ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ನಗರ

ಕರ್ನಾಟಕದ ಭರವಸೆಯ ಹಳಿ ತಪ್ಪಿಸಿದ ಬನ್ಸಲ್ ಎಕ್ಸ್‌ಪ್ರೆಸ್

Parashurama
Updated On : 28 Feb 2013, 11:23 am

ರೇಲ್ವೆ ಸಚಿವ ಪವನಕುಮಾರ್ ಬನ್ಸಲ್ ಮಂಗಳವಾರ ಮಂಡಿಸಿದ ರೇಲ್ವೆ ಬಜೆಟ್‌ನಲ್ಲಿ ಸಾಮರ್ಥ್ಯ ವೃದ್ಧಿ, ಸುರಕ್ಷತೆ ಮತ್ತು ಆಧುನೀಕರಣಕ್ಕೆ ಸೂಕ್ತ ಕ್ರಮ, ಇಂಧನ, ಸಿಬ್ಬಂದಿ ಸಂಬಳ ಹಾಗೂ ರಾಷ್ಟ್ರೀಯ ಸರಕು ಸಾಗಣೆಯಿಂದ ಹದಗೆಟ್ಟು ಹೋಗಿರುವ ರೇಲ್ವೆ ಇಲಾಖೆಯ ಆರ್ಥಿಕ ಸಬಲತೆಯತ್ತ ದೃಷ್ಟಿ ಹರಿಸಿದ್ದಾರೆ.

ಕಳೆದ ಜನವರಿಯಲ್ಲಿ ಹೆಚ್ಚಳ ಮಾಡಿದಂತೆ ಈ ಬಾರಿ ಪ್ರಯಾಣಿಕರ ಟಿಕೆಟ್ ಮೂಲ ದರದಲ್ಲಿ ಹೆಚ್ಚಳ ಮಾಡಿಲ್ಲ. ಆದರೆ, ತತ್ಕಾಲ್ ಶುಲ್ಕ, ಸೂಪರ್ ಫಾಸ್ಟ್ ರೈಲುಗಳ ಪೂರಕ ಶುಲ್ಕ, ಟಿಕೆಟ್ ರದ್ದತಿ ಶುಲ್ಕ, ಕಾಯ್ದಿರಿಸದ ಟಿಕೆಟ್ ರದ್ದತಿ ಶುಲ್ಕ ಹೆಚ್ಚಿಸಿ ಜಾಣತನ ಮೆರೆದಿದ್ದಾರೆ. ಇವುಗಳಿಂದ 850 ಕೋಟಿ ಹೆಚ್ಚುವರಿ ಬಂಡವಾಳ ನಿರೀಕ್ಷೆ ಮಾಡಿದ್ದಾರೆ.

ಇಂಧನ ದರ ಹೆಚ್ಚಳ ತಗ್ಗಿಸುವ ದೃಷ್ಟಿಯಿಂದ ಸರಕು ಸಾಗಣೆ ಯೋಜನೆ ಘೋಷಿಸಿದ್ದಾರೆ. ರೈಲಿನಲ್ಲಿ ಸಾಗಿಸುವ ಸಿಮೆಂಟ್, ಕಬ್ಬಿಣ, ಸ್ಟೀಲ್, ರಸಗೊಬ್ಬರ, ಕಲ್ಲಿದ್ದಲು, ಪೆಟ್ರೋಲಿಯಂ ಉತ್ಪನ್ನಗಳು, ಅಡುಗೆ ಇಂಧನದ ಸಗಟು ಸರಕು ಶುಲ್ಕವನ್ನು ಶೇ.5.8ಕ್ಕೇರಿಸಲಾಗಿದೆ. ಇದರಿಂದ ರೇಲ್ವೆ ಇಲಾಖೆಗೆ 4200 ಕೋಟಿ ಬಂಡವಾಳ ಹರಿದು ಬರುವುದನ್ನು ನಿರೀಕ್ಷಿಸಲಾಗಿದೆ. ರೇಲ್ವೆ ನಿಲ್ದಾಣ ಹಾಗೂ ರೈಲುಗಳಲ್ಲಿ ಗುಣಮಟ್ಟದ ಆಹಾರ ದೊರೆಯುವಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಐಎಸ್‌ಓ ಮಾನ್ಯತೆ ಹೊಂದಿದ ಅಡುಗೆ ಮನೆ, ಕೇಟರಿಂಗ್ ಸೇವೆ ಹಾಗೂ ಪ್ರತಿ ನಿಲ್ದಾಣಗಳಲ್ಲಿ ಆಹಾರ ಗುಣಮಟ್ಟ ಪರೀಕ್ಷಿಸುವ ವ್ಯವಸ್ಥೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಜತೆಗೆ ರೈಲು ಹಾಗೂ ನಿಲ್ದಾಣಗಳಲ್ಲಿನ ಶೌಚಾಲಯ ಸ್ವಚ್ಛತೆ, ಬಯೋ ಟಾಯ್ಲೆಟ್, ರೈಲುಗಳಲ್ಲಿ ಬಳಸುವ ಹಾಸು ಬಟ್ಟೆಗಳ ಸ್ವಚ್ಛತೆ ಒತ್ತು, ಕಾರ್ಬನ್ ತಹಬದಿಗೆ ತರಲು ಕ್ರಮ ಹಾಗೂ ಪ್ರಯಾಣಿಕರಿಗೆ ರೈಲುಗಳ ಬಗ್ಗೆ ಮಾಹಿತಿ ನೀಡಲು ಎಸ್‌ಎಂಎಸ್ ಸೇವೆ ಒದಗಿಸಲು ಒತ್ತು ನೀಡಿದ್ದು ಸ್ವಾಗತಾರ್ಹ.
ವಿದ್ಯುತ್ ಕೊರತೆ ಹಾಗೂ ವೆಚ್ಚ ತಗ್ಗಿಸಲು ಪವನ ಹಾಗೂ ಸೋಲಾರ್ ವಿದ್ಯುತ್ ಅಳವಡಿಸಿಕೊಳ್ಳಲು ಬನ್ಸಲ್ ಚಿಂತನೆ ನಡೆಸಿದ್ದಾರೆ. ಅಲ್ಲದೇ ರೇಲ್ವೆ ಇಲಾಖೆಯ ವಿವಿಧ ವಿಭಾಗಗಳಲ್ಲಿ ಹಲವು ವರ್ಷಗಳಿಂದ ಖಾಲಿ ಇರುವ ಹುದ್ದೆಗಳಿಗೆ 1.52 ಲಕ್ಷ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಮುಂದಾಗಿರುವುದು ಉತ್ತಮ ಬೆಳವಣಿಗೆ. ಉತ್ತಮ ಘೋಷಣೆಗಳನ್ನು ಬಜೆಟ್‌ನಲ್ಲಿ ಮಂಡಿಸಿದ್ದಾರೆ. ಆದರೆ, ಅವು ಕೇವಲ ಕಾಗದಕ್ಕೆ ಮಾತ್ರ ಸೀಮಿತವಾಗದೆ ಅನುಷ್ಠಾನಗೊಳ್ಳಬೇಕು. ಅವರು ಗಮನ ಹರಿಸುತ್ತಾರೆ ಎಂಬ ಭರವಸೆ ಕೂಡ ಇದೆ. ಅದು ಹುಸಿಯಾಗಬಾರದು.

ಇನ್ನು ಕರ್ನಾಟಕ ಹಾಗೂ ಬೆಂಗಳೂರಿನ ವಿಷಯಕ್ಕೆ ಬರುವುದಾದರೆ ನಿರಾಶಾದಾಯಕ, ಅಷ್ಟೇನು ಮಹತ್ವವಲ್ಲದ ಹಾಗೂ ಸಂಭ್ರಮಿಸಲು ಅವಕಾಶವಿಲ್ಲದ ಬಜೆಟ್. ರಾಜ್ಯದ ಬೇಡಿಕೆ ಹಾಗೂ ಅಭಿಲಾಷೆ ಈಡೇರಿಲ್ಲ. ರಾಜ್ಯ ಸಲ್ಲಿಸಿದ ಬೇಡಿಕೆ ಗಣನೆಗೆ ತೆಗೆದುಕೊಂಡಿಲ್ಲ. ಹುಬ್ಬಳ್ಳಿ- ಬೀದರ್ ಇಂಟರ್‌ಸಿಟಿ, ಸೊಲ್ಲಾಪುರ (ಗುಲ್ಬರ್ಗ) ವಾಯಾ ಗುಂತಕಲ್, ಹೈದರಾಬಾದ್ ವಾಯಾ ಬಾಗಲಕೋಟೆ, ಬಿಜಾಪುರ, ಗುಲ್ಬರ್ಗ ಮತ್ತು ಹೈದರಾಬಾದ್ ಕರ್ನಾಟಕ, ಬೀದರ್, ಹೊಸಪೇಟೆ, ಚಿತ್ರದುರ್ಗ, ಹಾಸನ ಅಥವಾ ಸಕಲೇಶಪುರ, ಹಿಂದುಪುರ, ಚಾಮರಾಜನಗರ, ಚಿಕ್ಕಮಗಳೂರು ಮತ್ತು ಮೀರಜ್‌ನಿಂದ ಬೆಂಗಳೂರು ರೈಲು ಸಂಪರ್ಕಕ್ಕೆ ಕ್ರಮ ಕೈಗೊಂಡಿಲ್ಲ.
ಯಶವಂತಪುರ- ಸೊಲ್ಲಾಪುರ ಸಂಚಾರ ಅವಧಿ ವಿಸ್ತರಣೆಯಿಂದ ರಾಯಚೂರು, ಯಾದಗಿರಿ, ವಾಡಿ ಹಾಗೂ ಗುಲ್ಬರ್ಗ ಜನತೆಗೆ ಸಹಾಯಕವಾಗುತ್ತಿತ್ತು. ತುಮಕೂರು- ಅರಸೀಕೆರೆ ಫುಶ್‌ಫುಲ್ ರೈಲು ವಿಸ್ತರಣೆ, ಮುಂಬೈ- ಸೊಲ್ಲಾಪುರ ರೈಲನ್ನು ಗದಗವರೆಗೆ ವಿಸ್ತರಿಸುವ ಅಗತ್ಯವಿತ್ತು. ಹೊಸದಾಗಿ ಘೋಷಿಸಿರುವ ಮಂಗಳೂರು- ಕಾಚಿಗುಡ ವಾಯಾ ಕೊಯಮತ್ತೂರ್, ಗೂಟಿ ವಾರಕ್ಕೊಮ್ಮೆ ಓಡುವ ರೈಲಿನಿಂದ ಕರ್ನಾಟಕಕ್ಕಿಂತ ಕೇರಳ, ತಮಿಳುನಾಡು ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಕೇರಳ, ತಮಿಳುನಾಡು, ಆಂಧ್ರ ಮಾರ್ಗದ ಬದಲು ಸುಬ್ರಮಣ್ಯ ಮೂಲಕ ಹಾಸನ ಮತ್ತು ಬೆಂಗಳೂರು ಚಲಿಸಿದ್ದರೆ ಕರಾವಳಿ ಹಾಗೂ ಮಲೆನಾಡು ಕರ್ನಾಟಕದ ಜನರಿಗೆ ಅನುಕೂಲವಾಗುತ್ತಿತ್ತು.

ಕಳೆದ 10 ವರ್ಷಗಳಿಂದ ಪ್ರಸಿದ್ಧ ಧಾರ್ಮಿಕ, ಪ್ರವಾಸಿ ಹಾಗೂ ವ್ಯವಹಾರಿಕ ತಾಣಗಳಾದ ಬೆಂಗಳೂರಿನಿಂದ ಜಮ್ಮು, ವಾರಾಣಸಿ, ಅಮೃತಸರ್, ಶಿರಡಿ, ಗಯಾ, ಹರಿದ್ವಾರ್, ಡೆಹ್ರಾಡೂನ್, ರಾಮೇಶ್ವರಂ, ಔರಂಗಾಬಾದ್, ಬಿಕಾನೇರ್, ಭಾವನಾನಗರ್, ರಾಜಕೋಟ್, ಉದಯಪುರ್ ಮತ್ತು ಚೆನ್ನೈನಿಂದ ಮುಂಬೈ ವಾಯಾ ಗುಂತಕಲ್, ಬಳ್ಳಾರಿ, ಗದಗ ಹಾಗೂ ಬಿಜಾಪುರ, ಸಣ್ಣ ಪುಟ್ಟ ನಗರಗಳಾದ ಇಂದೋರ್, ಪುಣೆ, ಸೂರತ್, ಬಿಕಾನೇರ್, ಇರೋಡ್, ಕನ್ಯಾಕುಮಾರಿ, ಕುಚುವೇಲಿ ಅಲ್ಲದೇ ಮಂಗಳೂರಿನಿಂದ ಜಮ್ಮುವಿಗೆ ನೇರ ರೈಲು ಸಂಪರ್ಕ ಕಲ್ಪಿಸುವ ಬೇಡಿಕೆಗೆ ಮನ್ನಣೆ ಸಿಕ್ಕಿಲ್ಲ. ವಿಸ್ತರಣೆ ಮಾಡಿದ ರೈಲುಗಳಿಂದಲೂ ರಾಜ್ಯದ ಜನರಿಗೆ ಹೆಚ್ಚಿನ ಅನುಕೂಲ ಇಲ್ಲ.

ಬೆಂಗಳೂರು ಸುತ್ತಲಿನ ನಗರಗಳಿಗೆ ರೈಲು ಸಂಪರ್ಕ ಕಲ್ಪಿಸುವ ಯೋಜನೆ ಕೂಡ ಗಣನೆಗೆ ತೆಗೆದುಕೊಂಡಿಲ್ಲ. ಯಶವಂತಪುರ ಹಾಗೂ ಬೆಂಗಳೂರಿನಲ್ಲಿ 3ನೇ ಕೋಚಿಂಗ್ ಟರ್ಮಿನಲ್‌ನಿಂದ ಹೆಚ್ಚಿನ ಪ್ರಯೋಜನವಿಲ್ಲ. ಅಲ್ಲದೇ ಇದರಿಂದ ಭವಿಷ್ಯದಲ್ಲಿ ಲಾಭವೂ ಇಲ್ಲ. ಗದಗ- ವಾಡಿ (ಯಲಬುರ್ಗಾ, ಕುಷ್ಟಗಿ, ಲಿಂಗಸ್ಗೂರು, ಸುರಪುರ, ಶಹಪುರಕ್ಕೆ ಸಂಪರ್ಕ ಕಲ್ಪಿಸುವ) ಮಾರ್ಗಕ್ಕೆ ಕರ್ನಾಟಕ ಸರ್ಕಾರದಿಂದ ಉಚಿತ ಭೂಮಿ ನೀಡುವ ಹಾಗೂ ಪಾಲುದಾರಿಕೆ ಬಗ್ಗೆ ಅನುಮತಿ ಪಡೆದುಕೊಂಡಿರುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆದರೆ, ಶ್ರೀನಿವಾಸಪುರ- ಮದನಪಲ್ಲಿ (ತಿರುಪತಿಗೆ ಹತ್ತಿರದ ಮಾರ್ಗ), ಧಾರವಾಡ- ಬೆಳಗಾವಿ (ಹುಬ್ಬಳ್ಳಿ- ಬೆಳಗಾವಿ ಮಧ್ಯದ ಅಂತರ ತಗ್ಗಿಸುವ), ಗದಗ- ಹಾವೇರಿ (ಉತ್ತರ ಕರ್ನಾಟಕದಿಂದ ದಕ್ಷಿಣ ಕರ್ನಾಟಕದ ನಡುವಿನ ಅಂತರ ತಗ್ಗಿಸುವ) ಯೋಜನೆಗಳ ಬಗ್ಗೆ ರಾಜ್ಯ ಸರ್ಕಾರದ ಸಹಯೋಗ ಪಡೆದು ಅನುಷ್ಠಾನಗೊಳಿಸಬೇಕಿತ್ತು. ಆದರೆ, ಇಂಥ ಉತ್ತಮ ಯೋಜನೆಗಳತ್ತ ಬನ್ಸಲ್ ಅವರು ದೃಷ್ಟಿಯೇ ಹರಿಸಿಲ್ಲ.
ದೇಶ ಹಾಗೂ ರಾಜ್ಯಗಳ ಆರ್ಥಿಕ ಅಭಿವೃದ್ಧಿಯಲ್ಲಿ ರೇಲ್ವೆ ಇಲಾಖೆ ಪಾತ್ರ ಮಹತ್ತರವಾದುದು. ವ್ಯಾಪಾರ, ವಾಣಿಜ್ಯ, ಪ್ರವಾಸೋದ್ಯಮ, ಕೈಗಾರಿಕೆ ಉನ್ನತೀಕರಣ, ಗ್ರಾಮ, ನಗರಗಳ ಸಂಪರ್ಕ ರೇಲ್ವೆಯಿಂದಲೇ ಹೆಚ್ಚಿನ ಪ್ರಮಾಣದಲ್ಲಿ ಸಾಧ್ಯ. ಸಂಸ್ಕೃತಿ ವಿನಿಮಯದಲ್ಲೂ ಪ್ರಭಾವ ಬೀರುತ್ತದೆ. ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾದ ವಿಷಯವೆಂದರೆ ನಾವು ರೈಲು ಅಥವಾ ರಸ್ತೆಯಲ್ಲೇ ಒಡಾಡಲಿ. ಅದರಿಂದ ಯಾವುದೇ ಪ್ರಭಾವ ಬೀರುವುದಿಲ್ಲ. ಮೂಲಸೌಕರ್ಯಗಳಿಂದ ಮಾತ್ರ ಆರ್ಥಿಕಾಭಿವೃದ್ಧಿ ಸಾಧ್ಯ.
2001ರಿಂದ ರಾಜ್ಯದ ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣ, ಧರಂಸಿಂಗ್, ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದಗೌಡ ಮತ್ತು ಈಗಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ರೇಲ್ವೆಗೆ ಮಹತ್ವವನ್ನು ನೀಡಿ ಜಂಟಿ ಸಹಭಾಗಿತ್ವದ ಯೋಜನೆಗೆ ತನ್ನ ಪಾಲಿನ ಶೇ.50ರಷ್ಟು ಹಣ ಮತ್ತು ಉಚಿತ ಭೂಮಿಯನ್ನು ನೀಡಿದ್ದಾರೆ. ಇದನ್ನು ಪರಿಗಣಿಸಿ ಜನರಿಗೆ ಉಪಕಾರವಾಗುವ ಇನ್ನು ಹಲವು ಯೋಜನೆಗಳನ್ನು ರೇಲ್ವೆ ಸಚಿವರು ರಾಜ್ಯಕ್ಕೆ ಮಂಜೂರು ಮಾಡಬೇಕು.
ರೈಲ್ ಕೀ ಚುಕ್ ಚುಕ್ ಹೈ
ದೇಶ್ ಕೀ ಧಕ್ ಧಕ್ ಹೈ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments