ಅರಸನಹಳ್ಳಿ ರೈತರ ಪಂಪ್ ಸೆಟ್ ನಾಶ
ಸೂಲಿಬೆಲೆ: ಬಿಜೆಪಿಗೆ ಸೇರಿದ ವ್ಯಕ್ತಿಯೊಬ್ಬರ ತೋಟದಲ್ಲಿ ಅಳವಡಿಸಿದ ನೀರಿನ ಪಂಪ್ಸೆಟ್ ಅನ್ನು ದುಷ್ಕರ್ಮಿಗಳು ನಾಶ ಮಾಡಿರುವ ಘಟನೆ ಅರಸನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಸುಮಾರು 7 ಲಕ್ಷದಷ್ಟು ನಷ್ಟವಾಗಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಫೆ.8ರಂದು ಸಂಕ್ರಾಂತಿ ಹಬ್ಬದ ವಿಚಾರದಲ್ಲಿ ಘರ್ಷಣೆಯಾಗಿ ಹೊಡೆದಾಡಿಕೊಂಡಿದ್ದ ಅರಸನಹಳ್ಳಿ ಗ್ರಾಮದ ಬಿಜೆಪಿ ಮತ್ತು ಕಾಂಗ್ರೆಸ್ ಗುಂಪು ದ್ವೇಷದ ರಾಜಕಾರಣಕ್ಕೆ ಇಳಿದಿವೆ ಎಂಬುದು ಕೇಳಿ ಬಂದಿರುವ ಆರೋಪ. ಅರಸನಹಳ್ಳಿ ಗ್ರಾಮದ ಡೈರಿ ಕಾರ್ಯದರ್ಶಿ ಜಯಚಂದ್ರ ಅವರಿಗೆ ಸೇರಿದ ಎರಡು ಕೊಳವೆ ಬಾವಿಗಳಿಗೆ ಅಳವಡಿಸಿದ ನೀರಾವರಿ ಪಂಪ್ ಸೆಟ್ ಮೋಟಾರನ್ನು ಫೆ.15 ರ ರಾತ್ರಿ ನಾಶ ಮಾಡಿ ಅದರ ವಸ್ತುಗಳನ್ನು ಕೊಳವೆ ಬಾವಿ ಒಳಗೆ ಇಳಿಬಿಟ್ಟಿದ್ದು ಸಂಪೂರ್ಣ ನಾಶವಾಗಿದೆ. ಇದರಿಂದ ಸುಮಾರು 7 ಲಕ್ಷದಷ್ಟು ನಷ್ಟ ಉಂಟಾಗಿ ಎರಡು ಎಕರೆಯಲ್ಲಿರುವ ಬಾಳೇ ತೋಟಕ್ಕೆ ನೀರಿಲ್ಲದೆ ಒಣಗುವಂತಾಗಿದೆ. ಹೊಸದಾಗಿ ಬೆಳೆ ಬೆಳೆಯಲು ನೀರಿಲ್ಲದಂತಾಗಿದೆ. ಸಂಕ್ರಾಂತಿ ಘರ್ಷಣೆ ನಂತರ ದ್ವೇಷವನ್ನು ಸಾಧಿಸುತ್ತಿರುವ ಕಾಂಗ್ರೆಸ್ ಗುಂಪಿನವರು ರೈತರ ತೋಟಗಳನ್ನು ಟಾರ್ಗೆಟ್ ಮಾಡಿಕೊಂಡು ನೀರಾವರಿ ಪಂಪ್ ಸೆಟ್ಗಳನ್ನು ನಾಶ ಮಾಡುತ್ತಿರುವುದು ಹೇಡಿತನದ ಕೆಲಸವಾಗಿದೆ ಎಂದು ಜಯಚಂದ್ರ ಆರೋಪಿಸಿದ್ದಾರೆ.