ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ನಗರ

ಪೊಲೀಸ್‌ನ ಕಳ್ಳ ಮಗ ಬಂಧನ; ಇಪ್ಪತ್ತೈದು ಲ್ಯಾಪ್‌ಟಾಪ್‌ಗಳ ವಶ

Parashurama
Updated On : 28 Feb 2013, 11:33 am

ಬೆಂಗಳೂರು: ಇಪ್ಪತ್ತೈದು ಲ್ಯಾಪ್‌ಟಾಪ್‌ಗಳನ್ನು ಕದ್ದು ಕೊನೆಗೂ ಸಿಕ್ಕಿಬಿದ್ದಿದ್ದಾನೆ ಪೊಲೀಸ್ ಹೆಡ್ ಕಾನ್ಸ್‌ಟೆಬಲ್ ಒಬ್ಬರ ಚೋರ ಪುತ್ರ..!
ಕಳ್ಳರು ಭಯಪಡುವುದು ಕೇವಲ ಪೊಲೀಸರಿಗೆ ಮಾತ್ರ. ಆದರೆ, ಪೊಲೀಸ್ ಮನೆಯಲ್ಲೇ ಕಳ್ಳ ಇದ್ದರೆ  
ಅಂಥವರನ್ನು ಪತ್ತೆ ಮಾಡುವವರು ಯಾರು ಎನ್ನುವ ಪ್ರಶ್ನೆ ಎದುರಾಗುತ್ತದೆ.
ಇಲ್ಲಿ ಆಗಿರುವುದು ಅದೇ. ಬೆಂಗಳೂರು ನಗರ ದಕ್ಷಿಣ ವಿಭಾಗದ ಪೊಲೀಸ್ ಠಾಣೆಯೊಂದರ ಹೆಡ್ ಕಾನ್ಸ್‌ಟೆಬಲ್ ಒಬ್ಬರ ಪುತ್ರ ತಂದೆಯ ವೃತ್ತಿಗೆ ತದ್ವಿರುದ್ದವಾಗಿದ್ದಾನೆ. ತಂದೆ ಆರೋಪಿಗಳನ್ನು ಬಂಧಿಸುವ, ಅಪರಾಧ ತಡೆಗಟ್ಟುವ ಕರ್ತವ್ಯದಲ್ಲಿ ನಿರತರಾಗಿದ್ದರೆ, ಮಗ ಕಳ್ಳತನದಲ್ಲಿ ತೊಡಗಿ ತಂದೆ ವೃತ್ತಿಗೆ ಅವಮಾನ ಮಾಡಿ ಪೊಲೀಸ್ ಠಾಣೆಯ ಅತಿಥಿಯಾಗಿದ್ದಾನೆ.
ಆ ಮಹಾಶಯನ ಹೆಸರು ಚೇತನ್. ವಯಸ್ಸು 24 ವರ್ಷ. ಪಿಯುಸಿವರೆಗೂ ಓದಿ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ಇಸ್ಪೀಟ್ ಸೇರಿದಂತೆ ಇತರ ದುಶ್ಚಟಗಳ ದಾಸನಾಗಿದ್ದ ಚೇತನ್ ಹಣಕ್ಕಾಗಿ ಲ್ಯಾಪ್‌ಟಾಪ್ ಹಾಗೂ ಮೊಬೈಲ್ ಕಳ್ಳತನ ಮಾಡುತ್ತಿದ್ದ. ಇದೀಗ ಸುಬ್ರಮಣ್ಯನಗರ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.
ಕಳೆದ ಒಂದು ವರ್ಷದಿಂದ ಇಂತಹ ಕೃತ್ಯಗಳಲ್ಲಿ ತೊಡಗಿದ್ದ ಚೇತನ್ ಕೊನೆಗೂ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಈತನಿಂದ ವಿವಿಧ ಪೇಯಿಂಗ್ ಗೆಸ್ಟ್‌ಗಳಿಂದ ಕಳ್ಳತನವಾಗಿದ್ದ 25 ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಕಳ್ಳತನ ಸ್ಟೈಲ್: ಚೇತನ್ ಕಳ್ಳತನದ ಸ್ಟೈಲ್ ತುಂಬಾ ಸಿಂಪಲ್. ಲ್ಯಾಪ್‌ಟಾಪ್‌ಗಾಗಿ ಹಲ್ಲೆ ಮಾಡುವುದಾಗಲಿ, ಮನೆ, ಕಚೇರಿಗಳ ಬೀಗ ಒಡೆಯುವುದು, ರಾತ್ರಿ ಕನ್ನ ಹಾಕುವುದನ್ನು ಮಾಡುತ್ತಿರಲಿಲ್ಲ. ಬದಲಿಗೆ ಬೆಳಗ್ಗೆ 6 ಗಂಟೆಗೆ ಗಂಡಸರ ಪೇಯಿಂಗ್ ಗೆಸ್ಟ್‌ಗಳಿಗೆ ತಾನೂ ಒಬ್ಬ ಅಲ್ಲಿನ ವಾಸಿ ಎನ್ನುವಂತೆ ಪ್ರವೇಶಿಸುತ್ತಿದ್ದ. ನಂತರ ಬೇರೆ ಬೇರೆ ಕೊಠಡಿಗಳ ಹೊರಗೆ ತಿರುಗಾಡುತ್ತ ಲ್ಯಾಪ್‌ಟಾಪ್ ಇರುವ ಕೊಠಡಿಗಳನ್ನು ಗಮನಿಸುತ್ತಿದ್ದ. ಕೊಠಡಿಯಲ್ಲಿ ಯುವಕರು ಮಲಗಿದ್ದರೆ ಅಥವಾ ಸ್ನಾನಕ್ಕೆ ತೆರಳಿದ್ದರೆ ನಿಧಾನಕ್ಕೆ ಕೊಠಡಿಯೊಳಗೆ ತೆರಳಿ ಲ್ಯಾಪ್‌ಟಾಪ್‌ಗಳು, ಮೊಬೈಲ್ ಫೋನ್‌ಗಳನ್ನು ಕದ್ದು ಅಲ್ಲಿಂದ ಪರಾರಿಯಾಗುತ್ತಿದ್ದ.
ಕಳೆದ ಒಂದು ವರ್ಷದಿಂದ ಚೇತನ್ ಲ್ಯಾಪ್‌ಟಾಪ್‌ಗಳನ್ನು ಕದ್ದು ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡಿ ಬಂದ ಹಣದಲ್ಲಿ ಮೋಜಿನ ಜೀವನ ನಡೆಸುತ್ತಾ ಕಾಲ ಕಳೆಯುತ್ತಿದ್ದ. ಈ ಸಂಬಂಧ ಮೈಕೋ ಬಡಾವಣೆ, ಮಡಿವಾಳ ಪೊಲೀಸ್ ಠಾಣೆಗಳಲ್ಲಿ ಪೇಯಿಂಗ್ ಗೆಸ್ಟ್ ವಾಸಿಗಳು ಪ್ರಕರಣ ದಾಖಲಿಸಿದ್ದರು.
ಕೊನೆಗೂ ಚೇತನ್‌ಗೆ ದುರದೃಷ್ಟ ಬೆನ್ನು ಹಿಡಿಯಿತು. ಕದ್ದ ಲ್ಯಾಪ್‌ಟಾಪ್‌ನೊಂದಿಗೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಸುಬ್ರಮಣ್ಯನಗರ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ಎರಡನೇ ಬಾರಿ: ಕಳ್ಳತನ ಮಾಡಿ ಸಿಕ್ಕಿಬಿದ್ದಿರುವುದು ಚೇತನ್‌ಗೆ ಇದೇ ಮೊದಲೇನಲ್ಲ. ಈ ಹಿಂದೆಯೂ ಲ್ಯಾಪ್‌ಟಾಪ್ ಕಳ್ಳತನ ಪ್ರಕರಣದಲ್ಲಿ ಜೀವನ್‌ಬಿಮಾ ನಗರ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ. ಈ ಸಂಬಂಧ ಪ್ರಕರಣ ದಾಖಲಾಗಿತ್ತು.
ತನ್ನ ಮಗ ಹೀಗಾದನಲ್ಲಾ ಎಂದು ಬೇಸರಗೊಂಡ ಚೇತನ್ ತಂದೆ, ಬೆಂಗಳೂರು ಬಿಟ್ಟರೆ ಸರಿ ಹೋಗಬಹುದೆಂದು ಅವರ ಊರು ಚನ್ನರಾಯಪಟ್ಟಣದಲ್ಲಿರುವ ಸಹೋದರನ ಮನೆಯಲ್ಲಿ ಬಿಟ್ಟಿದ್ದರು. ಆದರೆ, ಇಸ್ಪೀಟ್ ಸೇರಿದಂತೆ ಇತರೆ ದುಶ್ಚಟಗಳ ದಾಸನಾಗಿದ್ದ ಚೇತನ್ ಹಣಕ್ಕಾಗಿ ಮರಳಿ ಬೆಂಗಳೂರಿಗೆ ಬಂದು ಮತ್ತೆ ತನ್ನ ಚಾಳಿ ಆರಂಭಿಸಿದ್ದ.
ಹಳೇ ಪ್ರಕರಣ ವಿಚಾರಣೆ ಹಂತದಲ್ಲಿದ್ದು, ಜಾಮೀನಿನ ಮೇಲೆ ಹೊರ ಬಂದಿದ್ದ ಚೇತನ್ ಮತ್ತೆ ತನ್ನ ಹಳೇ ಚಾಳಿ ಮುಂದುವರೆಸಿರುವುದಕ್ಕೆ ಹೆಡ್‌ಕಾನ್ಸ್‌ಟೆಬಲ್ ತೀವ್ರ ನೊಂದಿದ್ದಾರೆ. ಚೇತನ್ ಬಂಧನದ ಬಳಿಕ ಪೊಲೀಸರು ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆದರೆ, ಮಗನ ಕೃತ್ಯಗಳಿಂದ ಬೇಸರಗೊಂಡಿರುವ ಹೆಡ್‌ಕಾನ್ಸ್‌ಟೆಬಲ್ ಠಾಣೆಗೆ ತೆರಳಲು ನಿರಾಕರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments