ಸಹೋದರಿಗೆ ಹಲ್ಲೆ ಪ್ರಕರಣ; ದಂಡ
ಬೆಂಗಳೂರು: ಮದ್ಯಪಾನ ಸೇವಿಸಿ ಬಂದು, ಸಹೋದರಿ ಮೇಲೆ ಹಲ್ಲೆ ಮಾಡಿದ್ದ ವ್ಯಕ್ತಿಗೆ ಹೆಚ್ಚುವರಿ ಎಸಿಎಂಎಂ ನ್ಯಾಯಾಲಯ ಒಂದು ಸಾವಿರ ರುಪಾಯಿ ದಂಡ ವಿಧಿಸಿದೆ. ಚಾಮರಾಜಪೇಟೆ ಸಮೀರಪುರ ನಿವಾಸಿ ರಾಮಚಂದ್ರರಾವ್ ಶಿಕ್ಷೆಗೊಳಗಾದವರು. ಮದ್ಯವ್ಯಸನಿಯಾಗಿದ್ದ ರಾಮಚಂದ್ರರಾವ್ ಪ್ರತಿನಿತ್ಯ ಮದ್ಯ ಸೇವಿಸಿ ಮನೆಗೆ ಬರುತ್ತಿದ್ದರು. 2003ರ ಮೇ 23ರಂದು ಮದ್ಯಸೇವಿಸಿ ಮನೆಗೆ ಬಂದ ಅವರು ತನ್ನ ಸಹೋದರಿ ಇಂದಿರಾಬಾಯಿ ಅವರನ್ನು ನಿಂದಿಸಿ, ಕಬ್ಬಿಣದ ಸಲಾಕೆಯಿಂದ ಹಲ್ಲೆ ಮಾಡಿದ್ದರು. ಕೆಂಪೇಗೌಡ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಬಸ್ ಅಪಘಾತ10 ಮಂದಿಗೆ ಗಾಯ
ನೆಲಮಂಗಲ: ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ 4ರ ಮಾದನಾಯಕನಹಳ್ಳಿ ಬಳಿ ಬಸ್ಸೊಂದು ಲಾರಿಯೊಂದನ್ನು ಹಿಂದಿಕ್ಕಲು ಪ್ರಯತ್ನಿಸಿದಾಗ ಅವಘಡ ಸಂಭವಿಸಿ ಬಸ್ಸಿನಲ್ಲಿದ್ದ 10 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.
ಬಸ್ಸಿನಲ್ಲಿ ಗಾಯಗೊಂಡ 10 ಜನ ಪ್ರಯಾಣಿಕರನ್ನು ಬೆಂಗಳೂರು ಮತ್ತು ನೆಲಮಂಗಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಿನಿಂದ ನೆಲಮಂಗಲದ ಕಡೆ ಬಸ್ ಬರುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಈ ಬಗ್ಗೆ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.