ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ನಗರ

ಮಳೆ ಕೊಯ್ಲು ಎಂಬ ಜೀವಜಲ

Parashurama
Updated On : 28 Feb 2013, 11:25 am

ಬೆಂಗಳೂರು: ಕರ್ನಾಟಕದ ಪಾಲಿನ ನೀರನ್ನು ತಮಿಳುನಾಡು ಒಂದೆಡೆ ಕಿತ್ತುಕೊಳ್ಳುತ್ತಿದೆ. ಮತ್ತೊಂದೆಡೆ ಅಂತರ್ಜಲ ಮಟ್ಟ ಎಲ್ಲೆಡೆ ಕುಸಿಯುತ್ತಿದೆ. ಇಂತಹ ಸಂದರ್ಭದಲ್ಲಿ ನೀರಿನ ಕೊರತೆ ನಿವಾರಣೆಗೆ ಪ್ರಮುಖ ಆಸರೆಯಾಗುವಂತದ್ದು ಮಳೆನೀರು ಕೊಯ್ಲು.
ಮಳೆ ನೀರು ಕೊಯ್ಲು ಮಾಡುವುದರಿಂದ ನೀರಿನ ಕೊರತೆ ಸುಲಭದಲ್ಲಿ ನೀಗಿಸುವ ಜತೆಗೆ ಅಂತರ್ಜಲ ಮಟ್ಟವನ್ನೂ ಹೆಚ್ಚಿಸಬಹುದು. ಅಷ್ಟೇ ಅಲ್ಲ, ನಗರಕ್ಕೆ ಪ್ರತಿನಿತ್ಯ ಅವಶ್ಯವಿರುವ ನೀರಿನ ಪ್ರಮಾಣದಲ್ಲಿ ಶೇ.30 ರಿಂದ ಶೇ.40ರಷ್ಟನ್ನು ನೀರನ್ನು ಮಳೆನೀರು ಕೊಯ್ಲು ಒಂದರಿಂದಲೇ ಪಡೆಯಬಹುದು.  ವಿಪರ್ಯಾಸ ಎಂದರೆ ಆ ಬಗ್ಗೆ ನಗರದ ಜನತೆ ಇನ್ನೂ ಹೆಚ್ಚಿನ ಆಸಕ್ತಿ ವಹಿಸುತ್ತಿಲ್ಲ. ಮಳೆಕೊಯ್ಲು ಪದ್ಧತಿ ಅಳವಡಿಸಿಕೊಳ್ಳಬೇಕು ಎಂಬ ನೀತಿ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ.
ತಂತ್ರಜ್ಞಾನ ಅಭಿವೃದ್ಧಿ ಹಾಗೂ ನಗರೀಕರಣದ ಪರಿಣಾಮದಿಂದ ನಗರದ ಜನಸಂಖ್ಯೆ ಹೆಚ್ಚಿದೆ. ಅದಕ್ಕನುಗುಣವಾಗಿ ನೀರಿನ ಬೇಡಿಕೆಯೂ ಹೆಚ್ಚಿರುವ ಕಾರಣ ನೀರಿನ ಕೊರತೆ ಉಂಟಾಗಿದೆ. ಅಷ್ಟೇ ಅಲ್ಲ ನೀರಿನ ಅಭಾವ ದಿನೇದಿನೆ ಹೆಚ್ಚುತ್ತಿದೆ. ಹಾಗಾಗಿ ಬೇಡಿಕೆಗೆ ತಕ್ಕಂತೆ ನೀರು ಲಭಿಸಬೇಕಿದ್ದರೆ ಅದನ್ನು ಸಂಗ್ರಹಿಸುವುದೊಂದೇ ಸೂಕ್ತ ಮಾರ್ಗ ಎಂಬುದು ಜಲನಿರ್ವಹಣಾ ತಜ್ಞರು ಹಾಗೂ ಜಲಮಂಡಳಿ ಅಧಿಕಾರಿಗಳ ಅಭಿಪ್ರಾಯ.

ಕಾಯ್ದೆಗೆ ತಿದ್ದುಪಡಿ: ಮಳೆನೀರು ಕೊಯ್ಲು ಅಗತ್ಯ ಹಾಗೂ ಅನಿವಾರ್ಯತೆ ಅರಿತ ಸರ್ಕಾರ 2009ರಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆಗೆ ತಿದ್ದುಪಡಿ ತಂದು 60ಶ್ರೀ40 ಮತ್ತು ಅದಕ್ಕೂ ಹೆಚ್ಚಿನ ವಿಸ್ತೀರ್ಣದ ನಿವೇಶನದಲ್ಲಿರುವ ಎಲ್ಲ ಕಟ್ಟಡಗಳಲ್ಲಿ ಹಾಗೂ 30ಶ್ರೀ40 ನಿವೇಶನದಲ್ಲಿ ಹೊಸದಾಗಿ ನಿರ್ಮಾಣವಾಗುವ ಕಟ್ಟಡಗಳಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆ ಅಳವಡಿಸುವುದನ್ನು ಕಡ್ಡಾಯಗೊಳಿಸಿತ್ತು.
ಅದಕ್ಕಾಗಿ ಆ ಸಮಯದಲ್ಲಿ 60ಶ್ರೀ40 ಮತ್ತು ಅದಕ್ಕೂ ಹೆಚ್ಚಿನ ನಿವೇಶನದಲ್ಲಿ ನಿರ್ಮಾಣಗೊಂಡಿರುವ 55 ಸಾವಿರ ಕಟ್ಟಡ ಗುರುತಿಸಿದೆ. ಪರಿಣಾಮ, 44801 ಕಟ್ಟಡದಲ್ಲಿ ಈಗಾಗಲೇ ಮಳೆನೀರು ಕೊಯ್ಲು ಅಳವಡಿಕೆ ಆಗಿದೆ.
ಆದರೆ, ನಗರದಲ್ಲಿ 16 ಲಕ್ಷ ಆಸ್ತಿಗಳಿದ್ದು, ದಿನವೊಂದಕ್ಕೆ ನಗರಕ್ಕೆ 1450 ದಶಲಕ್ಷ ಲೀ. ನೀರು ಅಗತ್ಯವಿದೆ. ಒಂದು ವೇಳೆ 16 ಲಕ್ಷ ಆಸ್ತಿಗಳಲ್ಲೂ ಮಳೆನೀರು ಕೊಯ್ಲು ವ್ಯವಸ್ಥೆ ಅಳವಡಿಕೆ ಆದಲ್ಲಿ ನಗರಕ್ಕೆ ಸದ್ಯ ಅಗತ್ಯವಿರುವ ನೀರಿನ ಪ್ರಮಾಣದಲ್ಲಿ ಶೇ. 30ರಿಂದ ಶೇ. 40ಷ್ಟು ನೀರು ಮಳೆನೀರು ಸಂಗ್ರಹಣೆಯಿಂದ ಪಡೆಯಬಹುದು ಎನ್ನುತ್ತಾರೆ ಮಳೆನೀರು ಕೊಯ್ಲು ತಜ್ಞ ಎ.ಆರ್.ಶಿವಕುಮಾರ್.
ಪ್ರಸ್ತುತ ನಗರಕ್ಕೆ ಪ್ರತಿದಿನ 1450 ದಶಲಕ್ಷ ಲೀ. ನೀರು ಅಗತ್ಯವಿದ್ದರೂ ಪೂರೈಕೆ ಮಾಡಲು ಸಾಧ್ಯವಾಗುತ್ತಿರುವುದು 900 ದಶಲಕ್ಷ ಲೀ. ಮಾತ್ರ. ಕೊರತೆ ಇರುವ ನೀರನ್ನು ಸೃಷ್ಟಿಸಲು ಸಾಧ್ಯವಿಲ್ಲ. ಹಾಗಿರುವಾಗ ಮಳೆನೀರು ಕೊಯ್ಲು ಹಾಗೂ ನೀರಿನ ಮಿತವ್ಯಯವೊಂದೇ ಪರಿಹಾರ. ನಿಯಮದಂತೆ ನಿಗದಿತ ನಿವೇಶನದಲ್ಲಿರುವ ಕಟ್ಟಡಗಳಿಗೆ ಮಾತ್ರ ಮಳೆನೀರು ಕೊಯ್ಲು ಅಳವಡಿಸಿಕೊಳ್ಳುವ ಜತೆಗೆ ಎಲ್ಲ ಕಟ್ಟಡಗಳಲ್ಲೂ ಅಳವಡಿಸಿಕೊಂಡಲ್ಲಿ ನೀರಿನ ಸಮಸ್ಯೆ ನೀಗುತ್ತದೆ ಎಂಬುದು ಜಲಮಂಡಳಿ ಅಧಿಕಾರಿಗಳ ಅಭಿಪ್ರಾಯ.
ಮಳೆನೀರು ಕೊಯ್ಲಿನ ಉಪಯೋಗ: ವಾರ್ಷಿಕ 1000 ಮಿ.ಮೀ. ಮಳೆಯಾಗುವ ಪ್ರದೇಶದ 100 ಚ.ಮೀ. ಜಾಗದಲ್ಲಿ ಮಳೆ ನೀರು ಕೊಯ್ಲು ಮೂಲಕ ವರ್ಷಕ್ಕೆ ಸುಮಾರು 1 ಲಕ್ಷ ಲೀ. ನೀರು ಸಂಗ್ರಹಿಸಬಹುದು. ಅಷ್ಟೇ ಮಳೆ ಬೀಳುವ ಪ್ರದೇಶದ 30ಶ್ರೀ40 ವಿಸ್ತೀರ್ಣದ ಕಟ್ಟಡದಲ್ಲಿ ಮಳೆಕೊಯ್ಲು ವ್ಯವಸ್ಥೆ ಅಳವಡಿಸಿದರೆ ವಾರ್ಷಿಕ 55 ಸಾವಿರಕ್ಕೂ ಅಧಿಕ ಲೀ. ನೀರು ಸಂಗ್ರಹಿಸಬಹುದು.
ಜಯನಗರದಲ್ಲಿ ಸರ್.ಎಂ. ವಿಶ್ವೇಶ್ವರಯ್ಯ ಮಳೆನೀರು ಸುಗ್ಗಿ ಕೇಂದ್ರವನ್ನು ಜಲಮಂಡಳಿ ಈಗಾಗಲೇ ಸ್ಥಾಪಿಸಿದೆ. ಸಾರ್ವಜನಿಕರಿಗೆ ಇಲ್ಲಿ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಉಚಿತವಾಗಿ ಲಭ್ಯ. ಹೆಚ್ಚಿನ ಮಾಹಿತಿಗೆ: 080 26653666.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments