ಶಿಕ್ಷಕರೇ ಗುಣಾತ್ಮಾಕ ಶಿಕ್ಷಣ ನೀಡಿ: ತೇಜಸ್ವಿನಿ ಅನಂತಕುಮಾರ್
ಬೆಂಗಳೂರು: ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕು ಎಂದು ಅದಮ್ಯ ಚೇತನ್ಯ ಸಂಸ್ಥೆ ಮುಖ್ಯಸ್ಥರಾದ ತೇಜಸ್ವಿನಿ ಅನಂತಕುಮಾರ್ ಕರೆ ನೀಡಿದರು.
ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮಂಗಳವಾರ ಶಿಕ್ಷಕರ ಸದನದಲ್ಲಿ ಆಯೋಜಿಸಿದ್ದ ಶೈಕ್ಷಣಿಕ ಸಮಾವೇಶ ಮತ್ತು ಉತ್ತಮ ಆಡಳಿತ ಮಂಡಳಿಗಳು, ಉತ್ತಮ ಶಿಕ್ಷಕರು ಹಾಗೂ ನಿವೃತ್ತ ಶಿಕ್ಷಕರುಗಳಿಗೆ ಸನ್ಮಾನ ಸಮಾರಂಭದಲ್ಲಿ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದರು.
ಅನುದಾನಿತ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಇಂದು ಸಾಕಷ್ಟು ಕ್ಷೇತ್ರದಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳೇ ಮುಂದಿದ್ದಾರೆ. ಹೀಗಾಗಿ ಸರ್ಕಾರಿ ಶಾಲೆಗಳನ್ನು ಕಡೆಗಣಿಸಬಾರದು. ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡಬೇಕು ಎಂದರು. ಈ ಹಿಂದೆ ಖಾಸಗಿ ಶಾಲೆಗಳಲ್ಲೇ ಹೆಚ್ಚಿನ ಫಲಿತಾಂಶ ಬರುತ್ತಿತ್ತು. ಈಗ ಕಾಲ ಬದಲಾಗಿದೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲೂ ಶೇ.90ರಷ್ಟು ಫಲಿತಾಂಶ ಪ್ರಕಟವಾಗುತ್ತಿದೆ ಇದು ಶೇ.100ಕ್ಕೆ ತಲುಪಬೇಕು ಎಂದರು.
ಕಸ ಮರುಬಳಕೆ: ಅದಮ್ಯ ಚೇತನ ಸಂಸ್ಥೆಯಿಂದ ಸಾಕಷ್ಟು ಶಾಲೆಗಳಿಗೆ ಬಿಸಿಯೂಟ ನೀಡುತ್ತಿದ್ದೇವೆ. ಅಡುಗೆ ಸಿದ್ಧಪಡಿಸುವುದರಿಂದ ಪ್ರತಿದಿನ 1,000 ಕೆ.ಜಿ. ಕಸ ಉತ್ಪಾದನೆಯಾಗುತ್ತದೆ. ಇದರ ವಿಲೇವಾರಿಗಾಗಿ ನಾವು ಬಿಬಿಎಂಪಿ ವಾಹನಕ್ಕೆ ಕಾಯುವುದಿಲ್ಲ. ವೈಜ್ಞಾನಿಕ ರೀತಿಯಲ್ಲಿ ಕಸವನ್ನು ಮರು ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಹೀಗಾಗಿ ಶಾಲೆಗಳಲ್ಲಿ ಉತ್ಪಾದನೆಯಾಗುವ ಕಸವನ್ನು ಮರು ಬಳಕೆ ಮಾಡಿಕೊಳ್ಳುವ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿ ಹೇಳಬೇಕು ಎಂದರು.
ಪ್ರಶಸ್ತಿ ಪ್ರದಾನ: ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 80 ನಿವೃತ್ತ ಶಿಕ್ಷಕರಿಗೆ ಪ್ರಶಸ್ತಿ, 13 ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ, 13 ಶಿಕ್ಷಕರಿಗೆ ಆಡಳಿತ ಪ್ರಶಸ್ತಿ ಮತ್ತು ಸಮರ್ಥನಂ ಅಂಗವಿಕಲರ ಸಂಸ್ಥೆ ಜಿ.ಕೆ. ಮಹಾಂತೇಶ್ ಅವರಿಗೆ ಸೇವಾ ಪುರಸ್ಕಾರ, ಆನೇಕಲ್ನಲ್ಲಿ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿ ಯು.ಜಿ. ಭಾರ್ಗವ್ ಅವರಿಗೆ ಪ್ರತಿಭಾ ಪ್ರಶಸ್ತಿ ನೀಡಲಾಯಿತು.
ಸಮಾರಂಭದಲ್ಲಿ ವಿಧಾನ ಪರಿಷತ್ತಿನ ಸದಸ್ಯರಾದ ಅಶ್ವತ್ಥನಾರಾಯಣ, ಭಾರತ್ ವಿದ್ಯಾ ಸಂಸ್ಥೆ ಸಂಸ್ಥಾಪಕರಾದ ಲಕ್ಕೇಗೌಡರು, ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಮುನಿರೆಡ್ಡಿ, ನಂಜುಂಡಯ್ಯ, ಸಂಘದ ಅಧ್ಯಕ್ಷರಾದ ಎಸ್. ಪ್ರಕಾಶಮೂರ್ತಿ, ಪ್ರಧಾನ ಕಾರ್ಯದರ್ಶಿ ಟಿ. ರವಿಕುಮಾರ್ ಭಾಗವಹಿಸಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.