ಕೃಷಿ ಇಲಾಖೆಗಿಲ್ಲ ಶತಮಾನೋತ್ಸವ ಖುಷಿ
ಬೆಂಗಳೂರು: ಕರ್ನಾಟಕದ ಕೃಷಿ ಇಲಾಖೆಗೆ ಈಗ 100 ವರ್ಷ. ಆದರೆ, ಇಲಾಖೆಯ ಬಹುತೇಕ ಮಂದಿಗೆ ಇದು ಗೊತ್ತೇ ಇಲ್ಲ!
ಏಕೆಂದರೆ, ಇಲಾಖೆಯಲ್ಲಿ 100 ವರ್ಷ ಸಾಧಿಸಿದ ಹರ್ಷವೂ ಇಲ್ಲ, ಸಂಭ್ರಮವೂ ಇಲ್ಲ. ಹಾಗೊಮ್ಮೆ ಇದ್ದರೆ,
ಇಷ್ಟೊತ್ತಿಗಾಗಲೇ 100 ವರ್ಷ ಪೂರೈಸಿದ ಪ್ರಯುಕ್ತ ವರ್ಷ ಪೂರ್ಣ ಕಾರ್ಯಕ್ರಮ ರೂಪಿಸಬೇಕಿತ್ತು. 100 ವರ್ಷ ಸಾಧಿಸಿದ್ದೇನು, ಶೋಧಿಸಿದ್ದೇನು ಎಂದು ಚಿಂತಿಸುವ ಮಹಾಲೋಚನೆ, ಹಿಂದಿನ ತಪ್ಪುಗಳನ್ನು ಒಪ್ಪಿ ತಿದ್ದಿಕೊಳ್ಳುವ ಮಹತ್ಕಾರ್ಯ ಆರಂಭವಾಗಬೇಕಿತ್ತು. ಹಾಗೆಯೇ ಇಲಾಖೆ ನಡೆದು ಬಂದ ಹಾದಿಯಲ್ಲಿ ಕೈ ಹಿಡಿದವರು, ಕಾಣಿಕೆ ಸಲ್ಲಿಸಿದವರ ಸ್ಮರಿಸಬೇಕಿತ್ತು.
ಅಷ್ಟೇ ಅಲ್ಲ, ಇಷ್ಟೂ ವರ್ಷಗಳ ಅನುಭವ ಆಧರಿಸಿ ಮುಂದಿನ 50 ವರ್ಷಗಳಿಗೆ ಮಾಡಬೇಕಿರುವುದೇನೆಂಬ ಮಹತ್ವದ ಚಿಂತನೆ 99ನೇ ವರ್ಷದಲ್ಲೇ ಆರಂಭವಾಗಬೇಕಿತ್ತು. ಆದರೆ, ಇಲಾಖೆಯಲ್ಲಿ ಶತಮಾನೋತ್ಸವದ ಸದ್ದೇ ಇಲ್ಲ.
ಕೃಷಿ ಸಚಿವರು ಬಿಜೆಪಿ, ಕೆಜೆಪಿ ರಾಜಕೀಯ ಜಂಜಾಟದಲ್ಲಿ ಬ್ಯುಸಿಯಾಗಿದ್ದರೆ, ಅಧಿಕಾರಿಗಳು ಈ ವರ್ಷ ಒಮ್ಮೆ ಶತಮಾನೋತ್ಸವ ಆಚರಿಸಿದರಾಯಿತು ಎಂಬ ತಾತ್ಸಾರದಲ್ಲಿದ್ದಾರೆ. ಹೀಗಾಗಿ 3 ವರ್ಷಗಳಿಂದ ಕೃಷಿ ಬಜೆಟ್ ಮಂಡಿಸಿರುವ ಸರ್ಕಾರಕ್ಕೆ 2013 ಮಹತ್ವದ ವರ್ಷವೇ ಅಲ್ಲ ಎನ್ನುವಂತಾಗಿದೆ.
ಮುಂದಿನ ಸವಾಲುಗಳೇನು?: ರಾಜ್ಯದ ಆಹಾರ ಭದ್ರತೆ ಕಾಪಾಡುವುದು ಮತ್ತು ರೈತರಿಗೆ ಬಿತ್ತನೆಬೀಜ, ರಸಗೊಬ್ಬರ ಪೂರೈಸಿ ವೈಜ್ಞಾನಿಕ ಮಾರ್ಗದರ್ಶನ ನೀಡುವುದು ಇಲಾಖೆ ಕೆಲಸ. ಆದರೆ, ಈಗಿನ ಸ್ಥಿತಿ ಕೃಷಿ ಕ್ಷೇತ್ರಕ್ಕೇ ಅಪಾಯಕಾರಿಯಾಗಿದೆ. ಎಲ್ಲೆಡೆ ಹಸಿರಿಗೆ ಬರ ಬಂದಿದೆ. ಕೃಷಿ ಭೂಮಿ ದಿನ ಕಳೆದಂತೆ ಕೃಷಿಯೇತರ ಭೂಮಿಯಾಗುತ್ತಿದೆ.
ಗೋಮಾಳಗಳು ಕೈಗಾರಿಕೆ, ಕಟ್ಟಡಗಳ ಪಾಲಾಗುತ್ತಿವೆ. ಬಂಜರು ಭೂಮಿ ಹೆಸರಿನಲ್ಲಿ ಕೃಷಿ ಭೂಮಿಯನ್ನೂ ವಾಣಿಜ್ಯಕ್ಕೆ ಬಳಸಲಾಗುತ್ತಿದೆ.
ಇನ್ನು ರಿಯಲ್ ಎಸ್ಟೇಟ್ ಮತ್ತು ಬಿಲ್ಡರ್‌ಗಳು ಭೂಮಿಯನ್ನೇ ನುಂಗುತ್ತಿದ್ದಾರೆ. ಇಂಥ ಅನೇಕ ಸಮಸ್ಯೆಗಳ ನಡುವೆ ಕಡಿಮೆ ಪ್ರಮಾಣದ ಮಣ್ಣು, ನೀರು, ವಿದ್ಯುತ್‌ನಿಂದ ಹೆಚ್ಚು ಉತ್ಪಾದನೆ ಮಾಡುವಂಥ ಮಾರ್ಗೋಪಾಯಗಳನ್ನು ರೈತರಿಗೆ ತಿಳಿಸುವ ಗುರುತರ ಹೊಣೆ ಇಲಾಖೆಯದ್ದು.
100 ವರ್ಷದ ಹಿಂದೆ ಇಲಾಖೆ ಹೇಗಿತ್ತು?
ಕ್ರಿ.ಶ. 1871ರ ಕೃಷಿಗೆ ಸಂಬಂಧಿಸಿದ ವಿಷಯಗಳು ಗೃಹ ಇಲಾಖೆಗೆ ಸಂಬಂಧಿಸಿದ್ದವು. ನಂತರ ಕೃಷಿ, ಕಂದಾಯ ಮತ್ತು ವಾಣಿಜ್ಯ ಇಲಾಖೆಗಳೇ ಪ್ರತ್ಯೇಕವಾದವು.
ಕರ್ನಾಟಕ ಏಕೀಕರಣಕ್ಕೂ ಮುನ್ನ ರಾಜ್ಯ ವಿವಿಧ ಭಾಗಗಳಲ್ಲಿ ಹಂಚಿಕೆಯಾಗಿತ್ತು. ಆಗ ಮೈಸೂರು ಪ್ರಾಂತ್ಯದಲ್ಲಿ ಕೃಷಿ ಸಂಬಂಧಿ ಸಮಸ್ಯೆಗಳ ಬಗ್ಗೆ ಚಿಂತಿಸಲು ಆಗಿನ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್ 1906ರಲ್ಲಿ ಡಾ.ಲೆಹ್ಮನ್ ನೇತೃತ್ವದಲ್ಲಿ ಬೆಂಗಳೂರಿನ ಹೆಬ್ಬಾಳದಲ್ಲಿ ಕೃಷಿ ಸಂಶೋಧನಾ ಕೇಂದ್ರ ಸ್ಥಾಪಿಸಿದ್ದರು.
ಅಷ್ಟೊತ್ತಿಗೆ ಕಾಫಿ ಬೆಳೆಗೆ ಕಾಂಡಕೊರಕ ಹುಳು ಕಾಡಿದ್ದರಿಂದ ಸಮಸ್ಯೆ ತೀವ್ರವಾಗಿತ್ತು. ನಂತರ ಕೃಷಿಗೆ ಸಂಬಂಧಿಸಿದ ಇತರ ಸಮಸ್ಯೆ ಬಗ್ಗೆಯೂ ಚರ್ಚಿಸಲು ಅನುಕೂಲವಾಗಲು 1913ರಲ್ಲಿ ಕೃಷಿ ಇಲಾಖೆಯನ್ನೇ ಪ್ರತ್ಯೇಕವಾಗಿ ಸ್ಥಾಪಿಸಲಾಯಿತು.
ಡಾ. ಲೆಸ್ಲಿ ಸಿ.ಕೋಲ್ಮನ್ ಎಂಬವರು ಇದರ ಮುಖ್ಯಸ್ಥರಾದರು. ಇವರು ನೀಡಿದ ತಾಂತ್ರಿಕ ಸಲಹೆ ಮೇರೆಗೆ ಮಲೆನಾಡು ಪ್ರದೇಶದಲ್ಲಿ ಅಡಿಕೆ, ಮೈದಾನ ಮತ್ತು ತಗ್ಗು ಪ್ರದೇಶಗಳಲ್ಲಿ ತೆಂಗುಗಳನ್ನು ನೆಡುವುದಕ್ಕೆ ಅಗತ್ಯ ಕ್ರಮ ಕೈಗೊಂಡರು.
ವಿಜಾಪುರ ಮತ್ತು ಬಳ್ಳಾರಿಯಲ್ಲಿ ಮಣ್ಣು ಮತ್ತು ನೀರು ಸಂರಕ್ಷಣಾ ಸಂಶೋಧನಾ ಕೇಂದ್ರ ಆರಂಭಿಸಿದರು. ಹಾಗೆಯೇ ರಾಯಚೂರಿನಲ್ಲೂ ಕೃಷಿ ಸಂಶೋಧನಾ ಕೇಂದ್ರ ಆರಂಭಿಸಿದ ಹೆಗ್ಗಳಿಗೆ ಇವರದು. ನಂತರ 1947ರ ವೇಳೆಗೆ ಬೆಂಗಳೂರು ಮತ್ತು ಧಾರವಾಡದಲ್ಲಿ ಕೃಷಿ ಪದವಿ ಕಾಲೇಜು ಹಾಗೂ ಮಂಡ್ಯ ವಿ.ಸಿ.ಫಾರಂ ಆರಂಭವಾಯಿತು. ಇದರಿಂದ ಕೃಷಿ ಶಿಕ್ಷಣಕ್ಕೆ ಅನುಕೂಲವಾಗಿತ್ತಲ್ಲದೆ, ಈ ಕಾಲೇಜುಗಳು ತಮ್ಮ ಸುತ್ತಮುತ್ತಲ ಪ್ರದೇಶಗಳ ಬೆಳೆಗಳ ಬಗ್ಗೆ ಅಧ್ಯಯನ ನಡೆಸುವುದಕ್ಕೂ ಅವಕಾಶವಾಯಿತು.
- ಶಿವಕುಮಾರ್ ಬೆಳ್ಳಿತಟ್ಟೆ