ಪಿಆರ್‌ಒ ಲತಾಗೆ ರಾಷ್ಟ್ರಮಟ್ಟದ ಚಾಣಕ್ಯ ಪ್ರಶಸ್ತಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಟಿ.ಎಸ್. ಲತಾ ಅವರಿಗೆ ರಾಷ್ಟ್ರಮಟ್ಟದಲ್ಲಿ ಸಂವಹನ ಕ್ಷೇತ್ರದಲ್ಲಿ ಸಾಧನೆ ತೋರಿರುವವರಿಗೆ ನೀಡುವ ಚಾಣಕ್ಯ ('ಮೋಸ್ಟ್ ಪ್ರಾಮಿಸಿಂಗ್ ಪಿಆರ್ ಪರ್ಸನ್ ಆಫ್ ದಿ ಇಯರ್-2013')ಪ್ರಶಸ್ತಿ ಲಭಿಸಿದೆ. ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ಸಂಸ್ಥೆಗಳು ಸಲ್ಲಿಸಿರುವ ಸೇವೆ/ಕೊಡುಗೆಗಳನ್ನು ಗುರುತಿಸಿ ನೀಡುವ ಕಾರ್ಪೊರೇಟ್ ಕೊಲ್ಯಾಟರಲ್ ಪ್ರಶಸ್ತಿ ವರ್ಗದಲ್ಲಿ ಕೆಎಸ್‌ಆರ್‌ಟಿಸಿಯ ಆನ್‌ಲೈನ್ ನ್ಯೂಸ್ ಲೆಟರ್, ಕನ್ನಡ ಕಾಫಿ ಟೇಬಲ್ ಪುಸ್ತಕ, ಕಾರ್ಪೊರೇಟ್ ಜಾಹೀರಾತು, ಸಾಕ್ಷ್ಯಚಿತ್ರ ಮತ್ತು ಟೆಲಿವಿಷನ್ ಕಮರ್ಷಿಯಲ್‌ಗಳಿಗೆ ಒಟ್ಟು 5 ಪ್ರಶಸ್ತಿ ಲಭಿಸಿದೆ. ಹೈದರಾಬಾದ್‌ನಲ್ಲಿ ಫೆ.22ರಂದು ನಡೆದ 7ನೇ ವಿಶ್ವ ಸಂವಹನ ಸಮ್ಮೇಳನದಲ್ಲಿ ಟಿ.ಎಸ್. ಲತಾ ಅವರು ಪ್ರಶಸ್ತಿ ಸ್ವೀಕರಿಸಿದರು. ಭದ್ರತಾ ಮತ್ತು ಜಾಗೃತ ವಿಭಾಗದ ನಿರ್ದೇಶಕ ಬಿ.ಕೆ.ಸಿಂಗ್, ಆಂಧ್ರಪ್ರದೇಶದ ಅಬಕಾರಿ ನಿಗ್ರಹ ಇಲಾಖೆ ನಿರ್ದೇಶಕ ಡಿ.ಎಸ್. ಚೌಹಾಣ್ ಹಾಜರಿದ್ದರು.