ಬಾಲಗಂಗಾಧರನಾಥಶ್ರೀ ಸಾರ್ವಕಾಲಿಕ ಆದರ್ಶ ಸಂತ: ಸಂತೋಷ್ ಗುರೂಜಿ
ಬೆಂಗಳೂರು: ಮಹಾಲಕ್ಷ್ಮಿ ಬಡಾವಣೆ ವಿಧಾನಸಭಾ ಕೇತ್ರ ಕಾಂಗ್ರೆಸ್ ಸಮಿತಿ ಹಾಗೂ ಅನುಶ್ರುತ ಫೌಂಡೇಷನ್ ಟ್ರಸ್ಟ್ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರಿಗಾಗಿ ಕಾಮಾಕ್ಷಿಪಾಳ್ಯ ವೃಷಭಾವತಿನಗರದಲ್ಲಿ ಭಾನುವಾರ 'ಸೇವಾ ಶ್ರದ್ಧಾಂಜಲಿ' ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಸಂತೋಷ್ ಗುರೂಜಿ ಅವರು, ಆದಿಚುಂಚನಗಿರಿಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ಸಾರ್ವಕಾಲಿಕ ಆದರ್ಶ ಸಂತ. ಅವರ ಆದರ್ಶಗಳನ್ನು ಪಾಲಿಸುತ್ತಾ ಅವರನ್ನು ಸ್ಮರಿಸಿಕೊಳ್ಳುವ ಅಗತ್ಯವಿದೆ ಎಂದರು. ಅನುಶ್ರುತ ಫೌಂಡೇಷನ್ ಟ್ರಸ್ಟ್ ಶ್ರೀಗಂಧ, ತುಳಸಿ ಮುಂತಾದ ಗಿಡಗಳನ್ನು ಹಂಚುವುದನ್ನು ಶ್ಲಾಘಿಸಿದ ಅವರು ಗಂಧದ ಗುಡಿ ಎಂದೇ ಹೆಸರಾದ ನಾಡಿನಲ್ಲಿ ಗಂಧದ ಕೊರತೆ ಹೆಚ್ಚಾಗಿದ್ದು, ಶ್ರೀಗಂಧವನ್ನು ಕೇವಲ 'ಗಂಧದ ಗುಡಿ' ಚಲನಚಿತ್ರದಲ್ಲಿ ಕಾಣುವಂತಹ ಪರಿಸ್ಥಿತಿ ಸಮೀಪಿಸಿದೆ ಎಂದು ವಿಷಾದಿಸಿದರು.
ಶಾಸಕ, ಅನುಶ್ರುತ ಫೌಂಡೇಷನ್ ಟ್ರಸ್ಟ್ ಅಧ್ಯಕ್ಷ ನೆ.ಲ.ನರೇಂದ್ರಬಾಬು ಅವರು ಮಾತನಾಡಿ, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ನಮ್ಮೊಂದಿಗಿಲ್ಲದಿದ್ದರೂ ಅವರ ಕಾರ್ಯಸಾಧನೆ, ಸೇವೆ ಎಂದಿಗೂ ನಮಗೆ ಆದರ್ಶವಾಗಿರುತ್ತವೆ ಎಂದರು. ಸ್ವಾಮೀಜಿ ಅವರ ಶಿಕ್ಷಣ, ಪರಿಸರ, ಆರೋಗ್ಯ ಕುರಿತ ಕಾಳಜಿ, ಅನ್ನ ದಾಸೋಹಗಳೇ ಟ್ರಸ್ಟ್ ಕಾರ್ಯಕ್ಕೆ ಪ್ರೇರಣೆ ಎಂದರು.
ಕುಣಿಗಲ್ನ ಶ್ರೀಸಿದ್ಧರಾಮ ಚೈತನ್ಯ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಿದ್ದರು. ಇದೇ ಸಂದರ್ಭದಲ್ಲಿ ವೈದ್ಯಕೀಯ ತಪಾಸಣಾ ಶಿಬಿರ ಏರ್ಪಡಿಸಿದ್ದಲ್ಲದೆ ಆಯ್ದ ಫಲಾನುಭವಿಗಳಿಗೆ ಸೈಕಲ್, ತಳ್ಳುಗಾಡಿ, ಇಸ್ತ್ರಿಪೆಟ್ಟಿಗೆ ಇತ್ಯಾದಿ ನೀಡಲಾಯಿತು.