ಅನುದಾನಕ್ಕೆ ಶಾಸಕರ ದುಂಬಾಲು
ಬೆಂಗಳೂರು: ಸರ್ಕಾರದ ಅವಧಿ ಮುಕ್ತಾಯವಾಗುವ ದಿನ ಸಮೀಪಿಸುತ್ತಿದ್ದಂತೆ ಅನುದಾನಕ್ಕಾಗಿ ಶಾಸಕರು ಮುಖ್ಯಮಂತ್ರಿಗಳಿಗೆ ದುಂಬಾಲು ಬಿದ್ದಿದ್ದಾರೆ.
ಮಂಗಳವಾರ ಸುಮಾರು 15 ಶಾಸಕರು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಮಾಡಿ ತಮ್ಮ ಕ್ಷೇತ್ರಗಳಿಗೆ ಹೆಚ್ಚುವರಿ ಅನುದಾನ ನೀಡುವಂತೆ ಕೋರಿದ್ದಾರೆ.
ನಗರ ಸ್ಥಳೀಯ ಸಂಸ್ಥೆ ಚುನಾವಣೆ ಬೆನ್ನ ಹಿಂದೆಯೇ ವಿಧಾನಸಭೆ ಚುನಾವಣೆಯೂ ಘೋಷಣೆಯಾಗಲಿದೆ. ಈ ಚುನಾವಣೆ ಘೋಷಣೆಯಾದರೆ ಅನುದಾನ ಪಡೆಯಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅನುದಾನ ಪಡೆದುಕೊಳ್ಳಲು ತರಾತುರಿಯಲ್ಲಿ ಪ್ರಯತ್ನ ಆರಂಭಿಸಿದ್ದಾರೆ.
ಇನ್ನೊಂದೆಡೆ ವಿವಿಧ ಇಲಾಖೆಗಳ ಮೂಲಕವೂ ಅನುದಾನ ಪಡೆದುಕೊಳ್ಳಲು ಪ್ರಯತ್ನಿಸುತ್ತಿರುವ ಈ ಶಾಸಕರು, ಇದಕ್ಕಾಗಿ ಸಚಿವರಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ, ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಿರತರಾಗಿರುವ ಸಚಿವರನ್ನು ಹಿಡಿಯುವುದೇ ಇವರಿಗೆ ಕಷ್ಟದ ಕೆಲಸವಾಗಿದೆ.
ಹೆಚ್ಚು ಅನುದಾನ ಕೊಡಿ: ಒಂದೆಡೆ ಆಡಳಿತ ವಿರೋಧ ಅಲೆ, ಇನ್ನೊಂದೆಡೆ ಪಕ್ಷದ ಆಂತರಿಕ ಕಚ್ಚಾಟ, ಕೆಜೆಪಿ ಸ್ಥಾಪನೆಯಿಂದಾಗಿ ಆಡಳಿತ ಪಕ್ಷದ ಶಾಸಕರನೇಕರಿಗೆ ವಿಧಾನಸಭೆ ಚುನಾವಣೆಯಲ್ಲಿ ಪುನರಾಯ್ಕೆಯಾಗಲು ದೊಡ್ಡ ಸಾಹಸವನ್ನೇ ಮಾಡಬೇಕಾಗುತ್ತದೆ. ಇದಕ್ಕಾಗಿ ತಮ್ಮ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಬೇಕು. ಜತೆಗೆ ವಿಶೇಷ ಅನುದಾನವನ್ನೂ ಬಿಡುಗಡೆ ಮಾಡಬೇಕು ಎಂದು ಅನೇಕ ಶಾಸಕರು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ.
ಕಾಂಗ್ರೆಸ್ ಸೇರುವ ಪ್ರಯತ್ನದಲ್ಲಿರುವ ಬೇಳೂರು ಗೋಪಾಲಕೃಷ್ಣ, ಜೆಡಿಎಸ್ಗೆ ಕಾಲಿಡಲು ಮುಂದಾಗಿರುವ ಮಾನಪ್ಪ ವಜ್ಜಲ್ ಸೇರಿದಂತೆ ಹಲವು ಶಾಸಕರು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ನಗರ ಸ್ಥಳೀಯ ಸಂಸ್ಥೆ ಚುನಾವಣೆ ವಿಚಾರವೂ ಚರ್ಚೆಯಾಗಿದೆ.
ಪಕ್ಷ ತೊರೆಯಲು ಮುಂದಾಗಿರುವ ಮಾನಪ್ಪ ವಜ್ಜಲ್ ಅವರ ಮನವೊಲಿಸುವ ಪ್ರಯತ್ನವನ್ನೂ ಮುಖ್ಯಮಂತ್ರಿಗಳು ಮಾಡಿದ್ದು, ಆರ್ಥಿಕ ಇತಿಮಿತಿಯಲ್ಲಿ ಸಾಧ್ಯವಾದಷ್ಟು ಅನುದಾನ ಬಿಡುಗಡೆ ಮಾಡುವ ಭರವಸೆಯನ್ನೂ ನೀಡಿದ್ದಾರೆ. ಜತೆಗೆ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆಯೂ ಮಾತು ಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಗರ ಸ್ಥಳೀಯ ಸಂಸ್ಥೆ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಅನುದಾನ ಬಿಡುಗಡೆ ವಿಚಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗಿದೆ. ಆದರೆ, ವಿಧಾನಸಭೆ ಚುನಾವಣೆ ಘೋಷಣೆಯಾಗುವ ಮುನ್ನ ಎಲ್ಲಾ ಶಾಸಕರಿಗೂ ಅನುದಾನ ನೀಡುವುದಾಗಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಸಚಿವರಿಗೆ ಉಸ್ತುವಾರಿ: ಈ ಮಧ್ಯೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಉಸ್ತುವಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ನೀಡಲಾಗುವುದು. ಉಸ್ತುವಾರಿ ಸಚಿವರು ಇಲ್ಲದ ಜಿಲ್ಲೆಗಳಲ್ಲಿ ಬೇರೆ ಜಿಲ್ಲೆಗಳ ಉಸ್ತುವಾರಿ ಸಚಿವರಿಗೆ ಜವಾಬ್ದಾರಿ ವಹಿಸಲಾಗುವುದು. ಶಾಸಕರ ಮೇಲೆ ಈ ಚುನಾವಣೆಯಲ್ಲಿ ಯಾವುದೇ ಒತ್ತಡ ಹೇರುವುದಿಲ್ಲ. ಆದ್ದರಿಂದ ಎಲ್ಲರೂ ಮುಂದಿನ ವಿಧಾನಸಭೆ ಚುನಾವಣೆ ಬಗ್ಗೆ ಸಿದ್ಧತೆ ಮಾಡಿಕೊಳ್ಳಿ ಎಂಬ ಭರವಸೆಯನ್ನೂ ಮುಖ್ಯಮಂತ್ರಿಗಳು ತಮ್ಮನ್ನು ಭೇಟಿ ಮಾಡಿದ ಶಾಸಕರಿಗೆ ನೀಡಿದ್ದಾರೆ.
ಕಡತ ವಿಲೇವಾರಿಗೆ ಸಿದ್ಧತೆ
ಈ ಮಧ್ಯೆ ಎಲ್ಲಾ ಸಚಿವರು ಕಡತ ವಿಲೇವಾರಿಗೆ ಸಿದ್ಧತೆ ನಡೆಸುತ್ತಿದ್ದು, ಎಲ್ಲಾ ಕಡತಗಳನ್ನು ಸಿದ್ಧಪಡಿಸುವಂತೆ ತಮ್ಮ ಇಲಾಖೆ ಕಾರ್ಯದರ್ಶಿಗಳು, ಆಪ್ತ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ. ನಗರ ಸ್ಥಳೀಯ ಸಂಸ್ಥೆ ಚುನಾವಣೆ ಇರುವುದರಿಂದ ತಾವು ಎಲ್ಲಾ ಸಂದರ್ಭದಲ್ಲಿ ಸಿಗುವುದು ಕಷ್ಟವಾಗುತ್ತದೆ. ಬಿಡುವು ಸಿಕ್ಕಿದಾಗ ಬೆಂಗಳೂರಿಗೆ ಬಂದು ಎಲ್ಲಾ ಕಡತಗಳನ್ನು ಪರಿಶೀಲಿಸಿ ಅಂಕಿತ ಹಾಕುತ್ತೇವೆ. ಆದರೆ, ನಾವು ಬರುವ ಸಂದರ್ಭದಲ್ಲಿ ಎಲ್ಲಾ ಕಡತಗಳು ಸಿದ್ಧವಾಗಿರಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಪ್ರಸಕ್ತ ಆರ್ಥಿಕ ವರ್ಷ ಪೂರ್ಣಗೊಳ್ಳುತ್ತಿದ್ದಂತೆ ವಿಧಾನಸಭೆ ಚುನಾವಣೆ ಎದುರಾಗುತ್ತಿದೆ. ಈ ಸಂದರ್ಭದಲ್ಲಿ ತ್ವರಿತ ಕಡತ ವಿಲೇವಾರಿ ಮಾಡುವುದು ಸಾಮಾನ್ಯ. ಆದರೆ, ನಗರ ಸ್ಥಳೀಯ ಸಂಸ್ಥೆ ಚುನಾವಣೆ ಬಂದಿರುವುದು ಈ ಪ್ರಕ್ರಿಯೆಗೆ ಅಡ್ಡಿಯುಂಟುಮಾಡಿದೆ. ಹೀಗಾಗಿ ಅಧಿಕಾರಿಗಳ ಮೂಲಕ ಕಡತ ವಿಲೇವಾರಿಗೆ ಸಚಿವರು ಆದ್ಯತೆ ನೀಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.