ದೇವಸ್ಥಾನ ಸಿಬ್ಬಂದಿಗೆ ವೇತನಾತಂಕ
ಬೆಂಗಳೂರು: ಒಂದೇ ದೇವಸ್ಥಾನದಲ್ಲಿ ಒಬ್ಬರಿಗೆ 'ಪಂಚಕಜ್ಜಾಯ', ಮತ್ತೊಬ್ಬರಿಗೆ ಬರೀ 'ತೀರ್ಥ'..!
ಇದು ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಸಿಬ್ಬಂದಿಗೆ ಮುಂದೆ ಒದಗಬಹುದಾದ ದುಸ್ಥಿತಿ. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ನಿಯಮಗಳಿಗೆ ಸರ್ಕಾರ ತಿದ್ದುಪಡಿ ತಂದಿರುವುದರಿಂದ ಮುಜರಾಯಿ ದೇವಸ್ಥಾನಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 2 ಸಾವಿರ ಸಿಬ್ಬಂದಿ ಇಂತಹದ್ದೊಂದು ಆತಂಕ ಎದುರಿಸುವಂತಾಗಿದೆ.
ಒಂದು ವೇಳೆ ಈ ನೂತನ ನಿಯಮಾನುಸಾರ ಪರಿಷ್ಕೃತ ಶ್ರೇಣಿಯಲ್ಲಿ ವೇತನ ನೀಡಲಾರಂಭಿಸಿದರೆ ಒಂದೇ ದೇವಸ್ಥಾನದಲ್ಲಿ ಒಂದೇ ತೆರನಾದ ಕೆಲಸ ಮಾಡುವ ಸಿಬ್ಬಂದಿಯ ಸಂಬಳದಲ್ಲಿ ಅಜಗಜಾಂತರ ಉಂಟಾಗಲಿದೆ. ಈ ತಾರತಮ್ಯ ದೇವಸ್ಥಾನದ ಸಿಬ್ಬಂದಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿಸುವ ಸಾಧ್ಯತೆ ಇದೆ.
ಹಾಗಿತ್ತು, ಹೀಗಾಯ್ತು: ಧಾರ್ಮಿಕ ಮತ್ತು ದತ್ತಿ ಇಲಾಖೆಯ ಆಡಳಿತಕ್ಕೊಳಪಟ್ಟ ಅಧಿಸೂಚಿತ ಸಂಸ್ಥೆಗಳಲ್ಲಿ ಪಿಂಚಣಿ ರಹಿತ ಹುದ್ದೆಗಳಿಗೆ ನೇಮಕವಾಗಿ ದೇವಾಲಯದ ನಿಧಿಯಿಂದ ವೇತನ ಪಡೆಯುತ್ತಿರುವ ಹಲವಾರು ನೌಕರರಿಗೆ ದ್ವಿತೀಯ ದರ್ಜೆ ಸಹಾಯಕರ ವೇತನ ಶ್ರೇಣಿ ನಿಗದಿಪಡಿಸಿದ ಸರ್ಕಾರ ಕಾಲಕಾಲಕ್ಕೆ ಅನ್ವಯಿಸುವ ತುಟ್ಟಿಭತ್ಯೆ, ಮತ್ತಿತರ ಭತ್ಯೆಗಳನ್ನು 1997ರ ಡಿಸೆಂಬರ್ನಲ್ಲಿ ಮಂಜೂರು ಮಾಡಿತ್ತು.
ಆ ಪ್ರಕಾರ ಅಧಿಸೂಚಿತ ದೇವಸ್ಥಾನಗಳಲ್ಲಿ 5 ವರ್ಷಗಳ ಅವಿರತ ಸೇವೆ ಪೂರೈಸಿದ ಸಿಬ್ಬಂದಿಗೆ ಸರ್ಕಾರದಿಂದ ಸಿ ಮತ್ತು ಡಿ ಸಮೂಹದ ವೇತನ ಶ್ರೇಣಿ ಮಂಜೂರಾಗಿತ್ತು. ಬಳಿಕ ದೇವಾಲಯದ ಸಿಬ್ಬಂದಿಗೆ ಸರ್ಕಾರಿ ವೇತನ ಶ್ರೇಣಿ ನೀಡುವ ಅಧಿಕಾರವನ್ನು ಸರ್ಕಾರ ಕೆಲವು ಷರತ್ತುಗಳ ಮೇಲೆ ಧಾರ್ಮಿಕ ಮತ್ತು ದತ್ತಿ ಇಲಾಖೆ ಆಯುಕ್ತರಿಗೆ ವಹಿಸಿತು.
2003ರ ಮೇ 1ರಿಂದ ಕಾರ್ಯಾರ್ಥ ಏರ್ಪಾಟಿನ ಮೇಲೆ ನೇಮಕಗೊಂಡ ಸಿಬ್ಬಂದಿ ಸೇರಿದಂತೆ 5 ವರ್ಷ ಸೇವೆ ಸಲ್ಲಿಸಿದ ಎಲ್ಲ ಸಿಬ್ಬಂದಿಗೆ ಧಾರ್ಮಿಕ ಮತ್ತು ದತ್ತಿ ವತಿಯಿಂದ ಸರ್ಕಾರಿ ವೇತನ ಶ್ರೇಣಿ ನೀಡಲಾಗಿತ್ತು. ಈ ಪ್ರಕ್ರಿಯೆ 1997 ರಿಂದ 2010ರ ವರೆಗೂ ನಿರಂತರವಾಗಿ ನಡೆದಿದೆ.
ಹೀಗಾಗುತ್ತದೆ: ತಿದ್ದುಪಡಿ ಪ್ರಕಾರ, ದೇವಳದ ಸಿಬ್ಬಂದಿಗೆ ವಾರ್ಷಿಕ ಬಡ್ತಿ ಮಾತ್ರ ನಿಗದಿಯಾಗಿದ್ದು, ತುಟ್ಟಿಭತ್ಯೆ ಹಾಗೂ ಇತರ ಭತ್ಯೆಗಳಿಗೆ ಅವಕಾಶವಿಲ್ಲ. ಇದರಿಂದಾಗಿ ಹಳೆಯ ಮತ್ತು ಹೊಸ ಶ್ರೇಣಿಯಲ್ಲಿ ವೇತನ ಪಡೆಯುವವರ ಮಧ್ಯೆ ಭಾರಿ ವ್ಯತ್ಯಾಸ ಉಂಟಾಗುತ್ತದೆ.
ವೇತನ ತಾರತಮ್ಯ: 1997ರಿಂದ 2010ರ ವರೆಗೆ ದೇವಸ್ಥಾನದಲ್ಲಿ ಕೆಲಸ ಮಾಡಿ 5 ವರ್ಷ ಪೂರೈಸಿದ ಎಲ್ಲರಿಗೂ 1997ರ ವೇತನ ಶ್ರೇಣಿಯಂತೆ ಸಂಬಳ ಲಭಿಸುತ್ತಿತ್ತು. ಈ ನಡುವೆ, ಮುಂದೆ ಆಗಲಿರುವ ತಿದ್ದುಪಡಿ ನೆಪ ಹೇಳಿ 5 ವರ್ಷ ಪೂರೈಸಿದ ಸಿಬ್ಬಂದಿಗೆ ವೇತನ ಶ್ರೇಣಿ ನೀಡುವುದನ್ನು 2010ರಲ್ಲಿ ಸ್ಥಗಿತಗೊಳಿಸಲಾಗಿತ್ತು. ಹಾಗಾಗಿ, 2006ರಿಂದ ಕಾರ್ಯನಿರ್ವಹಿಸಿ, 5 ವರ್ಷ ಪೂರೈಸಿರುವ ಸಾವಿರಾರು ಸಿಬ್ಬಂದಿ 1997ರ ವೇತನ ಶ್ರೇಣಿಯಿಂದ ವಂಚಿತರಾಗಿದ್ದಾರೆ. ಮತ್ತೊಂದೆಡೆ, ನೂತನ ವೇತನ ಶ್ರೇಣಿಯಲ್ಲಿ ತುಟ್ಟಿಭತ್ಯೆ, ಇತರ ಭತ್ಯೆ ಸೇರಿಲ್ಲ. ಹಾಗಾಗಿ, ಒಂದು ವೇಳೆ ನೂತನ ವೇತನ ಶ್ರೇಣಿ ಪ್ರಕಾರ ವೇತನ ನೀಡಲಾರಂಭಿಸಿದರೆ ಹಲವು ವರ್ಷಗಳ ಕಾಲ ಒಂದೇ ದೇವಸ್ಥಾನದಲ್ಲಿ ಒಂದೇ ತೆರನಾದ ಕೆಲಸ ಮಾಡುತ್ತಿದ್ದವರ ವೇತನದಲ್ಲಿ ಅಜಗಜಾಂತರ ಆಗಲಿದೆ. ಆದ್ದರಿಂದ, 2012ರ ನಿಯಮ ತಿದ್ದುಪಡಿಗೂ ಮುನ್ನ ಕಾರ್ಯನಿರ್ವಹಿಸುತ್ತಿರುವ ಎಲ್ಲರಿಗೂ 1997ರ ವೇತನ ಶ್ರೇಣಿಯನ್ನೇ ನೀಡಬೇಕು ಎಂಬುದು ಆತಂಕಗೊಂಡಿರುವ ಸಿಬ್ಬಂದಿಯ ಆಗ್ರಹ.
ಸಿಎಂ ಸೂಚನೆ, ಪರಿಷತ್ ಸಹಮತ: ಹಿಂದೆ ನಡೆದ ಧಾರ್ಮಿಕ ಪರಿಷತ್ ಸಭೆಯಲ್ಲೂ ಈ ವಿಷಯ ಚರ್ಚೆಯಾಗಿದ್ದು, ಆ ಬಗ್ಗೆ ಪರಿಷತ್ ಕೂಡ ಸಹಮತ ವ್ಯಕ್ತಪಡಿಸಿದೆ. ಅಲ್ಲದೆ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಕೂಡ ದೇವಸ್ಥಾನದ ಸಿಬ್ಬಂದಿ ವೇತನದಲ್ಲಿನ ತಾರತಮ್ಯ ನೀಗಿಸಲು ಕ್ರಮಕೈಗೊಳ್ಳುವಂತೆ ಅವರ ಅಧಿಕಾರಾವಧಿಯಲ್ಲಿ ಸೂಚಿಸಿದ್ದರು. ಆದರೂ ಆ ಬಗ್ಗೆ ಇದುವರೆಗೂ ಯಾವುದೇ ಸಕಾರಾತ್ಮಕ ನಿರ್ಧಾರ ಹೊರಬರದಿರುವ ಬಗ್ಗೆ ಮುಜರಾಯಿ ದೇವಸ್ಥಾನಗಳ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
-ರವಿಕಾಂತ ಕುಂದಾಪುರ