ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ನಗರ

ಪಪೂ ಎಡವಟ್ಟಾಯಣ ವಿದ್ಯಾರ್ಥಿಗಳಿಗೆ ಗ್ರಹಣ

Parashurama
Updated On : 18 Feb 2013, 1:05 am

ಬೆಂಗಳೂರು: ಏನೋ ಮಾಡಲು ಹೋಗಿ ಏನೋ ಆಯಿತು ಕೊನೆಗೆ...!
ಇದು ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಸರಿಯಾಗಿ ಒಪ್ಪುವ ಮಾತು. ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಗಮನ ಹರಿಸದ ಸರ್ಕಾರ ಪದೇ ಪದೆ ಪರೀಕ್ಷಾ ವಿಧಾನ ಬದಲಾಯಿಸುವ ಮೂಲಕ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ಕಾರಣ, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರಂತರ ಸಮಗ್ರ ಮೌಲ್ಯಮಾಪನ(ಸಿಸಿಇ) ರದ್ದು ಮಾಡಿದ ಬಳಿಕ ಅಳವಡಿಸಿಕೊಂಡಿರುವ ಹಳೆ ಪದ್ಧತಿಯಲ್ಲಿ ಇದೀಗ ಕೊಂಚ ಬದಲಾವಣೆ ಮಾಡಿ ವಿದ್ಯಾರ್ಥಿಗಳು ಸುಲಭವಾಗಿ ತೆಗೆದುಕೊಳ್ಳಬಹುದಾಗಿದ್ದ 10 ಅಂಕಗಳಿಗೆ ಕತ್ತರಿ ಹಾಕಿದೆ.
ಪರೀಕ್ಷೆ ಫೆ.22ರಿಂದ ಪ್ರಾರಂಭವಾಗಲಿದ್ದು, ಪರೀಕ್ಷೆ ಸಮೀಪಿಸುತ್ತಿರವ ಸಮಯದಲ್ಲಿ ಪದೇ ಪದೇ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ಆಗುತ್ತಿರುವುದು ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ.
ಹಳೆಯ ಪದ್ಧತಿಯಲ್ಲಿ 90 ಅಂಕಗಳಿಗೆ ಭೌತಶಾಸ್ತ್ರ ಮತ್ತು ರಸಾಯನಾಸ್ತ್ರ ಸಿದ್ಧಾಂತ(ಥಿಯರಿ) ಪರೀಕ್ಷೆ ನಡೆಸಿ 10 ಅಂಕಗಳಿಗೆ ಪ್ರಾಯೋಗಿಕ ಪರೀಕ್ಷೆ ನಡೆಸುತ್ತಿತ್ತು. 90 ಅಂಕಗಳ ಥಿಯರಿ ಪ್ರಶ್ನೆ ಪತ್ರಿಕೆಯಲ್ಲಿ 10 ಅಂಕಗಳಿಗೆ ಚಿತ್ರ ಬರೆದು ವಿವರಣೆ ಕೇಳುತ್ತಿತ್ತು.
ಹೀಗಾಗಿ ವಿದ್ಯಾರ್ಥಿಗಳು ಚಿತ್ರ ಬರೆದು ಸ್ವಲ್ಪ ವಿವರಣೆ ನೀಡಿದರೂ ಕನಿಷ್ಠ 7-8 ಅಂಕಗಳು ವಿದ್ಯಾರ್ಥಿಗಳ ಜೇಬಿಗೆ ಬೀಳುತ್ತಿತ್ತು. ಇದೀಗ ಈ ಹಳೆಯ ಪದ್ಧತಿ ತೆಗೆದು ಹಾಕಿ 90 ಅಂಕಗಳಿಗೂ ಕೇವಲ ಪ್ರಶ್ನೆಗಳನ್ನೇ ಕೇಳಿರುವುದು ವಿದ್ಯಾರ್ಥಿಗಳಲ್ಲಿ ನಿರಾಸೆ ಮೂಡಿಸುವಂತಿದೆ.
ಅಲ್ಲದೆ, ಗಣಿತ ಮತ್ತು ಜೀವಶಾಸ್ತ್ರ ವಿಷಯಗಳ ಪರೀಕ್ಷೆಗಳು ಹಳೇ ಪದ್ಧತಿಯಂತೆ ಇವೆ.
ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರಕ್ಕೆ ಏಕೆ ಈ ಬದಲಾವಣೆ ತರಬೇಕಿತ್ತು ಎಂಬುದು ಕೆಲವು ಉಪನ್ಯಾಸಕರ ಪ್ರಶ್ನೆಯಾಗಿದೆ.
ಸಿಸಿಇ ಒಳ್ಳೆಯದಾಗಿತ್ತು: ಪರೀಕ್ಷಾ ಪದ್ಧತಿಯಲ್ಲಿ ಭಾರಿ ಬದಲಾವಣೆ ತರುವ ಉದ್ದೇಶದಿಂದ ಪದವಿ ಪೂರ್ವ ಶಿಕ್ಷಣ ಇಲಾಖೆ ಆಯುಕ್ತರಾಗಿದ್ದ ವಿ.ರಶ್ಮಿ ಅವರು ಜಾರಿಗೆ ತಂದಿದ್ದ ನಿರಂತರ ಸಮಗ್ರ ಮೌಲ್ಯಮಾಪನ(ಸಿಸಿಇ) 70 ಅಂಕಗಳಿಗೆ ಥಿಯರಿ ಹಾಗೂ 20 ಅಂಕಗಳಿಗೆ ಪ್ರಾಯೋಗಿಕ ಪರೀಕ್ಷೆ, ಉಳಿದ 10 ಅಂಕ ಆಂತರಿಕ ಮೌಲ್ಯಮಾಪನದಿಂದ ನೀಡಲಾಗುತ್ತಿತ್ತು. ಇದೀಗ ಅಳವಡಿಸಿಕೊಂಡಿರುವ ಪದ್ಧತಿ ಇತ್ತ ಸಿಸಿಇಯೂ ಅಲ್ಲದೆ, ಅತ್ತ ಹಳೆಯ ಪದ್ಧತಿಯೂ ಅಲ್ಲದೆ, ಅತಂತ್ರ ಸ್ಥಿತಿ ತಲುಪಿದೆ.
ಪ್ರಯೋಗಕ್ಕೆ ಬೆಲೆ ಇಲ್ಲ: ವಿದ್ಯಾರ್ಥಿಗಳು ಹೆಚ್ಚು ಶ್ರಮಪಡುವುದು ಮತ್ತು ಆಸಕ್ತಿಯಿಂದ ಪಾಲ್ಗೊಳ್ಳುವುದು ಪ್ರಯೋಗಾಲಯದಲ್ಲೇ. ಇತಂಹ ಪ್ರಯೋಗಗಳಿಗೆ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ನೀಡದಿರುವುದು ನಿರಾಸೆ ಮೂಡಲು ಕಾರಣವಾಗುತ್ತದೆ.
ನೆರೆ ರಾಜ್ಯಗಳಾದ ಆಂಧ್ರಪ್ರದೇಶದಲ್ಲಿ 60 ಥಿಯರಿ ಮತ್ತು 40 ಪ್ರಾಯೋಗಿಕ ಮತ್ತು ಕೇಂದ್ರಿಯ ವಿದ್ಯಾಲಯಗಳಲ್ಲಿ 70 ಥಿಯರಿ ಮತ್ತು 30 ಪ್ರಾಯೋಗಿಕ ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಹೀಗಾಗಿ ನಮ್ಮ ರಾಜ್ಯದಲ್ಲಿ ಪ್ರಾಯೋಗಿಕ ವಿಧಾನಕ್ಕೆ ಬೆಲೆ ನೀಡುತ್ತಿಲ್ಲ ಎಂದು ತಿಳಿದು ಬರುತ್ತದೆ.
ಮಾದರಿ ಪ್ರಶ್ನೆ ಪತ್ರಿಕೆ ಇಲ್ಲ: ಪದವಿ ಪೂರ್ವ ಶಿಕ್ಷಣ ಇಲಾಖೆ ಪದೇ ಪದೆ ಪರೀಕ್ಷಾ ಪದ್ಧತಿ ಬದಲಾವಣೆ ಮಾಡುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಬದಲಾಣೆ ಮಾಡಿರುವ ಪದ್ಧತಿಯಿಂದ ಯಾವ ರೀತಿ ಪ್ರಶ್ನೆಗಳು ಇರುತ್ತವೆ ಎಂಬ ಮಾದರಿ ಪ್ರಶ್ನೆ ಪತ್ರಿಕೆಯನ್ನು ಅಪ್‌ಲೋಡ್ ಮಾಡದಿರುವುದು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಲ್ಲಿ ಆತಂಕದ ಭಾವನೆ ಮೂಡಿಸಿದೆ.
- ದೇವರಾಜ್ ಎಲ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement