ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ನಗರ

'ಈ ಕನ್ನಡ' ಅಳಿಸಿ ಸರ್ವಜ್ಞ

Parashurama
Updated On : 18 Feb 2013, 1:01 am

ಎಲ್ಲರೂ ಕನ್ನಡ ಉಳಿಸಿ, ಕನ್ನಡ ಬೆಳೆಸಿ ಎಂದು ಆಗ್ರಹಿಸುತ್ತಿದ್ದರೆ, ನಗರದ ಬಿಟಿಎಂ ಬಡಾವಣೆಯಲ್ಲಿ ಮಾತ್ರ ದಯವಿಟ್ಟು 'ಈ ಕನ್ನಡ'ವನ್ನು ಅಳಿಸಿ ಎಂದು ಕೇಳಿಕೊಳ್ಳುತ್ತಿದ್ದಾರೆ!
ಅಚ್ಚರಿ ಪಡಬೇಡಿ. ಇದಕ್ಕೆ ಕಾರಣ ಕನ್ನಡ ಭಾಷೆಗೆ 12 ಅರ್ಥ ಕಲ್ಪಿಸುವ ಕೆಲಸವನ್ನು ಬಿಬಿಎಂಪಿ ಬಿಟಿಎಂ ಬಡಾವಣೆಯಲ್ಲಿ ಮಾಡಿದೆ. ಕನ್ನಡ ಪ್ರೇಮ ಹೆಚ್ಚಿಸಲು ಬಿಬಿಎಂಪಿ ಫುಟ್ಪಾತ್ನ ಗಿಡಗಳ ಕಬ್ಬಿಣದ ಬೇಲಿಯ ಮೇಲೆ ಸರ್ವಜ್ಞನ ವಚನಗಳನ್ನು ಬರೆದು ಹಾಕಿಸಿದೆ. ಕನ್ನಡ ಉಳಿಸಿ, ಬೆಳೆಸುವ ನೆಪದಲ್ಲಿ ಕನ್ನಡದ ಜತೆಗೆ ಸರ್ವಜ್ಞನನ್ನೂ ಅವಮಾನಿಸುವ ಕೆಲಸ ಮಾಡಲಾಗಿದೆ.
ಕೆಲವು ಸ್ಯಾಂಪಲ್ ಇಲ್ಲಿದೆ ನೋಡಿ...: 'ಉಪ್ಪು ಇಲ್ಲದ ಊಟವು, ಕಣ್ಣಿಗೆ ಚಂದ ಕಾಣದಂಥ ಹೆಂಗಸು, ತೊಪ್ಪಲದಲ್ಲಿಯ ನೀರು ಹಾಗೂ  ತುದಿಯಲಿಯ ಕಬ್ಬು ಇವು ನಾಲ್ಕು ತೀರಾ ಸಪ್ಪೆಯಾದಂಥವಗಳು- ಸವಜ್ಞ'
"ಕಲ್ಲಿನೊಳಗೆ ಹುಟ್ಟಿ ಅಲ್ಲಿಯೇ ಸಾಯುವ ಕಪ್ಪೆಗೆ ತಾಯಿ ತಂದೆ ಯಾರು ಇಲ್ಲ, ಆದರೆ ಹಂಸಪಕ್ಷಿಯು ಎಲ್ಲಿದ್ದರೂ ಅದು ಪವಿತ್ರವೆಂದೇ ಎಣಿಸಲ್ಪಡುವುದು- ಸರ್ವಜ್ಞ"
ಇದು ಬಿಬಿಎಂಪಿ ಕನ್ನಡ ಪ್ರೇಮ ಮತ್ತು ಕನ್ನಡ ಜ್ಞಾನ!
ಸರ್ವಜ್ಞನ ವಚನಗಳನ್ನು ಮನೆಮನೆಗೂ ತಲುಪಿಸುತ್ತಿದ್ದೇವೆ ಎಂದು ಬೆನ್ನು ತಟ್ಟಿಕೊಳ್ಳುವ ಧಾವಂತದಲ್ಲಿ ತಾವೇನು ಹೇಳುತ್ತಿದ್ದೇವೆ ಎಂಬುದನ್ನೂ ಪಾಲಿಕೆ ಮರೆತಂತಿದೆ. ಇಂತಹ ಅಸಂಬದ್ಧಗಳು ಬಿಟಿಎಂ ಲೇಔಟ್ನಲ್ಲಿ ಸಾಕಷ್ಚು ಕಡೆ ಕಾಣಬಹುದು. ಅದರಲ್ಲಿಯೂ ಬಿಟಿಎಂ ಪೆಟ್ರೋಲ್ ಬಂಕ್ ಹಿಂಭಾಗದ ತಾವರೆಕೆರೆಗೆ ಹೋಗುವ ಮಾರ್ಗದಲ್ಲಿ ಇಂತಹ ಅರ್ಥಹೀನ ವ್ಯಾಕ್ಯಗಳನ್ನು ಸಾಲು ಸಾಲಾಗಿ ಕಾಣಬಹುದು.
ಕೊನೆಯಲ್ಲಿ ಮಾತ್ರ: ಮನಸೋಇಚ್ಛೆ ಬರೆಯಬಹುದು ಕೊನೆಯಲ್ಲಿ ಸರ್ವಜ್ಞ ಸೇರಿಸಿದರಾಯಿತು ಎಂಬುದು ಇವರು ಯೋಚನೆ. ಐಟಿ ಕಂಪನಿಗಳೇ ಹೆಚ್ಚಾಗಿರುವ ಪ್ರದೇಶದಲ್ಲಿ ಕನ್ನಡದ ಸರ್ವಜ್ಞನನ್ನು ನೆನೆದು ಕನ್ನಡ ಪ್ರೇಮ ಮೆರೆಸಲು ಪಾಲಿಕೆ ಸದಸ್ಯರು ಕಸರತ್ತು ನಡೆಸಿದ್ದಾರೆ. ಕಸರತ್ತು ಮಾಡುವಾಗ ಕೊಂಚ ಎಡವಟ್ಟಾಗಿದೆ. ಕೇವಲ ಇದೊಂದೇ ಶಬ್ದದಿಂದ ಈ ರೀತಿ ಹೇಳಿಲ್ಲ, ಇಲ್ಲಿ ಅಂತಹ ಹಲವು ಸುಳ್ಳು ಸರ್ವಜ್ಞರು ತಮ್ಮ ಪಾಂಡಿತ್ಯ ಪ್ರದರ್ಶನ ಮಾಡಿದ್ದಾರೆ.
'ಮಾತು ಬಲ್ಲವನಿಗೆ ಕಪ್ಪಲಿಯ ನೀರು ಸುರಿದಂತೆ, ಆದರೆ ಮಾತಾಡಲು ಅರಿಯದವನಿಗೆ ಬರಿಯಾ ಕಪ್ಪಲಿಯ ಜೋತು ಬಿದ್ದಂತೆಯೇ ಸರಿ- ಸರ್ವಜ' ಇದು ಅಲ್ಲೇ ನಾಲ್ಕು ಹೆಜ್ಜೆ ನಡೆದರೆ ಮತ್ತೊಂದು ಗಿಡಕ್ಕೆ ಇರುವ ಉಕ್ತಿ. ಇದನ್ನು ಅರ್ಥ ಮಾಡಿಕೊಂಡವರೇ ಜಾಣರು! ಸರ್ವಜ್ಞನ ವಚನಗಳನ್ನು ಜನಪ್ರಿಯಗೊಳಿಸುತ್ತಿದ್ದಾರೋ ಅಥವಾ ವಿರೂಪಗೊಳಿಸುತ್ತಿದ್ದಾರೋ ಎಂದೇ ತಿಳಿಯುವುದಿಲ್ಲ.
ಇಂತಹ ಅಪಚಾರಗಳನ್ನು ಮಾಡಿ ಇದಕ್ಕೆ ಸಂಬಂಧಪಟ್ಟ ಪಾಲಿಕೆ ಅಧಿಕಾರಿಗಳು ಇದೇ ರಸ್ತೆಯಲ್ಲಿಯೇ ನಿತ್ಯ ಓಡಾಡುತ್ತಾರೆ. ಆದರೆ ಇದನ್ನು ಬರೆಸುವ ಕನ್ನಡ ಪ್ರೇಮಿಗಳು ಇದರ ಸತ್ಯಾಸತ್ಯತೆಯ ಕುರಿತು ಕನಿಷ್ಠ ತಿಳಿವಳಿಕೆ ಸಹ ಪಡೆದಿಲ್ಲ. 6 ತಿಂಗಳ ಹಿಂದೆಯೇ ನಮ್ಮ ಗಮನಕ್ಕೆ ಬಂದಿದೆ ಎಂದು ಒಪ್ಪಿಕೊಳ್ಳುವ ಪಾಲಿಕೆ ಸದಸ್ಯರು ಶೀಘ್ರದಲ್ಲಿ ಸರಿಮಾಡುತ್ತೇವೆ ಎಂಬ ಆಶ್ವಾಸನೆ ನೀಡುತ್ತಾರೆ. ನಾವು ನೀಡಿದ ವಾಕ್ಯಗಳನ್ನು ತಪ್ಪಾಗಿ ಬರೆದಿದ್ದಾರೆ ಎಂದು ಹೇಳುತ್ತಾರೆ. ಹಾಗಾದರೆ, ಇಂತಹ ಅಸಂಬಂದ್ಧ ವ್ಯಾಖ್ಯಾನಗಳನ್ನು ಕೊಟ್ಟವರು ಯಾರು ಎಂಬುದನ್ನು ಅವರೇ ಹೇಳಬೇಕು.
ಇಲ್ಲಿ ಕೇವಲ ವಾಕ್ಯ ದೋಷಗಳು ಮಾತ್ರವಲ್ಲ, ಅಕ್ಷರದೋಷಗಳು, 'ಅ' ಬದಲು 'ಹ' ವನ್ನು ಬಳಸಿದ ಸಾಲುಗಳೂ ಇವೆ.
'ಕುಂಡ ವಿಲದ ಹೋಮ, ಬಂಡಿಯಿಲದ ಬೇಸಾಯ', 'ಬಲವರು ಯಾರು ಇಲ್ಲ', 'ಎಲ್ಲಾ ಬಲವರು ಯಾರು ಇಲ್ಲ', 'ಹೆಂಡತಿಗೆ ಹಂಜುವ', 'ಸಿರಿಬಂದ ಕಲಕ್ಕೆ' ಇಂತಹ ಸುಮಾರು 20ಕ್ಕಿಂತ ಹೆಚ್ಚು ತಪ್ಪುಗಳು ದೊರೆಯುತ್ತವೆ. ಆದರೆ ಇದರ ಸತ್ಯಾಸತ್ಯೆಯನ್ನು ಪರೀಕ್ಷಿಸುವವರು ಕಣ್ಣುಚ್ಚಿ ಕುಳಿತಿರುವುದೇ ಕನ್ನಡಕ್ಕೆ ಪಾಲಿಕೆ ಮಾಡುತ್ತಿರುವ ಕನ್ನಡ ಸೇವೆ.
-ಅರ್ಪಿತಾ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement