ಕೆಲ ವರ್ಗದಿಂದ ವಿವೇಕಾನಂದರ ದುರ್ಬಳಕೆ
ಬೆಂಗಳೂರು: ಸ್ವಾಮಿ ವಿವೇಕಾನಂದರನ್ನು ಕೆಲವು ವರ್ಗದವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಹೇಳಿದ್ದಾರೆ.
ವಿಶ್ವಮಾನವ ಪ್ರತಿಮಾ ಪ್ರತಿಷ್ಠಾಪನಾ ಸಮಿತಿ ಟ್ರಸ್ಟ್ ಭಾನುವಾರ ನಗರದಲ್ಲಿ ಏರ್ಪಡಿಸಿದ್ದ 'ವಿವೇಕ ಸಂಚಲನ' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತದ ಆಧ್ಯಾತ್ಮಿಕ ತತ್ವವನ್ನು ಜಗತ್ತಿಗೆ ಸಾರಿದ ಸ್ವಾಮಿ ವಿವೇಕಾನಂದರು ವಿಶ್ವಮಾನವ. ಅವರು ಯಾವುದೇ ಒಂದು ಜಾತಿ, ಸಮುದಾಯಕ್ಕೆ ಸೇರಿದವರಲ್ಲ. ಆದರೆ, ಕೆಲವರು ವಿವೇಕಾನಂದರನ್ನು ಕೇವಲ ಒಂದು ವರ್ಗಕ್ಕೆ ಸೀಮಿತಗೊಳಿಸಿ, ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ ಎಂದರು.
ವಿವೇಕಾನಂದರು ನಮ್ಮ ದೇಶದ ವೇದೋಪನಿಷತ್ಗಳನ್ನು ಪಾಶ್ಚಿಮಾತ್ಯರಿಗೆ ಬೋಧಿಸಿದ್ದರು. ಇದನ್ನಾಧರಿಸಿಯೇ ಇಂದಿಗೂ ಪಾಶ್ಚಿಮಾತ್ಯರು ವಿವೇಕಾನಂದರ ಮಾರ್ಗದಲ್ಲೇ ಆಧ್ಯಾತ್ಮಿಕ ಜೀವನ ಹುಡುಕುತ್ತಿದ್ದಾರೆ. ಆದರೆ, ನಮ್ಮಲ್ಲಿರುವ ಆಧ್ಯಾತ್ಮಿಕ ಸಂಪತ್ತನ್ನು ನಮ್ಮವರೇ ಕಡೆಗಣಿಸುತ್ತಿರುವುದು ಬೇಸರದ ಸಂಗತಿ ಎಂದು ಭಾರದ್ವಾಜ್ ಹೇಳಿದರು.
ಯೂರೋಪ್, ರಷ್ಯಾ ಸೇರಿದಂತೆ ಅನೇಕ ರಾಷ್ಟ್ರಗಳು ಬೌದ್ಧಿಕವಾಗಿ ಶ್ರೀಮಂತವಾಗಿದ್ದರೂ ಸಾಂಸ್ಕೃತಿಕವಾಗಿ ತೀರಾ ಬಡವಾಗಿವೆ. ಇದನ್ನರಿತ ಅವರು ನಮ್ಮ ಸಂಸ್ಕೃತಿಯನ್ನು ಹೆಚ್ಚು ಅಳವಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಅದೇರೀತಿ ನಮ್ಮವರು ವಿದೇಶಿ ಸಂಸ್ಕೃತಿಯನ್ನು ಪಾಲಿಸುತ್ತಿದ್ದಾರೆ. ಆದರೆ, ಇದರಿಂದಾಗಿ ನಮ್ಮವರು ನಾನಾ ರೀತಿಯ ಸಾಮಾಜಿಕ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ವಿಶ್ಲೇಷಿಸಿದರು. ಮಣಿಪಾಲ್ ಶಿಕ್ಷಣ ಸಮೂಹ ಸಂಸ್ಥೆಗಳ ಮುಖ್ಯಸ್ಥ ಟಿ.ವಿ. ಮೋಹನ್ದಾಸ್ ಪೈ ಮಾತನಾಡಿ, ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ತಿಳಿಸಿ ಹೇಳುವ ಶಿಕ್ಷಣದ ಅಗತ್ಯವಿದೆ ಎಂದು ಹೇಳಿದರು. ತಂತ್ರಜ್ಞಾನ ಹಾಗೂ ಸ್ಪರ್ಧಾತ್ಮಕ ಯುಗದಲ್ಲಿ ಮೌಲ್ಯಗಳ ಕೊರತೆಯಿಂದಾಗಿ ಮಕ್ಕಳು ಪ್ರಾಥಮಿಕ ಹಂತದಲ್ಲೇ ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಅದರಲ್ಲೂ ಪಾಶ್ಚಿಮಾತ್ಯ ಶಿಕ್ಷಣ ಅಳವಡಿಸಿಕೊಂಡು ಗುರುಕುಲ ಪರಿಕಲ್ಪನೆಯನ್ನೇ ಮರೆಯುವಂತಾಗಿದೆ. ಆದ್ದರಿಂದ ಇಂದಿನ ಸಮಸ್ಯೆಗಳಿಗೆ ಸ್ವಾಮಿ ವಿವೇಕಾನಂದರ ಮಾತುಗಳು ಪ್ರಸ್ತುತ ಹಾಗೂ ಪರಿಹಾರವಾಗುತ್ತದೆ ಎಂದು ಮೋಹನ್ದಾಸ್ ಪೈ ಅಭಿಪ್ರಾಯಪಟ್ಟರು. ವಿಶ್ವಮಾನವ ಪ್ರತಿಮಾ ಪ್ರತಿಷ್ಠಾಪನಾ ಸಮಿತಿಯ ವ್ಯವಸ್ಥಾಪಕ ಟ್ರಸ್ಟೀ ಸ್ವಾಮಿ ಜಪಾನಂದ ಹಾಜರಿದ್ದರು.