ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ನಗರ

ಬಾಲಮಂದಿರ ಮಕ್ಕಳಿಗೆ ತುಪ್ಪ

Parashurama
Updated On : 18 Feb 2013, 12:54 pm

ಬೆಂಗಳೂರು: ಬಾಲಮಂದಿರದ ಮಕ್ಕಳಿಗೆ ಇನ್ನು ಕೆಎಂಎಫ್‌ನ ನಂದಿನಿ ತುಪ್ಪ ತಿನ್ನುವ ಭಾಗ್ಯ. ಹೌದು, ಹಣ್ಣು, ಹಾಲು, ಬಾಳೆಹಣ್ಣು, ಮೊಟ್ಟೆ, ಮಾಂಸ ಆಯ್ತು ಈಗ ತುಪ್ಪ ತಿನ್ನುವ ಅವಕಾಶ ಮಕ್ಕಳಿಗೆ ಲಭಿಸಲಿದೆ.
ರಾಜ್ಯದ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗರಂ ಆಗಿದ್ದ ಹೈಕೋರ್ಟ್, ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಹಾಗೂ ಗುಣಮಟ್ಟದ ಆಹಾರ ನೀಡುವ ಉದ್ದೇಶದಿಂದ ರಾಜ್ಯದ ಬಾಲಮಂದಿರ, ಶಿಶುಮಂದಿರ, ವೀಕ್ಷಣಾಲಯ, ಬಾಲಕಿಯರ ವೀಕ್ಷಣಾಲಯಗಳಲ್ಲಿ 18 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ತುಪ್ಪ ನೀಡಲು ಸರ್ಕಾರ ಮುಂದಾಗಿದೆ.
ಕೆಎಂಎಫ್‌ನಿಂದ ನಂದಿನಿ ತುಪ್ಪ ಕೊಂಡು ಮಕ್ಕಳಿಗೆ ನೀಡುವಂತೆ ಸರ್ಕಾರ ಸೂಚಿಸಿದ್ದು, ಇನ್ನು ಕೆಲವೇ ದಿನಗಳಲ್ಲಿ ತುಪ್ಪ ನೀಡುವ ಯೋಜನೆ ಜಾರಿಗೆ ಬರಲಿದೆ. ಸದ್ಯ ಬಾಲಮಂದಿರದಲ್ಲಿರುವ ಮಕ್ಕಳಲ್ಲಿ ಅಪೌಷ್ಟಿಕತೆ ಇಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಹಾಗೂ ಅವರಿಗೆ ಉತ್ತಮ ಆಹಾರದ ಜತೆಗೆ ತುಪ್ಪವನ್ನೂ ನೀಡಲು ಸರ್ಕಾರ ನಿರ್ಧರಿಸಿದೆ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು.
ಯಾರಿಗೆ ಎಷ್ಟು?: ಬಾಲಮಂದಿರಕ್ಕೆ ಭಿಕ್ಷುಕರು, ಬಾಲಕಾರ್ಮಿಕರು ಸೇರಿದಂತೆ ಬಡಮಕ್ಕಳು ಬರುತ್ತಾರೆ. ಮಕ್ಕಳನ್ನು ಅವರ ಪೋಷಕರ ವಶಕ್ಕೆ ಒಪ್ಪಿಸುವವರೆಗೂ ಸರ್ಕಾರದ ಸಂಸ್ಥೆಗಳಲ್ಲಿ ಇರುವವರೆಗೂ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಜತೆಗೆ ಅವರ ಆರೋಗ್ಯವನ್ನೂ ಸಮರ್ಪಕವಾಗಿ ಕಾಪಾಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ. ಆದ್ದರಿಂದ ವಿವಿಧ ಯೋಜನೆಗಳಡಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಈಗ ತುಪ್ಪ ನೀಡಲಾಗುವುದು.
ಎಳೆಮಗುವಿನಿಂದ 12 ವರ್ಷದವರೆಗಿನ ಮಗುವಿಗೆ ಪ್ರತಿದಿನ 10 ಗ್ರಾಂ ಹಾಗೂ 12 ವರ್ಷ ಮೇಲ್ಪಟ್ಟ ಮಗುವಿಗೆ ಪ್ರತಿದಿನ 15 ಗ್ರಾಂ ತುಪ್ಪ ನೀಡುವಂತೆ ಸರ್ಕಾರ ಸೂಚಿಸಿದೆ. ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿ(ಐಸಿಪಿಎಸ್) ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಲಾಗುತ್ತಿದೆ.
ಕೆಎಂಎಫ್ ಜತೆ ಮಾತುಕತೆ: ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಕೆಎಂಎಫ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಹೊರಗೆ ಇರುವ ಬೆಲೆಯಲ್ಲಿಯೇ ತುಪ್ಪ ಖರೀದಿಸುವಂತೆ ಕೆಎಂಎಫ್ ಕೇಳಿಕೊಂಡಿದೆ. ಸಕಾಲದಲ್ಲಿ ಹಣ ಪಾವತಿಸಲು ಸಾಧ್ಯವಾಗದಿದ್ದರೆ ಸಾಲದ ರೂಪದಲ್ಲಿ ತುಪ್ಪ ನೀಡಲಾಗುವುದು ಎಂದೂ ಕೆಎಂಎಫ್ ಹೇಳಿದ್ದು, ಇಲಾಖೆ ನಂತರದಲ್ಲಿ ಸಾಲ ಮರುಪಾವತಿ ಮಾಡಬೇಕಾಗುತ್ತದೆ. ರಾಜ್ಯದಲ್ಲಿ ಎರಡೂವರೆ ಸಾವಿರಕ್ಕೂ ಹೆಚ್ಚು ಮಕ್ಕಳು ಈ ಯೋಜನೆಯಡಿ ತುಪ್ಪ ತಿನ್ನಲಿದ್ದಾರೆ. ತುಪ್ಪ ತಿನ್ನುವುದರಿಂದ ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಿಸಲು ಸಾಧ್ಯವಿಲ್ಲ. ಆದರೆ, ಮುಂದಾಗುವ ಅನಾಹುತ ತಪ್ಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ. ತುಪ್ಪದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗಿರುವುದರಿಂದ ಎಣ್ಣೆಯಂತೆ ಮಕ್ಕಳಿಗೆ ತುಪ್ಪವೂ ಮುಖ್ಯ ಎನ್ನುತ್ತಾರೆ ಅಧಿಕಾರಿಗಳು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement