ಮೈಸೂರ್ಗೆ ಭರ್ಜರಿ 'ಪಾಕ'!
ರೇಲ್ವೆ ಬಜೆಟ್ನಲ್ಲಿ ರಾಜ್ಯಕ್ಕೆ ಕಾಗೆ ಹಾರಿಸಿದ್ದರೂ ಮೈಸೂರಿಗೆ ಮಾತ್ರ ಬಂಪರ್!
ಹೌದು. ಹುಬ್ಬಳ್ಳಿ- ಬೆಂಗಳೂರು ಎಕ್ಸ್ಪ್ರೆಸ್, ಸೋಲಾಪುರ- ಯಶವಂತಪುರ ಎಕ್ಸ್ಪ್ರೆಸ್ ಹಾಗೂ ದರ್ಭಾಂಗ್- ಬೆಂಗಳೂರು ಹಾಗೂ ಬಾಗಲಕೋಟೆ- ಯಶವಂತಪುರ ರೈಲುಗಳನ್ನು ಮೈಸೂರಿನವರೆಗೆ ವಿಸ್ತರಿಸಲಾಗಿದೆ. ಅಲ್ಲದೇ ಮೈಸೂರಿನಿಂದ ಶಿವಮೊಗ್ಗಕ್ಕೆ ತೆರಳುವ ಪ್ಯಾಸೆಂಜರ್ ರೈಲನ್ನು ತಾಳಗುಪ್ಪವರೆಗೆ ವಿಸ್ತರಿಸಲಾಗಿದೆ. ನಾಲ್ಕು ಪ್ರಮುಖ ರೈಲುಗಳನ್ನು ಮೈಸೂರಿಗೆ ವಿಸ್ತರಿಸಿದ್ದು ಹಾಗೂ ಮೈಸೂರಿನಿಂದ ಹೊರಡುವ ರೈಲನ್ನು ತಾಳಗುಪ್ಪವರೆಗೆ ವಿಸ್ತರಿಸಿದ್ದು ಮೈಸೂರಿನ ಪಾಲಿಗೆ ಈ ಬಾರಿಯ ಬಜೆಟ್ 'ಪಾಕ'ದಷ್ಟೇ ಸಿಹಿ ಸುದ್ದಿ. ಬೆಂಗಳೂರಿಗೆ ಸೀಮಿತವಾಗಿದ್ದ ಈ ನಾಲ್ಕು ಪ್ರಮುಖ ರೈಲುಗಳು ಮೈಸೂರಿನವರೆಗೆ ಸಂಚರಿಸುವುದರಿಂದ ರಾಜ್ಯದ ಪ್ರವಾಸೋದ್ಯಮಕ್ಕೆ ಭಾರಿ ಅನುಕೂಲವಾಗಲಿದೆ. ಅಲ್ಲದೇ ಮೈಸೂರಿಗೆ ತೆರಳುವ ಪ್ರಯಾಣಿಕರಿಗೂ ಉಪಯೋಗವಾಗಲಿದೆ.
ಎರಡು ಹೊಸ ಹಳಿಗೆ ವೇಗ!
ಬಹು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಚಿಕ್ಕಮಗಳೂರು- ಸಕಲೇಶಪುರ ಹಾಗೂ ಬೆಂಗಳೂರು- ಸತ್ಯಮಂಗಲ ನಡುವಿನ ಹೊಸ ಹಳಿ ಅಳವಡಿಸುವ ಯೋಜನೆಗೆ ಕೊನೆಗೂ ವೇಗ ಸಿಕ್ಕಿದೆ. ರಾಜ್ಯ ಸರ್ಕಾರ ಉಚಿತ ಭೂಮಿ ಹಾಗೂ ಹಳಿ ಅಳವಡಿಸುವ ಯೋಜನೆಗೆ ಶೇ.50ರಷ್ಟು ಅನುದಾನ ಒದಗಿಸಲು ಒಪ್ಪಿಗೆ ಸೂಚಿಸಿದೆ. ಅಲ್ಲದೇ ಇದಕ್ಕೆ ಎದುರಾಗಿದ್ದ ಸಮಸ್ಯೆಗಳು ಈಗ ನಿವಾರಣೆಯಾಗಿವೆ. ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆದಿದ್ದು, ಹಳಿ ಅಳವಡಿಸುವ ಯೋಜನೆಗೆ ವೇಗ ಸಿಗಲಿದೆಂದು ಬನ್ಸಲ್ ತಿಳಿಸಿದ್ದಾರೆ.
ಕೋಲಾರ ಕೋಚ್ ಫ್ಯಾಕ್ಟರಿ ಶೀಘ್ರ ಪೂರ್ಣ
ಕಳೆದ ಬಾರಿಯೇ ಘೋಷಿಸಿದ್ದ ಕೋಲಾರ 'ಕೋಚ್ ಫ್ಯಾಕ್ಟರಿ' ಈ ಬಾರಿಯ ಬಜೆಟ್ನಲ್ಲೂ ಪ್ರತಿಧ್ವನಿಸಿದೆ. ಕೋಚ್ ಫ್ಯಾಕ್ಟರಿ ಕಾರ್ಯ ಪ್ರಗತಿಯಲ್ಲಿದೆ. ಕರ್ನಾಟಕ ಸರ್ಕಾರದೊಂದಿಗೆ ಸತತ ಸಂಪರ್ಕದಲ್ಲಿದ್ದೇವೆ. ಶೀಘ್ರವೇ ಅಂತಿಮ ರೂಪ ಪಡೆಯಲಿದೆ ಎಂದು ರೇಲ್ವೆ ಸಚಿವ ಪವನ್ಕುಮಾರ್ ಬನ್ಸಾಲ್ ವಿವರಿಸಿದ್ದಾರೆ. ಅಲ್ಲದೇ ಪಾಲಕ್ಕಡ್ನಲ್ಲೂ ಕೋಚ್ ಫ್ಯಾಕ್ಟರಿ ಕಾರ್ಯ ಪ್ರಗತಿಯಲ್ಲಿದೆ. ಒಡಿಶಾದ ಗಂಜಮ್ ಜಿಲ್ಲೆಯಲ್ಲಿ ಗಾಲಿ ತಯಾರಿಕೆ ಕಾರ್ಖಾನೆ ಕೂಡ ಅಂತಿಮ ಹಂತಕ್ಕೆ ಬಂದಿದೆ ಎಂದು ವಿವರಿಸಿದ್ದಾರೆ. ಕಳೆದ ಬಾರಿ ಕೋಚ್ ಫ್ಯಾಕ್ಟರಿ ಕೋಲಾರದಲ್ಲಿ ಸ್ಥಾಪಿಸಲಾಗುವುದು ಎಂದು ಘೋಷಿಸಿದ ಬೆನ್ನಲ್ಲೇ ಅದನ್ನು ಶಿವಮೊಗ್ಗಕ್ಕೆ ಸ್ಥಳಾಂತರಿಸಲಾಗುವುದು ಎಂಬ ವಿವಾದ ಎದ್ದಿತ್ತು. ಕೊನೆಗೆ ಕೋಲಾರದಲ್ಲೇ ಕೋಚ್ ಫ್ಯಾಕ್ಟರಿ ಸ್ಥಾಪಿಸಲಾಗುವುದು ಎಂದು ಅಂದಿನ ರೇಲ್ವೆ ಖಾತೆ ರಾಜ್ಯ ಸಚಿವ ಮುನಿಯಪ್ಪ ಸ್ಪಷ್ಟಪಡಿಸಿದ್ದರು.
ಬೆಂಗಳೂರಿನಲ್ಲಿ 'ಐಷಾರಾಮಿ ಲಾಂಜ್'
ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಮುಂದಾಗಿರುವ ರೇಲ್ವೆ ಇಲಾಖೆ ದೆಹಲಿ ರೈಲು ನಿಲ್ದಾಣದ ಮಾದರಿಯಲ್ಲಿ ಬೆಂಗಳೂರು ಸೇರಿದಂತೆ 7 ರೈಲು ನಿಲ್ದಾಣಗಳಲ್ಲಿ ವಿಶೇಷ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ. ವಿದೇಶಿ ಹಾಗೂ ದೇಶೀ ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಂಗಳೂರು, ಜೈಪುರ್, ಆಗ್ರಾ, ನಾಗ್ಪುರ್, ಪಟ್ನಾ, ವಿಶಾಖಪಟ್ಟಣಂ ಹಾಗೂ ಬಿಲಾಸಪುರ್ ರೈಲು ನಿಲ್ದಾಣಗಳಲ್ಲಿ ಅತ್ಯಾಧುನಿಕ ಮಾದರಿಯಲ್ಲಿ 'ಐಷಾರಾಮಿ ಲಾಂಜ್' ನಿರ್ಮಿಸಲಿದೆ. ಇಲ್ಲಿ ಇಂಟರ್ನೆಟ್, ಬಿಸಿನೆಸ್ ಸೆಂಟರ್, ಫ್ಯಾಕ್ಸ್, ಪ್ರಿಂಟರ್ ಸೇರಿದಂತೆ ಇನ್ನಿತರ ಅತ್ಯಾಧುನಿಕ ಸೌಲಭ್ಯಗಳು ದೊರೆಯಲಿವೆ.
ಮಂಗಳೂರಲ್ಲಿ ರೇಲ್ವೆ ಕೌಶಲ ಕೇಂದ್ರ
ಕೇಂದ್ರ ಸರ್ಕಾರದ ರಾಷ್ಟ್ರೀಯ ಕೌಶಲ ಅಭಿವೃದ್ಧಿ ಕಾರ್ಯಕ್ರಮದಲ್ಲೂ ರೇಲ್ವೆ ಇಲಾಖೆ ತನ್ನ ಪಾಲುದಾರಿಕೆಯನ್ನು ತೋರಿಸಿದೆ. ರೇಲ್ವೆ ಇಲಾಖೆ ವ್ಯಾಪ್ತಿಗೆ ಸಂಬಂಧಪಟ್ಟಂತೆ ಯುವಕರಿಗೆ ಕೌಶಲ ತರಬೇತಿ ನೀಡಲು ರಾಜ್ಯದ ಮಂಗಳೂರು ಸೇರಿದಂತೆ ದೇಶದ ಉದ್ದಗಲಕ್ಕೂ 25 ತರಬೇತಿ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ. ಇನ್ನುಳಿದಂತೆ ಅಗರ್ತಲಾ, ಅಲ್ವಾರ, ಅಂಕಲೇಶ್ವರ, ಚಂಡೀಗಡ, ಡೆಹ್ರಾಡೂನ್, ದಿಮಾಪುರ್, ಇಂಫಾಲ, ಜಗದಲ್ಪುರ, ಜೈಸ್, ಕಟಿಹಾರ್, ಕಾಜಿಪೇಟ್, ಕೊಲ್ಲಂ, ಕೋರಾಪುಟ್, ಲುಂಡಿಂಗ್, ಮುರ್ಷಿದಾಬಾದ್, ನಾಗ್ಪುರ, ನಹರ್ಲ್ಗನ್, ಪಠಾನ್ಕೋಟ್, ರಾಂಚಿ, ರತ್ಲಾಂ, ಶಿಮ್ಲಾ, ಸಿರ್ಸಾ, ಶ್ರೀನಗರ ಮತ್ತು ತಿರುಚಿರಾಪಳ್ಳಿಯಲ್ಲಿ ಕೌಶಲ ಕೇಂದ್ರ ಸ್ಥಾಪಿಸಲಾಗುತ್ತಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.