ಪೀಣ್ಯ ಸಮೀಪ ಕೆಳಗೆ ಬಿದ್ದವರ ಮೇಲೆ ಹರಿದ ವಾಹನ
ಬೆಂಗಳೂರು: ಎರಡು ದ್ವಿಚಕ್ರ ವಾಹನಗಳ ಅಪಘಾತದಲ್ಲಿ ಹಿಂಬದಿ ಸವಾರರಿಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.
ಸುಬ್ರಮಣ್ಯ ನಗರ ನಿವಾಸಿ ಕೌಶಿಕ್(13) ಹಾಗೂ ಕೆ.ಆರ್.ಪುರ ಸಮೀಪದ ಲಕ್ಕೇನಹಳ್ಳಿ ನಿವಾಸಿ ವೆಂಕಟೇಶ್ ಗುಪ್ತಾ(55) ಮೃತರು.
ಗೌತಮ್, ಪ್ರೀತಮ್ ಹಾಗೂ ಪ್ರವೀಣ್ಕುಮಾರ್ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ತುಮಕೂರು ರಸ್ತೆಯಲ್ಲಿ ಬೆಂಗಳೂರು ಕಡೆಗೆ ಸಂಚರಿಸುತ್ತಿದ್ದರು. ಪೀಣ್ಯ ಸಮೀಪದಲ್ಲಿ ಮೇಲ್ಸೇತುವೆಯಿಂದ ಕೆಳಗಿಳಿಯುತ್ತಿದ್ದರು. ಈ ವೇಳೆ ಮುಂದೆ ಹೋಗುತ್ತಿದ್ದ ಸ್ವಿಫ್ಟ್ ಕಾರಿನ ಚಾಲಕ ವಾಹನದ ವೇಗವನ್ನು ಕಡಿಮೆ ಮಾಡಿದ್ದರಿಂದ ಅಪಘಾತ ಸಂಭವಿಸಿ ಕೆಳಗೆ ಬಿದ್ದ ಕೌಶಿಕ್ ಹಾಗೂ ವೆಂಕಟೇಶ್ ಅವರ ತಲೆ ಮೇಲೆ ಎದುರಿನಿಂದ ಬಂದ ವಾಹನ ಹಾಯ್ದು ಮೃತಪಟ್ಟಿದ್ದಾರೆ. ಕಪ್ಪು ಬಣ್ಣದ ಪಲ್ಸರ್ ಬೈಕ್ನಲ್ಲಿ ಮುಂದೆ ಚಲಿಸುತ್ತಿದ್ದ ಪ್ರವೀಣ್ ಹಾಗೂ ವೆಂಕಟೇಶ್ ಸಂಬಂಧಿಕರಾಗಿದ್ದು, ಪೂಜೆಗೆಂದು ಸಂಬಂಧಿಕರ ಮನೆಗೆ ಹೋಗಿ ಹಿಂತಿರುಗುತ್ತಿದ್ದರು. ಗೌತಮ್ ಹಾಗೂ ಆತನ ಸಹೋದರರಾದ ಕೌಶಿಕ್ ಮತ್ತು ಪ್ರೀತಮ್ ಮತ್ತೊಂದು ದ್ವಿಚಕ್ರ ವಾಹನದಲ್ಲಿ ಹಿಂದಿನಿಂದ ಬರುತ್ತಿದ್ದರು. ಅವರು ಕೆಲಸ ನಿಮಿತ್ತ ನೆಲಮಂಗಲಕ್ಕೆ ಹೋಗಿದ್ದರು. ಕೌಶಿಕ್ ಮತ್ತು ಪ್ರೀತಮ್ 7 ಮತ್ತು 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದರು. ಗಾಯಾಳುಗಳ ಸ್ಥಿತಿ ಸುಧಾರಿಸಿದ್ದು, ಓರ್ವನ ತಲೆಗೆ ಪೆಟ್ಟು ಬಿದ್ದಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅವರು ಚೇತರಿಸಿಕೊಂಡ ನಂತರ ಹೆಚ್ಚಿನ ಮಾಹಿತಿ ಕಲೆಹಾಕುವುದಾಗಿ ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳು ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮೃತದೇಹಗಳನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆಯಿಂದ ಕೆಲಕಾಲ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.