ಬದುಕಿನಲ್ಲಿ ಭರವಸೆ ಮೂಡಿಸುವ ಮಣಿಕಾಂತ್ ಅಂಕಣ: ಎಚ್ಎಸ್ವಿ
ಬೆಂಗಳೂರು: ಅದು ಅಸಲೀ ಹೀರೋಗಳಿದ್ದ ಸಮಾರಂಭ. ಪ್ರತಿ ಮಾತು, ಕೃತಿಯೂ ಅರ್ಥಪೂರ್ಣ. ಗ್ಲಾಮರ್ ಲೋಕದ ಜನರಿದ್ದರಾದರೂ, ಗ್ಲಾಮರ್ ಇರಲಿಲ್ಲ. ಆದರೆ ಕಾರ್ಯಕ್ರಮದ ಆರಂಭದಿಂದ ಅಂತ್ಯದ ವರೆಗೆ ಅರ್ಥಪೂರ್ಣಗ್ರಾಮರ್ ಇತ್ತು.
ಇದು ಎ.ಆರ್.ಮಣಿಕಾಂತ್ ಅವರ 'ಅಪ್ಪ ಅಂದ್ರೆ ಆಕಾಶ' ಪುಸ್ತಕ ಬಿಡುಗಡೆ ಸಮಾರಂಭದ ಸಂಕ್ಷಿಪ್ತ ನೋಟ.
ಭಾನುವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮಕ್ಕೆ ಕವಿ ಎಚ್.ಎಸ್. ವೆಂಕಟೇಶಮೂರ್ತಿ, ನಿರ್ದೇಶಕ ಗುರುಪ್ರಸಾದ್, ನಟಿ ಭಾವನಾ ಹಾಗೂ ಕನ್ನಡಪ್ರಭ ಮತ್ತು ಸುವರ್ಣ ಸುದ್ದಿವಾಹಿನಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಆಗಮಿಸಿದ್ದರು.
ರಿಯಲ್ ಹೀರೋ: ಪುಸ್ತಕದಲ್ಲಿ ಬರುವ ಸತ್ಯಕಥೆಗಳಿಗೆ ಗೌರವ ಸಲ್ಲಿಸುವ ಕಾರ್ಯಕ್ರಮವಿತ್ತು. ಸುನಾಮಿಯಲ್ಲಿ ಮೂರು ಮಕ್ಕಳನ್ನು ಕಳೆದುಕೊಂಡು ಮೂವತ್ತು ಮಕ್ಕಳನ್ನು ಸಾಕುತ್ತಿರುವ ದಂಪತಿ, ಅನಕ್ಷರಸ್ಥ ವ್ಯಕ್ತಿ ಲೀಲಾಜಾಲವಾಗಿ ಇಂಗ್ಲಿಷ್ ಮಾತಾಡುವಂತಾಗಿದ್ದು, ನೂರಾರು ಭಿಕ್ಷುಕರ ಅಂತ್ಯ ಸಂಸ್ಕಾರ ಮಾಡಿದ ಮಾನವತಾವಾದಿ.. ಹೀಗೆ ಹಲವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕೇವಲ 'ಅಪ್ಪ ಅಂದ್ರೆ ಆಕಾಶ' ಪುಸ್ತಕದಲ್ಲಿ ಅವರ ಕುರಿತು ಬರೆದದ್ದಲ್ಲದೆ, ಅವರನ್ನೇ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನಿಸಿ ಸನ್ಮಾನಿಸಿದ್ದು ವಿಶೇಷವಾಗಿತ್ತು.
ಪುಸ್ತಕ ಬಿಡುಗಡೆ ಮಾಡಿದ ಕವಿ ಎಚ್.ಎಸ್.ವೆಂಕಟೇಶಮೂರ್ತಿ ಮಾತನಾಡಿ, ಮಣಿಕಾಂತ್ ಸಕಾರಾತ್ಮಕ ಚಿಂತನೆಯ ಮೇಲೆ ಬೆಳಕು ಚೆಲ್ಲಿದವರು. ಇಂದು ಪತ್ರಿಕೆಗಳಲ್ಲಿ ರಾಜಕೀಯ, ಅಪರಾಧದ ಸುದ್ಧಿಗಳನ್ನು ಓದಿ ಭಯಭೀತರಾಗುತ್ತಿದ್ದೇವೆ. ಮನುಷ್ಯರ ನಡುವೆಯೇ ನಂಬಿಕೆ ಕಳೆದುಕೊಳ್ಳುತ್ತಿದ್ದೇವೆ. ಆದರೆ ಇವರ ಅಂಕಣಗಳಲ್ಲಿ ಬರುವ ನಾಯಕರು ಬದುಕಿನ ಕುರಿತು ಭರವಸೆ ಮೂಡಿಸುತ್ತಾರೆ. ಸಮಾಜದಲ್ಲಿ ಇನ್ನೂ ಮಾನವೀಯತೆ ಇದೆ ಎಂಬುದನ್ನು ಸಾಬೀತುಪಡಿಸುತ್ತಾರೆ. ಅವರು ಭಾವನೆಗಳನ್ನು ಅಕ್ಷರರೂಪದಲ್ಲಿರಿಸುವ ಕವಿ. ಮನದ ವೀಣೆ ನುಡಿಯುವಂತೆ ಮಣಿಕಾಂತ್ ಅವರು ಬರೆಯುತ್ತಾರೆ ಎಂದು ಶ್ಲಾಘಿಸಿದರು.
ಸುವರ್ಣನ್ಯೂಸ್ ಹಾಗೂ ಕನ್ನಡಪ್ರಭ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಮಾತನಾಡಿ, ಮಣಿಕಾಂತ್ರಂತಹ ಬರಹಗಾರ ಸಿಕ್ಕಿದ್ದು ನಮ್ಮ ಪುಣ್ಯ. ಅವರ ಶೈಲಿ, ವಿಚಾರಧಾರೆ, ಮುಗ್ದತೆ, ಬರವಣಿಗೆಯ ಆಳ ಹಾಗೂ ಅವರ ಸರಳತೆ ಕುರಿತು ವಿವರಿಸಿದರು.
ನಿರ್ದೇಶಕ ಗುರುಪ್ರಸಾದ್ ಮಾತನಾಡಿ, ಮಣಿಕಾಂತ್ ಅವರು ಸರಳ ಹಾಗೂ ಪ್ರಾಮಾಣಿಕರು, ಅವರ ಪುಸ್ತಕದಲ್ಲಿ ಬೆಲೆಕಟ್ಟಲಾಗದಷ್ಟು ರೋಮಾಂಚನವನ್ನು ಪಡೆಯಬಹುದು. ಪ್ರತಿಯೊಬ್ಬರೂ ಕೊಂಡು ಓದಬೇಕಾದ ಪುಸ್ತಕ ಎಂದು ವಿವರಿಸಿದರು.
ಪುಸ್ತಕ ರೂಪಿಸಲು ಸಹಕರಿಸಿದ ಪ್ರತಿಯೊಬ್ಬರಿಗೂ ಮಣಿಕಾಂತ ಅಭಿನಂದನೆ ಸಲ್ಲಿಸಿದರು.