ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ನಗರ

ಬೈಸಿಕಲ್ ರಸ್ತೆ ಈಗ ಪಾರ್ಕಿಂಗ್ 'ಪಾಥ್‌'

Parashurama
Updated On : 28 Feb 2013, 11:23 am

ಬೆಂಗಳೂರು: ಬೈಸಿಕಲ್ ಪಾಥ್ ಈಗ ಪಾರ್ಕಿಂಗ್ ಸ್ಥಳಗಳಾಗಿವೆ..!
ಹೌದು, ಸೈಕಲ್ ಸವಾರರಿಗಾಗಿಯೇ ಬಿಬಿಎಂಪಿ ಲಕ್ಷಾಂತರ ರುಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದ ಈ ಬೈಸಿಕಲ್ ಪಾಥ್‌ಗಳು ದುರುಪಯೋಗವಾಗುತ್ತಿದ್ದು, ಜನರು ಅದನ್ನು ವಾಹನ ನಿಲುಗಡೆ ಸ್ಥಳವನ್ನಾಗಿ ಮಾಡಿಕೊಂಡಿದ್ದಾರೆ. ಹೀಗಾಗಿ ಬೈಸಿಕಲ್ ರಸ್ತೆಗಾಗಿ ಖರ್ಚು ಮಾಡಿದ್ದ ಲಕ್ಷಾಂತರ ರುಪಾಯಿ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗಿದೆ.
ಬೈಸಿಕಲ್‌ಗಾಗಿ ನಿರ್ಮಿಸಿರುವ ರಸ್ತೆ ಬಗ್ಗೆ ಅಲ್ಲಲ್ಲಿ ನಾಮಫಲಕಗಳನ್ನು ಅಳವಡಿಸಲಾಗಿದೆ. ರಸ್ತೆಯುದ್ದಕ್ಕೂ(ಸೈಕಲ್ ಪಾಥ್) ಬೈಸಿಕಲ್‌ಗಳ ಚಿತ್ರಗಳನ್ನು ಬಿಡಿಸಲಾಗಿದೆ. ಆರಂಭದ ಒಂದೆರಡು ದಿನ ಕೆಲವು ಕಡೆ ಇದನ್ನು ಬಳಸಲಾಯಿತಾದರೂ ನಂತರ ನಿಧಾನವಾಗಿ ಜನ ಮರೆತೇ ಬಿಟ್ಟರು.
ಈಗ ಅದು ಅಳಿಸಿಹೋಗಿ ಮಸುಕುಮಸುಕಾಗಿರುವುದರಿಂದ ಮತ್ತು ತರೆಗೆಲೆಗಳು ಬಿದ್ದಿರುವುದರಿಂದ ಚಿತ್ರ ಕಾಣುವುದಿಲ್ಲ. ಒಂದೆಡೆ ಸೈಕಲ್ ಸವಾರರು ಈ ಪಾಥ್‌ಗಳನ್ನು ಬಳಸುವುದಿಲ್ಲ. ಇನ್ನೊಂದೆಡೆ ಗುರುತೇ ಕಾಣಸಿಗುವುದಿಲ್ಲ. ಹೀಗಾಗಿ ವಾಹನ ಸವಾರರು ಆ ಜಾಗವನ್ನು ವಾಹನ ನಿಲುಗಡೆಗೆ ಬಳಸಿಕೊಳ್ಳುತ್ತಿದ್ದಾರೆ.
ಸದ್ಯ ಜಯನಗರದಲ್ಲಿ ನಿರ್ಮಾಣವಾಗಿರುವ ಈ ಬೈಸಿಕಲ್ ಪಾಥ್ ಉಪಯೋಗಕ್ಕೆ ಬಾರದೆ ಬೇರೆ ಉದ್ದೇಶಕ್ಕೆ ಬಳಸಲಾಗುತ್ತಿದೆ. ಇದು ಪೊಲೀಸ್ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ತಿಳಿದಿದ್ದರೂ ಪ್ರಯೋಜನವಾಗಿಲ್ಲ.

ಜನರಲ್ಲಿ ಅರಿವಿಲ್ಲ: ಬೈಸಿಕಲ್ ರಸ್ತೆ ಉದ್ಘಾಟನೆ ವೇಳೆ ಮಾತ್ರ ಇಂತಹದೊಂದು ರಸ್ತೆ ಇರುವ ಬಗ್ಗೆ ಮಾಧ್ಯಮಗಳಲ್ಲಿ ಬಿತ್ತರವಾಗಿದೆ. ಅದನ್ನು ಹೊರತುಪಡಿಸಿ ಜನರಲ್ಲಿ ಯಾವುದೇ ಅರಿವು ಮೂಡಿಸಿಲ್ಲ. ಬೈಸಿಕಲ್ ಸವರಾರು ಹಾಗೂ ಬೇರೆ ವಾಹನಗಳ ಸವಾರರು ಯಾವ ರಸ್ತೆ ಬಳಸಬೇಕು? ಬಳಸಬಾರದು? ಎಂಬ ಬಗ್ಗೆ ಜನರಲ್ಲಿ ಅರಿವಿಲ್ಲ. ಹಾಗಾಗಿ ರಸ್ತೆಯಲ್ಲಿ ಬೈಸಿಕಲ್ ಚಿತ್ರ ಹಾಗೂ ಫಲಕಗಳು ಕಂಡರೂ ಜನರು ಅದಕ್ಕೆ ತಲೆಕೆಡಿಸಿಕೊಳ್ಳುತ್ತಿಲ್ಲ. ತಮಗೆ ಅನುಕೂಲವಾಗುವ ಕಡೆ ವಾಹನ ನಿಲುಗಡೆ ಮಾಡುತ್ತಾರೆ.

ತಿಂಡಿ ತಿನಿಸು ಮಾರಾಟ: ಆ ರಸ್ತೆಯಲ್ಲಿ ಕೇವಲ ವಾಹನಗಳನ್ನು ಮಾತ್ರ ನಿಲುಗಡೆ ಮಾಡುವುದಿಲ್ಲ. ಬದಲಾಗಿ ಅಲ್ಲಿ ತಳ್ಳುವ ಗಾಡಿ ಇರಿಸಿಕೊಳ್ಳುವ ಸಣ್ಣಪುಟ್ಟ ವ್ಯಾಪಾರಿಗಳು ತಿಂಡಿತಿನಿಸು ಮಾರಾಟ ಮಾಡುತ್ತಾರೆ. ಪಾದಚಾರಿಗಳು ಓಡಾಡುತ್ತಾರೆ. ಸಂಚಾರ ಪೊಲೀಸರು ಆ ಭಾಗದಲ್ಲೇ ಸುಳಿದಾಡುತ್ತಾರಾದರೂ ಈ ಬಗ್ಗೆ ತಲೆಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ಇರುತ್ತಾರೆ. ಬಿಬಿಎಂಪಿ ಅಧಿಕಾರಿಗಳೂ ಇತ್ತ ಗಮನಹರಿಸುವುದಿಲ್ಲ. ಹಾಗಾಗಿ ಬೈಸಿಕಲ್ ಸವಾರರು ಎಂದಿನಂತೆ ಎಲ್ಲ ವಾಹನ ಚಲಿಸುವ ರಸ್ತೆಯಲ್ಲೇ ಸಂಚರಿಸುತ್ತಾರೆ.

- ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments