ನಷ್ಟಕ್ಕೆ ಬ್ರೇಕ್ ತಪಾಸಣೆ ಮದ್ದು
ಬೆಂಗಳೂರು: ಟಿಕೆಟ್ ರಹಿತ ಪ್ರಯಾಣದಿಂದ ಸಂಸ್ಥೆಗಾಗುವ ನಷ್ಟ ತಡೆಯಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬೆಂಗಳೂರು ನಗರ ಮತ್ತು ಹೊರವಲಯದ ಬಸ್ಸುಗಳಲ್ಲಿ ತಪಾಸಣೆ ನಡೆಸುತ್ತಿದೆ.ಹದಿನೈದು ದಿನಗಳ ಕಾಲ ನಡೆಯಲಿರುವ ಈ ತಪಾಸಣೆ ಫೆ.22ರಿಂದ ಆರಂಭಗೊಂಡಿದ್ದು, ಮಾ.8 ರವರೆಗೂ ನಡೆಯಲಿದೆ. ಬಿಎಂಟಿಸಿ ಅಧಿಕಾರಿಗಳು ಫೆ.24ರವರೆಗೆ ನಡೆಸಿರುವ ಈ ಕಾರ್ಯಾಚರಣೆಯಲ್ಲಿ ಒಟ್ಟು 4,722 ಬಸ್ಸುಗಳನ್ನು ತಪಾಸಣೆಗೊಳಪಡಿಸಿದ್ದು, 1,608 ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆ ಮಾಡಿದ್ದಾರೆ. ಅಲ್ಲದೆ, ತಪ್ಪಿತಸ್ಥರಿಂದ 1,63,770 ದಂಡ ವಸೂಲಿ ಮಾಡಿದ್ದು, 983 ನಿರ್ವಾಹಕರ ಮೇಲೂ ಕ್ರಮಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿ ಬಸ್ಸುಗಳಲ್ಲಿ ಸಂಚರಿಸುವ ಪ್ರಯಾಣಿಕರು ಅಧಿಕೃತ ಚೀಟಿ, ದಿನದ ಪಾಸು ಅಥವಾ ಮಾಸಿಕ ಪಾಸುಗಳನ್ನು ಪ್ರಯಾಣದ ವೇಳೆ ಅಧಿಕಾರಿಗಳು ಕೋರಿದಲ್ಲಿ ತೋರಿಸುವಂತೆ ಸಂಸ್ಥೆ ಪ್ರಕಟಣೆ ಮೂಲಕ ಕೋರಿದೆ. ಅಲ್ಲದೆ, ನಿರ್ವಾಹಕರು ಹಣ ಪಡೆದು ಟಿಕೆಟ್ ನೀಡದಿದ್ದಲ್ಲಿ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸುವಂತೆಯೂ ಪ್ರಯಾಣಿಕರನ್ನು ಕೋರಿದೆ. ಬಿಎಂಟಿಸಿ ಕಾಲ್ ಸೆಂಟರ್ ಸಂಖ್ಯೆ: 180042516663, ನಿಯಂತ್ರಣ ಕೊಠಡಿ: 7760991399, 7760991499.
ವಿದ್ಯಾರ್ಥಿ ಸಂಘದ ವಜ್ರ ಮಹೋತ್ಸವ
ಬೆಂಗಳೂರು: ಮೈಸೂರಿನ ಸಂತ ಫಿಲೋಮಿನಾ ಕಾಲೇಜು ಹಿರಿಯ ವಿದ್ಯಾರ್ಥಿ ಸಂಘದ ವಜ್ರ ಮಹೋತ್ಸವ ಮಾ.3ರಂದು ನಡೆಯಲಿದೆ. ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ.ಬಿ.ಕೆ. ಚಂದ್ರಶೇಖರ್, ಉಪನ್ಯಾಸಕರಾದ ಪ್ರೊ.ಎಂ. ಕೃಷ್ಣೇಗೌಡ ಅವರು ಭಾಗವಹಿಸಲಿದ್ದಾರೆ. ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬದವರು ಕಾಲೇಜಿನ ಪ್ರಾಂಶುಪಾಲರು ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯಕಾರಿ ಮಂಡಳಿ ಅವರು ಭಾಗವಹಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಪ್ರೊ.ಸುಜಾತ ದೇವಿ (94480 54422) ಅವರನ್ನು ಸಂಪರ್ಕಿಸಿ.
ಕಾರು ಪಲ್ಟಿ ಯುವಕ ಸಾವು
ಸೂಲಿಬೆಲೆ: ಇಲ್ಲಿನ ಜಂಗಮಕೋಟೆ-ಹೊಸಕೋಟೆ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರೊಂದು ಪಲ್ಟಿ ಹೊಡೆದ ಒಬ್ಬ ಸಾವನ್ನಪ್ಪಿ ಮತ್ತೊಬ್ಬ ಗಾಯಗೊಂಡಿರುವ ಘಟನೆ ನಡೆದಿದೆ. ಮೃತ ಯುವಕನನ್ನು ಹೊಸಕೋಟೆ ತಾಲೂಕಿನ ಪರಮನಹಳ್ಳಿ ನಿವಾಸಿ ನಂದೀಶ್ (29) ಎಂದು ಗುರುತಿಸಲಾಗಿದೆ. ಸೂಲಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯ ಇ.ಮುತ್ಸಂದ್ರ ಬಳಿ ನಂದೀಶ್ ತನ್ನ ಸ್ನೇಹಿತನೊಂದಿಗೆ ಮುತ್ತಕದಹಳ್ಳಿಯ ತನ್ನ ಸಂಬಂಧಿಕರ ಮನೆಗೆ ಕಾರಿನಲ್ಲಿ ತೆರೆಳಿ ವಾಪಸ್ ಮನೆಗೆ ಹೋಗುತ್ತಿದ್ದಾಗ ಘಟನೆ ನಡೆದಿದೆ. ಚಲಿಸುತ್ತಿದ್ದ ಕಾರಿನ ಬ್ರೇಕ್ ಹಠಾತ್ತನೆ ಹಾಕಿದ್ದೇ ಪಲ್ಟಿಗೆ ಕಾರಣ ಎನ್ನಲಾಗುತ್ತಿದೆ. ಸಿನಿಮಾದ ರೀತಿಯಲ್ಲಿ ನಾಲ್ಕೈದು ಬಾರಿ ಪಲ್ಟಿ ಹೊಡೆದ ಕಾರಿನಲ್ಲಿದ್ದ ನಂದೀಶ್ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಕಾರಿನಲ್ಲಿದ್ದ ಮತ್ತೊಬ್ಬ ನಾಗೇಶ್ ಗಾಯಗೊಂಡಿದ್ದಾರೆ. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.