ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ನಗರ

ಎತ್ತಿನ ಹೊಳೆಗೆ ಸಂಹಿತೆ ಒಡ್ಡು

Parashurama
Updated On : 18 Feb 2013, 1:03 am

ಬೆಂಗಳೂರು: ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷೆಯಾಗಿದ್ದ ಎತ್ತಿನಹೊಳೆ ಯೋಜನೆಯ ಶಂಕುಸ್ಥಾಪನೆಗೆ ಈಗ ನಗರ ಸ್ಥಳೀಯ ಸಂಸ್ಥೆ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗಿದೆ.
ಬರಪೀಡಿತ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಎತ್ತಿನಹೊಳೆ ಯೋಜನೆಗೆ ತಾವು ಅಧಿಕಾರದಿಂದ ಕೆಳಗಿಳಿಯುವ ಮುನ್ನ ಶಂಕುಸ್ಥಾಪನೆ ನೆರವೇರಿಸಬೇಕು ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಮಹದಾಸೆಯಾಗಿತ್ತು.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ 8323 ಕೋಟಿ ಮೊತ್ತದ ಎತ್ತಿನ ಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿಗೆ ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ಮೊದಲ ವಾರದಲ್ಲಿ ಚಾಲನೆ ಸಿಗಬೇಕಿತ್ತು.
ಏಕೆಂದರೆ, ಮೊದಲ ಹಂತದ 3269 ಕೋಟಿ ವೆಚ್ಚದ ಕಾಮಗಾರಿಗೆ ಡಿ.ವಿ. ಸದಾನಂದಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ 2012ರ ಜುಲೈ ತಿಂಗಳಲ್ಲಿ ಅನುಮೋದನೆ ನೀಡಲಾಗಿತ್ತು. ಅಷ್ಟೇ ಅಲ್ಲ, ಮೊದಲ ಹಂತದಲ್ಲಿ 2670 ಕೋಟಿ ವೆಚ್ಚದಲ್ಲಿ ಹರವನಹಳ್ಳಿ ವಿತರಣಾ ತೊಟ್ಟಿಯವರೆಗೆ ಲಿಫ್ಟ್ ಕಾಮಗಾರಿಗಳನ್ನು ಕೈಗೊಳ್ಳುವ ಕಾರ್ಯ ಆರಂಭಿಸಲು 2013-14ನೇ ಸಾಲಿನ ಬಜೆಟ್‌ನಲ್ಲಿ 850 ಕೋಟಿ ಅನುದಾನ ನಿಗದಿಪಡಿಸಲಾಗಿತ್ತು.
ಜತೆಗೆ ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ಮೊದಲ ವಾರದಲ್ಲಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವ ಉದ್ದೇಶವನ್ನು ಸರ್ಕಾರ ಹೊಂದಿತ್ತು. ಜತೆಗೆ ಏಪ್ರಿಲ್‌ನಲ್ಲಿ ಬಜೆಟ್‌ನಲ್ಲಿ ಮೀಸಲಾಗಿರುವ 850 ಕೋಟಿ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸುವ ಬಗ್ಗೆ ಯೋಚಿಸಲಾಗಿತ್ತು. ವಿಧಾನಸಭೆ ಚುನಾವಣೆಗೆ ಮುನ್ನ ಕಾಮಗಾರಿ ಆರಂಭವಾದರೆ ಎತ್ತಿನಹೊಳೆ ಯೋಜನೆಯ ಅನುಕೂಲ ಪಡೆದುಕೊಳ್ಳುವ ಜಿಲ್ಲೆಗಳಲ್ಲಿ ಬಿಜೆಪಿಗೆ ಅನುಕೂಲವಾಗಬಹುದು ಎಂಬುದು ಸರ್ಕಾರದ ನಿರೀಕ್ಷೆಯಾಗಿತ್ತು.
ಆದರೆ, ಆಡಳಿತ ಮತ್ತು ಪ್ರತಿಪಕ್ಷಗಳು ಸೇರಿದಂತೆ ಸರ್ಕಾರದ ವಿರೋಧದ ನಡುವೆಯೂ ರಾಜ್ಯ ಚುನಾವಣಾ ಆಯೋಗ ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ಅಧಿಸೂಚನೆ ಹೊರಡಿಸಿರುವುದರಿಂದ ಶನಿವಾರದಿಂದಲೇ ನೀತಿ ಸಂಹಿತೆ ಜಾರಿಯಾಗಿದೆ. ಈ ಯೋಜನೆಯ ಅನುಕೂಲ ಗ್ರಾಮೀಣ ಪ್ರದೇಶಗಳ ಜತೆಗೆ ನಗರ ಪ್ರದೇಶಗಳಿಗೂ ಸಿಗುವುದರಿಂದ ಯೋಜನೆಯ ಕಾರ್ಯಾರಂಭಕ್ಕೆ ನೀತಿ ಸಂಹಿತೆ ಅಡ್ಡಿಯಾಗಲಿದೆ. ಇದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೇರಿದಂತೆ ಆಡಳಿತ ಪಕ್ಷಕ್ಕೆ ನಿರಾಸೆ ಉಂಟುಮಾಡಿದೆ.
ನೇತ್ರಾವತಿ ತಿರುವು ಬದಲು ಎತ್ತಿನಹೊಳೆ: ಪಶ್ಚಿಮ ಘಟ್ಟಗಳಿಂದ ಸಮುದ್ರಕ್ಕೆ ಹರಿದು ಹೋಗುವ ನೀರನ್ನು ಬಯಲುಸೀಮೆಯೆ 9 ಜಿಲ್ಲೆಗಳಿಗೆ ಒದಗಿಸಲು ಪರಮಶಿವಯ್ಯ ನೀಡಿರುವ ನೇತ್ರಾವತಿ ತಿರುವು ಯೋಜನೆ ಜಾರಿಗೊಳಿಸುವಂತೆ ಆ ಭಾಗದ ಜನರಿಂದ ಒತ್ತಡ ಹೆಚ್ಚಾಯಿತು. ಆದರೆ, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳ ಜನರಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. ಹೀಗಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪರಮಶಿವಯ್ಯ ವರದಿ ಜಾರಿಗೊಳಿಸುವ ಬಗ್ಗೆ ಇನ್ನೊಮ್ಮೆ ಸಮೀಕ್ಷೆ ನಡೆಸಲು ಉದ್ದೇಶಿಸಿ, ಸದ್ಯಕ್ಕೆ ಕುಡಿಯುವ ನೀರು ಒದಗಿಸಲು ಎತ್ತಿನಹೊಳೆ ಯೋಜನೆ ರೂಪಿಸಲು ನಿರ್ಧರಿಸಲಾಯಿತು.
ಅದರಂತೆ ಎತ್ತಿನಹೊಳೆ ಹಾಗೂ ನಾಲ್ಕು ಉಪನದಿಗಳ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯಲು ಪೂರೈಕೆ ಮಾಡುವುದು ಯೋಜನೆಯ ಉದ್ದೇಶ.
ಸದಾನಂದಗೌಡ ಅವರು ಕಾರವಳಿ ಜಿಲ್ಲೆಯವರಾಗಿರುವುದರಿಂದ ಇದಕ್ಕೆ ವಿರೋಧವಿದ್ದಾರೆ ಎಂಬ ಅಪವಾದದಿಂದ ಮುಕ್ತರಾಗಲು ಅವರು ಮುಖ್ಯಮಂತ್ರಿಯಾಗಿದ್ದಾಗಲೇ (ರಾಜಿನಾಮೆ ನೀಡುವ ಕೆಲವೇ ದಿನ ಮೊದಲು) ಯೋಜನೆಯ ಮೊದಲ ಹಂತಕ್ಕೆ ಸಚಿವ ಸಂಪುಟದಲ್ಲಿ (2012ರ ಜುಲೈ) ಅನುಮೋದನೆ ನೀಡಲಾಗಿತ್ತು. ಎರಡು ತಿಂಗಳಲ್ಲೇ ಯೋಜನೆಗೆ ಚಾಲನೆ ನೀಡಲು ಕೂಡ ನಿರ್ಧರಿಸಲಾಗಿತ್ತು.
ಆದರೆ, ಕೇಂದ್ರ ಪರಿಸರ ಇಲಾಖೆ ಅನುಮತಿ ಸಿಗದ ಕಾರಣದಿಂದ ಇದುವರೆಗೂ ಟೆಂಡರ್ ಪ್ರಕ್ರಿಯೆ ಮುಗಿಸಿ ಯೋಜನೆಗೆ ಚಾಲನೆ ನೀಡಲು ಸಾಧ್ಯವಾಗಲಿಲ್ಲ.
ಈ ಹಿನ್ನೆಲೆಯಲ್ಲಿ ಕೇಂದ್ರದಿಂದ ಅನುಮತಿ ಸಿಗದಿದ್ದರೂ ಸರ್ಕಾರ ಅವದಿ ಪೂರ್ಣಗೊಳಿಸುವ ಮುನ್ನ ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಲು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೇತೃತ್ವದ ಸರ್ಕಾರ ಗಟ್ಟಿ ನಿರ್ಧಾರಕ್ಕೆ ಬಂದು ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿತ್ತು.

- ಪ್ರದೀಪ್ ಕುಮಾರ್ ಎಂ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement