ಮೆಟ್ರೋ ಸುರಂಗ ಮಾರ್ಗದಲ್ಲೂ ಮೊಬೈಲ್ ಸಂಪರ್ಕ
ಬೆಂಗಳೂರು: ನಮ್ಮ ಮೆಟ್ರೋ ರೈಲು ಸುರಂಗಮಾರ್ಗದಲ್ಲಿ ಚಲಿಸುತ್ತಿರುವಾಗಲೂ ಮೊಬೈಲ್ ಸಂಪರ್ಕ ದೊರೆಯುವಂತಹ ತಂತ್ರಜ್ಞಾನವನ್ನು ಬಿಎಂಆರ್‌ಸಿಎಲ್ ಪರಿಚಯಿಸಿದೆ.
ಸೆಂಟ್ರಲ್ ಕಾಲೇಜಿನಿಂದ ಮೆಜೆಸ್ಟಿಕ್‌ವರೆಗಿನ 9 ಕಿ.ಮೀ ದೂರದ ಮೆಟ್ರೋ ಸುರಂಗಮಾರ್ಗದಲ್ಲಿ ವ್ಯಾಲ್ಯು ಪಾಯಿಂಟ್ ಸಿಸ್ಟಂ ಸಂಸ್ಥೆಯ ಸಹಯೋಗದೊಂದಿಗೆ ಬಿಎಂಆರ್‌ಸಿಎಲ್ ಈ ನೂತನ ತಂತ್ರಜ್ಞಾನವನ್ನು ಅಳವಡಿಸಿದೆ. ಈ ಮೂಲಕ ಜಗತ್ತಿನಲ್ಲಿ ಉತ್ತಮ ರೈಲು ಮಾರ್ಗ ವ್ಯವಸ್ಥೆ ರೂಪಿಸುವ ಪ್ರಯತ್ನವನ್ನು ಮೆಟ್ರೋ ಇಲಾಖೆ ಮಾಡಿದೆ.
ಸುರಂಗ ಮಾರ್ಗದೊಳಗೆ ಹೋಗುತ್ತಿರುವಂತೆ ಮೊಬೈಲ್ ಕರೆಗಳ ಸಂಪರ್ಕ ತಪ್ಪಿಹೋಗುವುದು ಸಾಮಾನ್ಯ. ಆದರೆ ಮೊಬೈಲ್‌ನ ವೈಫೈ ತರಂಗಗಳು ಅಡ್ಡಿ ಇಲ್ಲದಂತೆ ಕಾರ್ಯ ನಿರ್ವಹಿಸಲು ಹೊರಗಿನ ರೇಡಿಯೋ ತರಂಗಗಳನ್ನು ಸುರಂಗ ಮಾರ್ಗದ ಉದ್ದಕ್ಕೂ ಕೇಬಲ್ ಸಹಾಯದಿಂದ ಕೊಂಡೊಯ್ಯಲಾಗುತ್ತಿದೆ. ಈ ಪ್ರಕ್ರಿಯೆಯಿಂದ ಸುರಂಗದೊಳಗೂ ಸಂಪರ್ಕ ಪಡೆಯಬಹುದು.
ಜಗತ್ತಿನ ಕೆಲವೇ ಮೆಟ್ರೋ ಮಾರ್ಗದಲ್ಲಿ ಈ ವ್ಯವಸ್ಥೆ ಇದ್ದು, ನಗರದಲ್ಲಿಯೂ ಇದನ್ನು ಅಳವಡಿಸುತ್ತಿರುವುದು ವಿಶೇಷ.