ವಿ.ಕೃಷ್ಣಮೂರ್ತಿ ರಾವ್ಗೆ ಪುತಿನ ಕಾವ್ಯ ಪುರಸ್ಕಾರ
ಬೆಂಗಳೂರು: ವಿ.ಕೃಷ್ಣಮೂರ್ತಿ ರಾವ್ ಅವರಿಗೆ ಡಾ.ಪು.ತಿ.ನ. ಟ್ರಸ್ಟ್ನ 2011ನೇ ಸಾಲಿನ 'ಪುತಿನ ಕಾವ್ಯ ಪುರಸ್ಕಾರ' ನೀಡಿ ಗೌರವಿಸಲಾಗಿದೆ. ಭಾನುವಾರ ಜಯನಗರದ ನ್ಯಾಷನಲ್ ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ವಿ.ಕೃಷ್ಣಮೂರ್ತಿ ರಾವ್ ಅವರ 'ಶೃತಿ ಹಿಡಿದು ಶೂನ್ಯದಲಿ' ಕೃತಿಗೆ ಈ ಪುರಸ್ಕಾರ ಲಭಿಸಿದ್ದು, ಡಾ.ಸಿ.ಎನ್. ರಾಮಚಂದ್ರ ರಾವ್ ಅವರು ಪುರಸ್ಕಾರ ಪ್ರದಾನ ಮಾಡಿದರು. ಬಳಿಕ ಮಾತನಾಡಿದ ರಾಮಚಂದ್ರ ರಾವ್ ಅವರು, ಕೃಷ್ಣಮೂರ್ತಿ ಅವರ ಕಾವ್ಯದಲ್ಲಿ ಪ್ರತಿಮಾತ್ಮಕ ಧ್ವನಿ ಇದೆ. ಆದ್ದರಿಂದ ಅವರ ಕಾವ್ಯ ಹೇಳಿಕೆ, ಉಪದೇಶಗಳು ಎಂದೆನಿಸದೆ ಗಾಢ ಅನುಭವಗಳ ಸಫಲ ಅಭಿವ್ಯಕ್ತಿ ಎನಿಸಿಕೊಳ್ಳುತ್ತದೆ ಎಂದರು. ವಿಮರ್ಶಕ ಜಿ.ಪಿ. ಬಸವರಾಜು ಅವರು ಕೃತಿ ಬಗ್ಗೆ ಮಾತನಾಡಿ, ಕೃಷ್ಣಮೂರ್ತಿ ಅವರದ್ದು ಪ್ರೇಮಕೇಂದ್ರಿತ ಕೃತಿ. ಗಾಢ ಪ್ರೀತಿಯಿಂದಾಗಿ ಅವರ ಕೃತಿಯಲ್ಲಿ ಗಾಢ ಭಾವನೆ ಇದೆ. ಅವರು ಪ್ರತಿ ಕೆಲಸವನ್ನೂ ಅತಿ ಉತ್ಸಾಹ ಹಾಗೂ ಶ್ರದ್ಧೆಯಿಂದ ಮಾಡುತ್ತಾರಾದ್ದರಿಂದ ಅವರ ಕಾವ್ಯದಲ್ಲಿ ವಿಷಾದ ಭಾವನೆಯಿಲ್ಲ ಎಂದರು. ಡಾ.ಎಚ್.ವಿ. ರಂಗಾಚಾರ್, ಕವಿ ಎಚ್.ಎಸ್. ವೆಂಕಟೇಶಮೂರ್ತಿ, ಟ್ರಸ್ಟ್ ಕಾರ್ಯದರ್ಶಿ ಡಾ.ಶ್ರೀರಾಮಭಟ್ಟ ಹಾಜರಿದ್ದರು.