ಮಾರ್ಚ್ 31ರೊಳಗೆ 3 ಲಕ್ಷ ಕೋಟಿ ವಹಿವಾಟು
ಬೆಂಗಳೂರು: ಕಳೆದ ಫೆ.19ರಂದು ಓರಿಯಂಟಲ್ ಬ್ಯಾಂಕ್ ತನ್ನ 71ನೇ ಸಂಸ್ಥಾಪನಾ ದಿನವನ್ನು ಆಚರಿಸಿದ್ದು, ಮುಂಬರುವ ಮಾರ್ಚ್ ಅಂತ್ಯದೊಳಗೆ ಬ್ಯಾಂಕ್ನ ವಹಿವಾಟನ್ನು 3 ಲಕ್ಷ ಕೋಟಿಗೆ ಏರಿಸುವ ಗುರಿಯನ್ನು ಈ ಸಂದರ್ಭದಲ್ಲಿ ಹಾಕಿಕೊಳ್ಳಲಾಗಿದೆ. ದೇಶಾದ್ಯಂತ 1964 ಶಾಖೆ ಹಾಗೂ 1369 ಎಟಿಎಂ ಕೇಂದ್ರಗಳನ್ನು ಬ್ಯಾಂಕ್ ಹೊಂದಿದೆ. ಪ್ರಸಕ್ತ ಹಣಕಾಸು ವರ್ಷಾಂತ್ಯದೊಳಗೆ ಬ್ಯಾಂಕ್ ಶಾಖೆಯನ್ನು 2 ಸಾವಿರಕ್ಕೆ ಏರಿಸುವ ಉದ್ದೇಶ ಹೊಂದಲಾಗಿದೆ. ಸಂಸ್ಥಾಪನಾ ದಿನದ ಅಂಗವಾಗಿ ಬ್ಯಾಂಕ್ಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ರಕ್ತದಾನ, ಕಣ್ಣು ಪರೀಕ್ಷೆ ಹಾಗೂ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗಿತ್ತು ಎಂದು ಬ್ಯಾಂಕ್ನ ಪ್ರಕಟಣೆ ತಿಳಿಸಿದೆ.
ವಿಕಲಚೇತನರ ಪಾಸ್ ನವೀಕರಣ ವಿಸ್ತರಣೆ
ಬೆಂಗಳೂರು: ವಿಕಲಚೇತನರ ರಿಯಾಯಿತಿ ಬಸ್ ಪಾಸ್ ನವೀಕರಿಸುವ ದಿನಾಂಕವನ್ನು ಮಾ.31ರವರೆಗೆ ವಿಸ್ತರಿಸಲಾಗಿದೆ ಎಂದು ಕೆಎಸ್ಸಾರ್ಟಿಸಿ ಹೇಳಿದೆ. 2012ರ ಡಿ.31ಕ್ಕೆ ಬಸ್ ಪಾಸ್ ಅವಧಿ ಪೂರ್ಣಗೊಂಡಿದ್ದು, 2013ನೇ ಸಾಲಿಗೆ ಇದನ್ನು ನವೀಕರಿಸಬೇಕಾಗಿದೆ. ಇದಕ್ಕಾಗಿ ಫೆ.28ರವರೆಗೆ ಕಾಲಾವಕಾಶ ನಿಗದಿಪಡಿಸಲಾಗಿತ್ತು. ಆದರೆ, ವಿಕಲಚೇತನ ಫಲಾನುಭವಿಗಳಿಗೆ ಸಕಾಲದಲ್ಲಿ ಪಾಸ್ಗಳ ನವೀಕರಣ ಕಷ್ಟಸಾಧ್ಯವಾಗಿದ್ದರಿಂದ ನಿಗದಿಪಡಿಸಿದ್ದ ಅವಧಿಯನ್ನು ಮಾ.31ರವರೆಗೆ ವಿಸ್ತರಿಸಲಾಗಿದೆ. ಅದುವರೆಗೆ 2012ನೇ ಸಾಲಿನ ಪಾಸುಗಳನ್ನು ನವೀಕರಣವಿಲ್ಲದೆ ಬಳಸಲು ಅನುಮತಿ ನೀಡಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಬಿಎಂಟಿಸಿ: ವಿಕಲಚೇತನರ ಬಸ್ ಪಾಸ್ ನವೀಕರಣಕ್ಕೆ ನಿಗದಿಪಡಿಸಿದ್ದ ಅವಧಿಯನ್ನು ಬಿಎಂಟಿಸಿ ಕೂಡ ಮಾ. 31ರವರೆಗೆ ವಿಸ್ತರಿಸಿದೆ. ಅದರಂತೆ 2012ನೇ ಸಾಲಿನ ಪಾಸ್ಗಳನ್ನು ಮಾ.31ರವರೆಗೆ ಬಳಸಲು ಅನುಮತಿ ನೀಡಲಾಗಿದೆ.
ಬೇಸಿಗೆ ವಿಶೇಷ ಬಸ್ ವ್ಯವಸ್ಥೆ
ಬೆಂಗಳೂರು: ರಾಜಧಾನಿಯಿಂದ ಪಾಂಡಿಚೇರಿ, ಸೇಲಂ, ಕಡಲೂರು ಮತ್ತು ಕಾಂಚಿಪುರಂ ಮಧ್ಯೆ ಬೇಸಿಗೆ ವಿಶೇಷ ಬಸ್ಗಳನ್ನು ಓಡಿಸಲು ಕೆಎಸ್ಸಾರ್ಟಿಸಿ ನಿರ್ಧರಿಸಿದೆ. ಫೆ.28 ರಿಂದ ಬೆಂಗಳೂರಿನಿಂದ ಪಾಂಡಿಚೇರಿಗೆ ಪ್ರತಿನಿತ್ಯ ರಾತ್ರಿ 10 ಗಂಟೆಗೆ ಮತ್ತು ಪಾಂಡಿಚೇರಿಯಿಂದ ಬೆಂಗಳೂರಿಗೆ ರಾತ್ರಿ 8 ಗಂಟೆಗೆ ನಾನ್ ಎಸಿ ಸ್ಲೀಪರ್ ಬಸ್, ಬೆಂಗಳೂರಿನಿಂದ ಸೇಲಂಗೆ ರಾತ್ರಿ 11 ಗಂಟೆಗೆ, ಸೇಲಂನಿಂದ ಬೆಂಗಳೂರಿಗೆ ಬೆ.9 ಗಂಟೆಗೆ ಕರೋನ ಬಸ್, ಬೆಂಗಳೂರಿನಿಂದ ಕಡಲೂರಿಗೆ ರಾತ್ರಿ 10 ಗಂಟೆ ಮತ್ತು ಕಡಲೂರಿನಿಂದ ಬೆಂಗಳೂರಿಗೆ ರಾತ್ರಿ 9 ಗಂಟೆಗೆ ರಾಜಹಂಸ ಬಸ್, ಬೆಂಗಳೂರಿನಿಂದ ಕಾಂಚಿಪುರಂಗೆ ರಾತ್ರಿ 10.30, ಕಾಂಚಿಪುರಂನಿಂದ ಬೆಂಗಳೂರಿಗೆ ಬೆಳಗ್ಗೆ 9 ಗಂಟೆಗೆ ಕರೋನ ಬಸ್ ವ್ಯವಸ್ಥೆ ಮಾಡಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.