ಸದಸ್ಯರು, ಅಧಿಕಾರಿಗಳ ಮೇಲೆ ಸಿದ್ದಯ್ಯ ಗರಂ
ಬೆಂಗಳೂರು: ತೆರಿಗೆ ಸಂಗ್ರಹಕ್ಕೆ ಹಗಲಿರುಳು ಶ್ರಮಿಸುತ್ತಿದ್ದರೂ ಸಹಕರಿಸದ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳ ವಿರುದ್ಧ ಆಯುಕ್ತ ಸಿದ್ದಯ್ಯ ಕೊನೆಗೂ ಗುಡುಗಿದ್ದಾರೆ.
ಪಾಲಿಕೆಗೆ ಎರಡನೇ ಬಾರಿಗೆ ಆಯುಕ್ತರಾಗಿ ಬಂದಾಗಿನಿಂದ ಭಣಗುಡುತ್ತಿದ್ದ ಬೊಕ್ಕಸ ತುಂಬಿಸಲು ಕಸರತ್ತು ನಡೆಸುತ್ತಿದ್ದರೂ ಆಡಳಿತ ಪಕ್ಷ ಮತ್ತು ಕಂದಾಯ ಅಧಿಕಾರಿಗಳಿಂದ ನಿರೀಕ್ಷಿತ ಸಹಕಾರ ಸಿಗಲಿಲ್ಲ.
ಆದರೂ ಮೌನ ವಹಿಸಿದ್ದ ಆಯುಕ್ತ ಸಿದ್ದಯ್ಯ ಬುಧವಾರ ಪಾಲಿಕೆ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದರು.
ಅದರಲ್ಲೂ ಕಂದಾಯ ಇಲಾಖೆಯನ್ನು ಕಿತ್ತುಹಾಕಿ ಎನ್ನುವಷ್ಟರ ಮಟ್ಟಿಗೆ ಕೆರಳಿದರು. ತೆರಿಗೆ ಬಾಕಿ ಉಳಿಸಿಕೊಂಡವರನ್ನು ಯಾರೆಲ್ಲಾ ರಕ್ಷಿಸುತ್ತಿದ್ದಾರೆ? ಇದರಿಂದ ಪಾಲಿಕೆಗೆ ಎಷ್ಟು ನಷ್ಟವಾಗುತ್ತಿದೆ? ಎಂದು ವಿವರಿಸುವ ಮೂಲಕ ಪರೋಕ್ಷವಾಗಿ ಪಾಲಿಕೆ ಸದಸ್ಯರನ್ನೂ ಚುಚ್ಚಿದರು. ಅವರನ್ನು ಮಹಾಶಯರು ಎಂದೆಲ್ಲಾ ವ್ಯಂಗ್ಯವಾಡಿ ಅಸಮಾಧಾನ ವ್ಯಕ್ತಪಡಿಸಿದರು.
ಕಾಸಿಲ್ಲದ ಕಷ್ಟದಲ್ಲಿದ್ದ ಪಾಲಿಕೆಗೆ ಆದಾಯ ಹರಿದು ಬರುವಂತಾಗಲು ಸಾಕಷ್ಟು ಶ್ರಮ ವಹಿಸಿದ್ದರೂ, ಕುತ್ತಿಗೆಗೆ ಬಂದಿದ್ದ ಕಸ ಕಾಟವನ್ನು ಬಹುತೇಕ ಪರಿಹರಿಸಿದ್ದರೂ ಆಡಳಿತ ಪಕ್ಷದಿಂದಾಗಲಿ, ಅಧಿಕಾರಿಗಳಿಂದಾಗಲಿ ನಿರೀಕ್ಷಿತ ಸಹಕಾರ ಸಿಕ್ಕಿರಲಿಲ್ಲ. ಇದರಿಂದ ಸಿದ್ದಯ್ಯ ಸಹಜವಾಗಿಯೇ ಬೇಸರವಾಗಿದ್ದರು. ಈ ಬಗ್ಗೆ 'ಕನ್ನಡಪ್ರಭ'ದಲ್ಲಿ ಫೆಬ್ರವರಿ 14ರಂದು ವಿಶೇಷ ವರದಿ ಪ್ರಕಟವಾಗಿತ್ತು.
ಏನೆಲ್ಲಾ ಆಯಿತು?: ಪಾಲಿಕೆ ಸಭೆಯ ಪ್ರಥಮ ದಿನ ಆಡಳಿತ ಪಕ್ಷದವರೂ ಸೇರಿದಂತೆ ಅನೇಕ ಸದಸ್ಯರು ಕಂದಾಯ ಸಂಗ್ರಹ ನಿರೀಕ್ಷೆಯಂತೆ ಆಗಿಲ್ಲ, ತಮಟೆ ಚಳವಳಿ ಏನೂ ಸಾಲದು ಎಂಬುದಾಗಿ ಕೆಲವು ಮಹಾಶಯರು ಹೇಳಿದ್ದಾರೆ ಎಂದು ಆಯುಕ್ತ ಸಿದ್ದಯ್ಯ ಮಾತು ಆರಂಭಿಸಿದರು.
ಎಸ್ಎಎಸ್ ಪದ್ಧತಿ ಪ್ರಕಾರ ಆಸ್ತಿ ತೆರಿಗೆ ಘೋಷಿಸಿದವರಲ್ಲಿ 3.2 ಲಕ್ಷ ಮಂದಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಇವರೆಲ್ಲರಿಂದಲೂ 786 ಕೋಟಿ ಸಂಗ್ರಹವಾಗಬೇಕಿದೆ. ಇಂಥವರಿಗೆ ಬಡ್ಡಿ ವಿಧಿಸಿದರೆ ಪಾಲಿಕೆಗೆ ಒಟ್ಟು 1000 ಕೋಟಿ ಈ ಬಾಕಿದಾರರಿಂದಲೇ ಬರುತ್ತದೆ. ಕಂದಾಯ ಅಧಿಕಾರಿಗಳು ಪರಿಶೀಲನೆ ನಡೆಸದೆ ಬಾಕಿ ದೊಡ್ಡ ಪ್ರಮಾಣದಲ್ಲಿ ಉಳಿದಿದೆ. ಹೌದು, ಕಂದಾಯ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆ ವಿಭಾಗವನ್ನೇ ಕಿತ್ತುಹಾಕಿ, ಈ ಬಗ್ಗೆ ನಿರ್ಣಯ ಮಾಡಿ ಎಂದು ಅಧಿಕಾರಿಗಳ ವಿರುದ್ಧ ಕೆರಳಿದರು.
ಮಾ.31ರ ಒಳಗೆ 1000ಕೋಟಿ: ತೆರಿಗೆ ಬಾಕಿ ವಸೂಲಿ ಆಗದಿರುವುದಕ್ಕೆ ಇನ್ನೂ ಅನೇಕ ಮಂದಿ ಕಾರಣ. ಅವರು ತೆರಿಗೆ ಬಾಕಿದಾರರು ಮತ್ತು ಪಾಲಿಕೆ ಅಧಿಕಾರಿಗಳ ನಡುವೆ ಇದ್ದಾರೆ. ಅಂಥವರು ಯಾರು ಎನ್ನುವುದನ್ನು ಇಲ್ಲಿ ಹೇಳುವುದು ಬೇಡ. ಈ ವಿಚಾರದ ಬಗ್ಗೆ ಬೇಕಿದ್ದರೆ, 2 ತಾಸು ಮಾತನಾಡಬಲ್ಲೆ. ಆದರೆ, ಬೇಡ ಎಂದು ಪರೋಕ್ಷ ತಿರುಗೇಟು ನೀಡಿದರು.
ಅನೇಕ ಮಂದಿ ಪಾಲಿಕೆ ರಸ್ತೆ ಮಾಡಿಲ್ಲ, ಚರಂಡಿ ಮಾಡಿಲ್ಲ, ವ್ಯವಸ್ಥೆ ಸರಿಯಿಲ್ಲ ಎಂದು ಟೀಕಿಸುತ್ತಿದ್ದಾರೆ. ಅವರಲ್ಲಿ ಬಹುತೇಕ ಮಂದಿ ತೆರಿಗೆಯನ್ನೇ ಪಾವತಿಸಿಲ್ಲ. ಆದ್ದರಿಂದ ಸದ್ಯದಲ್ಲೇ ಎಲ್ಲೆಡೆ ಪರಿಶೀಲನೆ ನಡೆಸಿ ಮಾ.31ರ ಒಳಗಾಗಿ 1000 ಕೋಟಿ ತೆರಿಗೆ ಸಂಗ್ರಹ ಮಾಡಲಾಗುವುದು ಎಂದು ಸಿದ್ದಯ್ಯ ವಿವರಿಸಿದರು.
ನಂತರ ಬಿಜೆಪಿಯ ಎ.ಎಚ್. ಬಸವರಾಜು, ಪಾಲಿಕೆ ಶಾಲೆಗಳಿಗೆ ಭದ್ರತೆ ವ್ಯವಸ್ಥೆಯಿಲ್ಲದೆ ಅನೈತಿಕ ಚಟುವಟಿಕೆಗಳು ಹೆಚ್ಚುತ್ತಿವೆ ಎಂದು ಸಭೆಯ ಗಮನ ಸೆಳೆದರು. ಇದಕ್ಕೆ ಕಟ್ಟೆಸತ್ಯನಾರಾಯಣ, ಬಿ.ವಿ. ಗಣೇಶ್, ಸೋಮಶೇಖರ್ ದನಿಗೂಡಿಸಿದರು. ಆಗ ಬಸವರಾಜು ಮಾತನಾಡಿ, ಈ ಬಗ್ಗೆ ಹಿಂದಿನ ಸಭೆಯಲ್ಲೇ ಆಯುಕ್ತರು ಸೂಚನೆ ನೀಡಿದ್ದರೂ ಅಧಿಕಾರಿಗಳು ಕಡತವನ್ನೇ ಮರೆಮಾಚಿದ್ದಾರೆ. ಕೆಲಸ ಆಗದಂತೆ ಆಯುಕ್ತರನ್ನೇ ದಿಕ್ಕುತಪ್ಪಿಸಿದ್ದಾರೆ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಬಿಜೆಪಿಯ ಎನ್.ಆರ್. ರಮೇಶ್, ನಗರದಲ್ಲಿರುವ 1500 ಹೊಟೇಲ್ಗಳು ತೆರಿಗೆಯಿಂದ ಹೇಗೆ ತಪ್ಪಿಸಿಕೊಳ್ಳುತ್ತಿವೆ ಎಂದು ವಿವರಿದರು.
ಕಾಂಗ್ರೆಸ್ನ ಮಲ್ಲೇಶ್ ಮಂತ್ರಿಮಾಲ್ ಬಗ್ಗೆ ಪ್ರಸ್ತಾಪಿಸಿದರೆ, ವೀರಣ್ಣ ನೀರಿನ ಸಮಸ್ಯೆ ಎತ್ತಿದರು. ಕೆ. ಚಂದ್ರಶೇಖರ್ ಬಿವಿಜಿ ಸಂಸ್ಥೆ ಗುತ್ತಿಗೆದಾರರು ಉಂಟು ಮಾಡಿರುವ ಕಸದ ಸಮಸ್ಯೆಗಳನ್ನು ಸಭೆಗೆ ವಿವರಿಸಿದರು.
ಬಿಜೆಪಿಯ ಎಂ. ನಾಗರಾಜ್, ಯಲಹಂಕ ರಸ್ತೆಯಲ್ಲಿ ಸಂಗ್ರಹವಾಗುತ್ತಿರುವ 4 ಕೋಟಿ ಟೋಲ್ನಿಂದ ಪಾಲಿಕೆಗೆ ತೆರಿಗೆ ಬರುವಂತೆ ಮಾಡಿ ಎಂದರು. ಬಿ.ವಿ.ಗಣೇಶ್, ಕಸ ಸಂಸ್ಕರಣೆಗೆ ಕ್ರಮ ಕೈಗೊಳ್ಳಬೇಕೆಂದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.