಗಿದೆ.
ಈ ನಡುವೆ, ಭೂಮಾಪಕರ ನೇಮಕ ಸಂದರ್ಭದಲ್ಲಿ, ವಿವಿಧ ಇಲಾಖೆಗಳಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವವರನ್ನು ಪರಿಗಣಿಸಬೇಕು ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಇದು ಇಲಾಖೆಯ ಕಣ್ಣಿಗೆ ಮಣ್ಣೆರಚಿ ಹುದ್ದೆ ಗಳಿಸುವ ಯತ್ನ ನಡೆಸಿದ್ದ ಅನೇಕ ಆಕಾಂಕ್ಷಿಗಳ ಕನಸಿಗೆ ತಣ್ಣೀರೆರಚಿದೆ.
ಆಗಿದ್ದೇನು?: 2011ರ ಜೂನ್‌ನಲ್ಲಿ ಭೂಮಾಪಕರ ಹುದ್ದೆಗೆ ಅರ್ಜಿ ಕರೆದಿದ್ದ ಇಲಾಖೆ, ನಿರ್ದಿಷ್ಟ ವಿದ್ಯಾರ್ಹತೆಯ ಜತೆಗೆ ಕನಿಷ್ಠ ಎರಡು ವರ್ಷಗಳ ಸೇವಾನುಭವದ ಅರ್ಹತೆಯನ್ನು ಕೋರಿತ್ತು. ಆದರೆ, ಇಲ್ಲಿಯವರೆಗೆ ಕೇವಲ ಸರ್ವೆ ವಿಷಯದಲ್ಲಿ ವೃತ್ತಿಪರ ಕೋರ್ಸ್ ಪೂರೈಸಿದವರಿಗೆ ಮಾತ್ರ ಸೀಮಿತವಾಗಿದ್ದ ಈ ಹುದ್ದೆಯನ್ನು, ಡಿಪ್ಲೊಮಾ, ಐಟಿ, ಬಿಟೆಕ್, ವಿಜ್ಞಾನ ಪದವಿ ಮತ್ತಿತರ ಪದವಿಗಳನ್ನು ಹೊಂದಿರುವರಿಗೆ ಕೂಡ ವಿಸ್ತರಿಸಿತ್ತು. ಇದನ್ನು ಪ್ರಶ್ನಿಸಿ ವಿವಿಧ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಅನುಭವಿ ಭೂಮಾಪಕರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಇದನ್ನು ಪರಿಗಣಿಸಿರುವ ಹೈಕೋರ್ಟ್ 2013ರ ಜನವರಿ 17ರಂದು ವಿವಿಧ ಇಲಾಖೆಗಳಲ್ಲಿ ಹಲವು ವರ್ಷಗಳಿಂದ ಭೂಮಾಪಕರಾಗಿ ಕಾರ್ಯನಿರ್ವಹಿಸುತ್ತಿರುವರಿಗೆ ಹೆಚ್ಚಿನ ಮಾಹಿತಿ ಹಾಗೂ ಅನುಭವ ಇರುವುದರಿಂದ ಅವರನ್ನು ಆಯ್ಕೆ ಸಂದರ್ಭದಲ್ಲಿ ಪರಿಗಣಿಸಬೇಕು ಎಂದು ಇಲಾಖೆಗೆ ಆದೇಶಿಸಿತು.
ಈ ನಡುವೆ, ಇತ್ತೀಚೆಗಷ್ಟೇ ವೃತ್ತಿಪರ ಕೋರ್ಸ್ ಸೇರಿದಂತೆ ಇತರ ಪದವಿ ಪೂರೈಸಿರುವ ಆಕಾಂಕ್ಷಿಗಳು, ರಾಜ್ಯ ಗೃಹ ಮಂಡಳಿ, ಕಾರ್ಖಾನೆಗಳು, ರಿಯಲ್ ಎಸ್ಟೇಟ್ ಹಾಗೂ ಕೆಐಎಡಿಬಿ ಮತ್ತಿತರರ ಸಂಸ್ಥೆಗಳಿಂದ ಎರಡು ವರ್ಷದ ಸೇವಾನುಭವದ ನಕಲಿ ಪ್ರಮಾಣಪತ್ರ ಸಲ್ಲಿಸಿ ಪರೀಕ್ಷೆ ಬರೆದಿದ್ದರು. ಇವರಲ್ಲಿ ಅನೇಕರು ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದು, ಹುದ್ದೆಗೆ ಆಯ್ಕೆಯಾಗಿದ್ದಾರೆ.
ಇದೀಗ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ, ಭೂಮಾಪನ ಇಲಾಖೆ ಎಲ್ಲಾ ಆಕಾಂಕ್ಷಿಗಳ ಸೇವಾನುಭವದ ಪ್ರಮಾಣಪತ್ರದ ಪರಿಶೀಲನೆಗೆ ಮುಂದಾಗಿದೆ. ಆಕಾಂಕ್ಷಿಗಳಿಗೆ ಪ್ರಮಾಣಪತ್ರ ನೀಡಿರುವ ಸಂಸ್ಥೆಗಳನ್ನು ನೇರವಾಗಿ ಸಂಪರ್ಕಿಸಿ ಮಾಹಿತಿ ಪಡೆಯಲು ಇಲಾಖೆ ನಿರ್ಧರಿಸಿದೆ.
ಆಕಾಂಕ್ಷಿಗಳಿಗೆ ದೊರೆತಿರುವ ವೇತನ, ಐಎಸ್‌ಐ, ರಜೆ ಮತ್ತಿತರರ ವಿವರಗಳನ್ನು ಪಡೆಯಲು ಯೋಜನೆ ರೂಪಿಸಿದೆ. ಒಂದು ಅಂದಾಜಿನ ಪ್ರಕಾರ, ಸುಮಾರು 100ಕ್ಕೂ ಹೆಚ್ಚು ಆಕಾಂಕ್ಷಿಗಳು ನಕಲಿ ಪ್ರಮಾಣಪತ್ರ ನೀಡಿದ್ದಾರೆ. ಇವರ ಪ್ರಮಾಣ ಪತ್ರಗಳು ಹಾಗೂ ದಾಖಲೆಗಳು ಪೊಲೀಸ್ ಪರಿಶೀಲನೆಯಲ್ಲಿವೆ. ಇದು ನಕಲಿ ಪ್ರಮಾಣಪತ್ರ ಸಲ್ಲಿಸಿರುವ ಆಕಾಂಕ್ಷಿಗಳಿಗೆ ಬಿಸಿತುಪ್ಪವಾಗಿ ಪರಿಣಮಿಸುವುದರಲ್ಲಿ ಸಂಶಯವಿಲ್ಲ.
ಇನ್ನಷ್ಟು ಗೊಂದಲಗಳು: ಭೂಮಾಪಕರ ಹುದ್ದೆಗೆ ಅರ್ಜಿ ಆಹ್ವಾನಿಸಿದಾಗ ವಯಸ್ಸಿನ ಮಿತಿಯನ್ನು 40ಕ್ಕೆ ನಿಗದಿಪಡಿಸಿದ್ದ ಇಲಾಖೆ, ನಂತರ ಏಕಾಏಕಿ ಅದನ್ನು 38ಕ್ಕಿಳಿಸಿದೆ. ಇದರಿಂದ 38ರಿಂದ 40ರ ವಯಸ್ಸಿನ ಆಕಾಂಕ್ಷಿಗಳಿಗೆ ನಿರಾಸೆಯಾಗಿದ್ದು, ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ.

-ಸುಪ್ರೀತಾ ಹೆಬ್ಬಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement