ಪಿಇಎಸ್‌ಗೆ 1 ಕೋಟಿ ಸಂಸದರ ನಿಧಿ
ಬೆಂಗಳೂರು: ಬೆಂಗಳೂರು ದಕ್ಷಿಣ ಭಾಗದಲ್ಲಿರುವ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಸಲುವಾಗಿ ಪಿಇಎಸ್ ಶಿಕ್ಷಣ ಸಮೂಹಕ್ಕೆ ಸಂಸದರ ನಿಧಿಯಿಂದ 1 ಕೋಟಿ ನೀಡಲಾಗುವುದು ಎಂದು ಸಂಸದ ಅನಂತಕುಮಾರ್ ಅವರು ಭರವಸೆ ನೀಡಿದರು.
ಪಿಇಎಸ್ ಶಿಕ್ಷಣ ಸಂಸ್ಥೆ ತಾನು ದತ್ತು ಪಡೆದಿರುವ ಸರ್ಕಾರಿ ಶಾಲೆಗಳ ಶಿಕ್ಷಕರಿಗಾಗಿ ಶ್ರುತ್ ಮತ್ತು ಸ್ಮಿತ್ ಪ್ರತಿಷ್ಠಾನದ ಸಹಯೋಗದಲ್ಲಿ ಭಾನುವಾರ ಪೆಸಿಟ್ ಆವರಣದಲ್ಲಿ ಏರ್ಪಡಿಸಿದ್ದ 3 ದಿನಗಳ ಬೋಧನಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಪಿಇಎಸ್ ಸಂಸ್ಥೆ ಈಗಾಗಲೇ ನಗರದ 16 ಶಾಲೆಗಳನ್ನು ದತ್ತು ಪಡೆದು ಅವುಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಕಾರ್ಯ ಕೈಗೊಂಡಿದ್ದು, ಆ ಸಂಸ್ಥೆಯ ಕಾರ್ಯವೈಖರಿ ಹಾಗೂ ಗುಣಮಟ್ಟದ ಬಗ್ಗೆ ತಮಗೆ ಪೂರ್ಣ ವಿಶ್ವಾಸವಿದೆ. ಪಿಇಎಸ್ ಸಂಸ್ಥೆಯು ಮತ್ತಷ್ಟು ಉತ್ತಮ ಕಾರ್ಯಕ್ರಮ ಹಮ್ಮಿಕೊಳ್ಳಲು ಅನುಕೂಲವಾಗುವಂತೆ ಸಂಸದರ ನಿಧಿಯಿಂದ 1 ಕೋಟಿ ನೀಡುವುದಾಗಿ ಸಂಸದ ಅನಂತಕುಮಾರ್ ಅವರು ಭರವಸೆ ನೀಡಿದರು. ಆ ಮೊತ್ತಕ್ಕೆ ಪ್ರೊ.ಎಂ.ಆರ್. ದೊರೆಸ್ವಾಮಿ ಅವರು ವಿಧಾನಪರಿಷತ್ ಸದಸ್ಯರ ನಿಧಿ ಹಾಗೂ ಪಿಇಎಸ್ ಸಮೂಹದಿಂದ ಸ್ವಲ್ವ ಮೊತ್ತ ಸೇರಿಸಿ, 2 ಕೋಟಿ ಕ್ರೋಢೀಕರಿಸಿ ಅದನ್ನು ಬೆಂಗಳೂರು ದಕ್ಷಿಣ ಭಾಗದ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದು ಅನಂತಕುಮಾರ್ ಸಲಹೆ ನೀಡಿದರು.
'ಐಐಟಿ'ಗೆ ಬೆಂಬಲ: ಪ್ರೊ.ಎಂ.ಆರ್. ದೊರೆಸ್ವಾಮಿ ಅವರು ವಿಧಾನಸಭೆ ಅಧಿವೇಶನದಲ್ಲಿ ನಗರಕ್ಕೆ ಐಐಟಿ ಅವಶ್ಯಕತೆ ಇರುವುದರ ಬಗ್ಗೆ ಪ್ರಸ್ತಾಪಿಸಿದ್ದರು. ಬೆಳೆಯುತ್ತಿರುವ ಬೆಂಗಳೂರು ಐಟಿ-ಬಿಟಿ, ಹೆಲ್ತ್‌ಕೇರ್, ಏರೋಸ್ಪೇಸ್‌ಗಳ ರಾಜಧಾನಿ ಎನಿಸಿಕೊಂಡಿದ್ದು, ಇಲ್ಲಿಗೆ ಐಐಟಿ ಅಗತ್ಯವಿದೆ. ದೊರೆಸ್ವಾಮಿ ಅವರ ಈ ಇಂಗಿತಕ್ಕೆ ತಮ್ಮ ಬೆಂಬಲವಿದೆ ಎಂದ ಅವರು, ಮುಖ್ಯಮಂತ್ರಿ ಹಾಗೂ ಸಂಬಂಧಿತ ಸಚಿವರ ಜತೆಗೆ ದೊರೆಸ್ವಾಮಿ ಅವರು ದಿಲ್ಲಿಗೆ ಬಂದಲ್ಲಿ ತಾವು ಅಲ್ಲಿನ ಮಾನವ ಸಂಪನ್ಮೂಲ ಸಚಿವರನ್ನು ಭೇಟಿ ಮಾಡಿಸಿ, ನಗರಕ್ಕೆ ಐಐಟಿ ಮಂಜೂರು ಮಾಡುವಂತೆ ಒತ್ತಾಯಿಸುವುದಾಗಿ ಭರವಸೆ ನೀಡಿದರು.
ಕಾರ್ಯಾಗಾರಕ್ಕೆ ಬಂದಿದ್ದ ಶಿಕ್ಷಕರನ್ನುದ್ದೇಶಿಸಿ ಮಾತನಾಡಿದ ಅವರು, ಬೋಧನಾ ಕ್ರಮದಲ್ಲಿ ದೇಶಾದ್ಯಂತ ನಡೆಯುತ್ತಿರುವ ಆವಿಷ್ಕಾರಗಳನ್ನು ತಿಳಿಯುವ ಸಲುವಾಗಿ ಶಿಕ್ಷಕರು ಇಂತಹ ತರಬೇತಿಗೆ ಆಗಿಂದಾಗ್ಗೆ ಒಳಪಡಬೇಕಾದ್ದು ಅಗತ್ಯ. ಶಿಕ್ಷಕರು ವೃತ್ತಿ ಸಂಬಂಧಿತ ಕಾರ್ಯಗಳಲ್ಲದೇ ಸಾಮಾಜಿಕ ಕಳಕಳಿಯ ಯಾವುದಾದರೊಂದು ಕೆಲಸದಲ್ಲಿ ಪ್ರತಿನಿತ್ಯ ತೊಡಗಿಕೊಳ್ಳಬೇಕು. ದೇಶಪ್ರೇಮ, ಪರಿಶ್ರಮ, ಗೌರವ, ಶಿಸ್ತು, ಸಾಮಾಜಿಕ ಕಳಕಳಿ, ನಿರ್ಭಯತೆಯನ್ನು ರೂಢಿಸಿಕೊಳ್ಳುವ ಜತೆಗೆ ವಿದ್ಯಾರ್ಥಿಗಳೂ ಅದನ್ನು ರೂಢಿಸಿಕೊಳ್ಳುವಂತಾಗಿಸಿ ಉತ್ತಮ ಪ್ರಜೆಗಳನ್ನು ರೂಪಿಸಬೇಕು ಎಂದರು.
ದತ್ತು ಪಡೆವ ನಿಬಂಧನೆ ಇರಲಿ: ಪಿಇಎಸ್ ಶಿಕ್ಷಣ ಸಮೂಹದ ಮುಖ್ಯಸ್ಥ ಪ್ರೊ.ಎಂ.ಆರ್.ದೊರೆಸ್ವಾಮಿ ಅವರು ಮಾತನಾಡಿ, ಸರ್ಕಾರಿ ಶಾಲೆಗಳನ್ನು ಕಾರ್ಪೊರೇಟ್ ಸಂಸ್ಥೆಗಳು ದತ್ತು ಪಡೆಯುವುದಕ್ಕಿಂತ ಶಿಕ್ಷಣ ಸಂಸ್ಥೆಗಳೇ ದತ್ತು ಪಡೆದಲ್ಲಿ ಹೆಚ್ಚಿನ ಪ್ರಯೋಜನವಾಗುತ್ತದೆ. ಶಿಕ್ಷಣ ಸಂಸ್ಥೆಗಳಿಗೆ ಶಾಲೆ ನಡೆಸುವ ಬಗ್ಗೆ ಹೆಚ್ಚಿನ ಅನುಭವ ಇರುವುದರಿಂದ ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳೇ ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವುದು ಸೂಕ್ತ. ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವಾಗ ಸರ್ಕಾರದಿಂದ ಮಾನ್ಯತೆ ಪಡೆಯಬೇಕಾಗುತ್ತದೆ. ಅಂತಹ ಮಾನ್ಯತೆ ನೀಡುವಾಗ ಪ್ರತಿ ಶಿಕ್ಷಣ ಸಂಸ್ಥೆಯು ಅದರ ಆಸುಪಾಸಿನಲ್ಲಿರುವ ಕನಿಷ್ಠ 3 ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವಂತಹ ನಿಬಂಧನೆಯನ್ನು ಸರ್ಕಾರ ಅಳವಡಿಸಬೇಕು. ಈಗಾಗಲೇ ಮಾನ್ಯತೆ ಪಡೆದಿರುವ ಶಿಕ್ಷಣ ಸಂಸ್ಥೆಗಳಿಗೂ ಅನ್ವಯಿಸುವಂತೆ ಈ ಕ್ರಮ ಜರುಗಿಸಬೇಕು ಎಂದು ದೊರೆಸ್ವಾಮಿ ಅವರು ಅಭಿಪ್ರಾಯಪಟ್ಟರು. ಅನಂತಕುಮಾರ್ ಅವರ ಸಲಹೆಯಂತೆ ಬೆಂ. ದಕ್ಷಿಣ ಭಾಗದ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಕೆಲಸ ಮಾಡುವುದಾಗಿ ಅವರು ಇದೇ ವೇಳೆ ಭರವಸೆ ನೀಡಿದರು.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಮುಖ್ಯ ಕಾರ್ಯದರ್ಶಿ ಜಿ.ಕುಮಾರ ನಾಯಕ್, ಪಠ್ಯಕ್ರಮ ಪರಿಷ್ಕರಣೆ ಮತ್ತು ಪಠ್ಯಪುಸ್ತಕ ರಚನಾ ಸಮಿತಿಯ ಸಂಯೋಜಕ ಜಿ.ಎಸ್.ಮುಡಂಬಡಿತ್ತಾಯ, ಪಿಇಎಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಡಾ.ಕೆ.ಎನ್.ಬಿ.ಮೂರ್ತಿ ಅವರು ಹಾಜರಿದ್ದರು.