'ನನ್ನನ್ನು ಮನುಷ್ಯನನ್ನಾಗಿಸಿದ್ದು ಬೆಂವಿವಿ'
ಬೆಂಗಳೂರು: ನನ್ನನ್ನು ಸಂಪೂರ್ಣ ಮನುಷ್ಯನನ್ನಾಗಿಸಿದ್ದು ಬೆಂಗಳೂರು ವಿಶ್ವವಿದ್ಯಾಲಯ. ನಾನು ವಿವಿಯಲ್ಲಿ ಇಷ್ಟು ವರ್ಷ ಕೆಲಸ ಮಾಡಿರುವುದಕ್ಕೆ ಹೆಮ್ಮೆ ಪಡುತ್ತೇನೆ ಎಂದು ಕರ್ನಾಟಕ ರಾಜ್ಯ ಮುಕ್ತವಿಶ್ವವಿದ್ಯಾಲಯ ಕುಲಪತಿ ಡಾ.ಎಂ.ಜೆ. ಕೃಷ್ಣನ್ ಹೇಳಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಕೇತರ ನೌಕರರ ಸಂಘ ಬುಧವಾರ ಜ್ಞಾನಜ್ಯೋತಿ ಸಭಾಂಣಗದಲ್ಲಿ ಆಯೋಜಿಸಿದ್ದ ಕುಲಪತಿ ಮತ್ತು ಕುಲಸಚಿವರಿಗೆ ಸ್ವಾಗತ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ನಾನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದ ಬಗ್ಗೆ ಹೆಮ್ಮೆಯಿದೆ. ಡಾ.ಎನ್. ಪ್ರಭುದೇವ್ ಅವರು ವಿವಿ ಕುಲಪತಿಯಾಗಿದ್ದ ಸಂದರ್ಭದಲ್ಲಿ ವಿವಿಯಲ್ಲಿ ಉಸಿರು ಗಟ್ಟಿಸುವ ವಾತಾವರಣ ಇತ್ತು. ಇವರು ಹೋದ ನಂತರ ಉಸಿರಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನೂತನ ಕುಲಪತಿಯಾಗಿರುವ ಪ್ರೊ.ಬಿ. ತಿಮ್ಮೇಗೌಡ ಅವರು ಉತ್ತಮ ಆಡಳಿತಗಾರ. ವಿಶ್ವವಿದ್ಯಾಲಯವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತಾರೆ ಎಂಬುವುದರಲ್ಲಿ ಎರಡು ಮಾತಿಲ್ಲ ಎಂದರು.
ಬೆಂಗಳೂರು ವಿವಿ ಕುಲಪತಿ ಪ್ರೊ.ಬಿ. ತಿಮ್ಮೇಗೌಡ ಅವರು ಮಾತನಾಡಿ, ವಿಶ್ವವಿದ್ಯಾಲಯ ಒಂದು ಕುಟುಂಬ ಇದ್ದ ರೀತಿ. ಎಲ್ಲರೂ ಒಂದೇ ಕುಟುಂಬದ ಸದಸ್ಯರಂತೆ ಕೆಲಸ ಮಾಡಬೇಕು. ನಾನು ಶಿಕ್ಷಕೇತರ ನೌಕರರ ಸಂಘ ನೀಡಿರುವ ಬೇಡಿಕೆಗೆ ಸ್ಪಂದಿಸುತ್ತೇನೆ. ದಿನಗೂಲಿ ನೌಕರರನ್ನು ಸೇವಾ ಜ್ಯೇಷ್ಠತೆ ಅಧಾರದ ಮೇಲೆ ಕಾಯಂಗೊಳಿಸುತ್ತೇನೆ. ಈಗಾಗಲೇ ಸೇವಾ ಜ್ಯೇಷ್ಠತೆ ಕುರಿತು ವರದಿ ನೀಡಲು ಸಿಂಡಿಕೇಟ್ ಸದಸ್ಯ ಡಿ.ಎಸ್. ಕೃಷ್ಣ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದೇನೆ ಎಂದರು.
ಸಮಾರಂಭದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಕೇತರ ನೌಕರರ ಸಂಘದ ಅಧ್ಯಕ್ಷ ವೆಂಕಟಯ್ಯ ಮತ್ತು ಕಾರ್ಯದರ್ಶಿ ಆರ್. ರಂಗಧಾಮು ಅವರು ಡಾ.ಎಂ.ಜಿ. ಕೃಷ್ಣನ್ ಅವರನ್ನು ಸನ್ಮಾನಿಸಿ ಬೀಳ್ಕೊಟ್ಟರು. ವಿವಿ ನೂತನ ಕುಲಪತಿಯಾಗಿ ಅಧಿಕಾರವಹಿಸಿಕೊಂಡ ತಿಮ್ಮೇಗೌಡ ಹಾಗೂ ವಿತ್ತಾಧಿಕಾರಿ ಆರ್. ರಾಮಣ್ಣ ಅವರಿಗೆ ಸನ್ಮಾನಿಸಿ ಸ್ವಾಗತ ಕೋರಿದರು. ಸಂಘದ ಉಪಾಧ್ಯಕ್ಷ ವೆಂಕಟೇಶ್ ಭಾಗವಹಿಸಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.