ನಮ್ಗೆ ಆಯುರ್ವೇದ ಕೀಳು... ಅಮೆರಿಕ ಪೇಟೆಂಟ್ ಪಡ್ಕೋತಿದೆ
ಅಮೆರಿಕದವರು ನಮ್ಮ ಆಯುರ್ವೇದ ಔಷಧಿಗಳಿಗೆ ಪೇಟೆಂಟ್ ಪಡೆದುಕೊಳ್ಳುತ್ತಿದ್ದಾರೆ.
ಬೆಂಗಳೂರು: ಅಮೆರಿಕದವರು ನಮ್ಮ ಆಯುರ್ವೇದ ಔಷಧಿಗಳಿಗೆ ಪೇಟೆಂಟ್ ಪಡೆದುಕೊಳ್ಳುತ್ತಿದ್ದಾರೆ. ನಾವು ಆಯುರ್ವೇದದ ಮೇಲಿರುವ ಕೀಳರಿಮೆಯಿಂದ ಸುಮ್ಮನಿರುವುದು ವಿಷಾದದ ಸಂಗತಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಆಯುಷ್ ಇಲಾಖೆ ಬುಧವಾರ ಬಸವೇಶ್ವರ ನಗರದಲ್ಲಿರುವ ಸರ್ಕಾರಿ ಹೋಮಿಯೋಪತಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಆರ್ಯುವೇದ, ಹೋಮಿಯೋಪತಿ, ಯುನಾನಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಕಟ್ಟಡಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾವು ಇಂಗ್ಲಿಷ್ ಔಷಧಗಳಿಗೆ ನೀಡುತ್ತಿರುವ ಬೆಲೆಯನ್ನು ಆಯುರ್ವೇದಕ್ಕೆ ನೀಡುತ್ತಿಲ್ಲ. ಜನರಿಗೆ ಇನ್ನೂ ಈ ಬಗ್ಗೆ ನಂಬಿಕೆ ಬಂದಿಲ್ಲ. ಹೀಗಾಗಿಯೇ ನಮ್ಮ ಪಾರಂಪರಿಕ ಆಯುರ್ವೇದ ಔಷಧಿಗಳಿಗೆ ನಮ್ಮದೇ ಔಷಧಿ ಎಂಬಂತೆ ಬಿಂಬಿಸಿಕೊಳ್ಳಲು ಅಮೆರಿಕದ ವಿಜ್ಞಾನಿಗಳು ಪೇಟೆಂಟ್ ಪಡೆದುಕೊಳ್ಳುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
ಆಯುರ್ವೇದದ ಬಗ್ಗೆ ಸಾಕಷ್ಟು ಸಂಶೋಧನೆ ನಡೆಯಬೇಕಾಗಿದೆ. ಸದ್ಯಕ್ಕೆ ನಡೆಯುತ್ತಿರುವ ಸಂಶೋಧನೆಗಳಲ್ಲಿ ತೊಡಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಇದರಿಂದಾಗಿ ನಾವು ಕೆಲವು ಕಾಯಿಲೆಗಳಿಗೆ ಇನ್ನೂ ಔಷಧಿಗಳನ್ನು ನೀಡಲಾಗುತ್ತಿಲ್ಲ ಎಂದು ಲಿಂಬಾವಳಿ ಹೇಳಿದರು.
ಆಯುರ್ವೇದ ಓದಿ ವೈದ್ಯರಾದವರಿಗೂ ಎಂಬಿಬಿಎಸ್ ಓದಿ ವೈದ್ಯರಾದವರಿಗೂ ಹೆಚ್ಚಿನ ವ್ಯತ್ಯಾಸ ಇರಬಾರದು ಎಂಬ ಉದ್ದೇಶದಿಂದ ಇಬ್ಬರಿಗೂ ಸರಿಸಮವಾದ ಸಂಬಳ ನೀಡಲಾಗುತ್ತಿದೆ. ಆದರೂ ರಾಜ್ಯದಲ್ಲಿ ವೈದ್ಯರ ಸಮಸ್ಯೆ ಕಾಣುತ್ತಿದೆ. ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗಳು ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಬೇಕು. ಎಂಬಿಬಿಎಸ್ನಲ್ಲಿರುವ ಸುಮಾರು 8 ವಿಷಯಗಳನ್ನು ಆಯುರ್ವೇದ ವಿದ್ಯಾರ್ಥಿಗಳು ಓದುವುದರಿಂದ ಇವರ ನಡುವೆ ಹೆಚ್ಚಿನ ವ್ಯತ್ಯಾಸವೇನು ಇರುವುದಿಲ್ಲ ಎಂಬುವುದನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು ಎಂದರು.
ವಿಧಾನ ಪರಿಷತ್ತಿನ ಸದಸ್ಯರಾದ ರಾಮಚಂದ್ರಗೌಡ ಮಾತನಾಡಿ, ಜನರು ಇಂಗ್ಲಿಷ್ ಔಷಧಿಗಳಿಗೆ ಮಾರು ಹೋಗುತ್ತಿದ್ದಾರೆ. ಇಂಗ್ಲಿಷ್ ಔಷಧಿಗಳಿಂದ ಗುಣವಾಗದ ಸಾಕಷ್ಟು ಕಾಯಿಲೆಗಳಿಗೆ ಆಯುರ್ವೇದದಲ್ಲಿ ಔಷಧಿ ಇದೆ ಎಂಬುವುದು ಬಹುತೇಕ ಜನರಿಗೆ ತಿಳಿದಿಲ್ಲ. ಆಯುರ್ವೇದ ವೈದ್ಯರು ಕಡಿಮೆ ಹಣ ತೆಗೆದುಕೊಳ್ಳುತ್ತಾರೆ ಎಂಬ ಮನೋಭಾವದಲ್ಲಿ ಉತ್ತಮ ಔಷಧಿ ನೀಡುವುದಿಲ್ಲ ಎಂದು ಜನರು ಭಾವಿಸಿರುವುದು ತಪ್ಪು ಎಂದರು.
ಆಯುಷ್ ಇಲಾಖೆ ಹೊರತಂದಿರುವ ಆಯುರ್ವೇದ ಜೀವನಶೈಲಿ, ಮನೆಮದ್ದು ಕೈಪಿಡಿ, ಸಂಪೂರ್ಣ ಆರೋಗ್ಯಕ್ಕೆ ಹೋಮಿಯೋಪತಿ, ಸಾಮಾನ್ಯ ರೋಗಗಳಿಗೆ ಯುನಾನಿ ಚಿಕಿತ್ಸೆ, ಹೆಣ್ಣಿನ ಆರೋಗ್ಯ ಸಂರಕ್ಷಣೆ ಯುನಾನಿ ವೈದ್ಯ ಪದ್ಧತಿ ಎಂಬ ಐದು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
ಆಯುಷ್ ಇಲಾಖೆ ನಿರ್ದೇಶಕರಾದ ಜಿ.ಎನ್. ಶ್ರೀಕಂಠಯ್ಯ, ಆಯುರ್ವೇದ, ಹೋಮಿಯೋಪತಿ, ಯುನಾನಿ ವೈದ್ಯಕೀಯ ಮಹಾವಿದ್ಯಾಲಯ ಅಧ್ಯಾಪಕರಾದ ಡಾ. ಹಸಿಬುನ್ನಿಸಾ, ಡಾ. ಎ.ಎಲ್. ಪಾಟೀಲ್, ಡಾ.ಆಶಾಲತ ಭಾಗವಹಿಸಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.