ಹಾಲಿ ನ್ಯಾ. ನೇಮಕಕ್ಕೆ ಸಿದ್ಧತೆ
ಬೆಂಗಳೂರು: ನಿವೃತ್ತ ನ್ಯಾಯಮೂರ್ತಿ ಸಿ.ಎಂ.ಚಂದ್ರಶೇಖರಯ್ಯ ಅವರ ನೇಮಕ ರದ್ದಾಗಿದ್ದರಿಂದ ತೆರವಾಗಿದ್ದ ಎರಡನೇ ಉಪ ಲೋಕಾಯುಕ್ತ ಹುದ್ದೆಗೆ ಹಾಲಿ ನ್ಯಾಯಮೂರ್ತಿಯೊಬ್ಬರನ್ನು ನೇಮಿಸಲು ಸರ್ಕಾರ ಮುಂದಾಗಿದೆ.
ಈ ಸಂಬಂಧ ಆಯ್ಕೆ ಸಮಿತಿಯಲ್ಲಿ ಅಂತಿಮ ತೀರ್ಮಾನವಾಗಿದ್ದು, ರಾಜ್ಯಪಾಲರ ಕಚೇರಿಗೆ ಶಿಫಾರಸನ್ನು ರವಾನಿಸಲಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಆದರೆ, ಸೇವೆಯಿಂದ ನಿವೃತ್ತಿಯಾಗಲು ಇನ್ನೂ ಆರು ತಿಂಗಳ ಅವಧಿ ಬಾಕಿ ಇರುವುದರಿಂದ ನ್ಯಾಯಮೂರ್ತಿಗಳು ಸ್ವಯಂ ನಿವೃತ್ತಿ ತೆಗೆದುಕೊಳ್ಳುತ್ತಾರೆಯೇ ಇಲ್ಲವೇ ಅವಧಿ ಮುಗಿಯುವರೆಗೆ ಕಾಯುತ್ತಾರೆಯೇ ಎಂಬ ಪ್ರಶ್ನೆ ಸದ್ಯ ಕುತೂಹಲ ಕೆರಳಿಸಿದೆ.
ಕಾನೂನು ತೊಡಕಿನ ಹಿನ್ನೆಲೆಯಲ್ಲಿ ಕಳೆದೊಂದು ವರ್ಷದಿಂದ ಖಾಲಿ ಉಳಿದಿದ್ದ ಹುದ್ದೆಯನ್ನು ಭರ್ತಿ ಮಾಡಲು ಸಜ್ಜಾಗಿರುವ ಸರ್ಕಾರ, ಸದ್ಯದಲ್ಲೇ ನಿವೃತ್ತಿ ಹೊಂದಲಿರುವ ನ್ಯಾಯಮೂರ್ತಿಯ ಹೆಸರನ್ನು ಪ್ರಸ್ತಾಪಿಸಿದೆ. ಕಳೆದ ಹಲವು ದಿನಗಳಿಂದ ಇವರ ಹೆಸರು ಚಾಲ್ತಿಯಲ್ಲಿದ್ದು, ಇದೀಗ ಆಯ್ಕೆ ಸಮಿತಿ ಅದನ್ನು ಅಂತಿಮಗೊಳಿಸಿದೆ. ಆದರೆ, ಅದಕ್ಕಿನ್ನೂ ರಾಜ್ಯಪಾಲರ ಅಂಕಿತ ಬೀಳಬೇಕಿದೆ.
ಈ ಹಿಂದೆ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದಾಗಲೇ ಉಪಲೋಕಾಯುಕ್ತರಾಗಿ ಆಯ್ಕೆಯಾಗಿದ್ದ ಜಿ.ಪಿ.ಶಿವಪ್ರಕಾಶ್ ಅವರು ನಿವೃತ್ತಿಯ ನಂತರ ಹುದ್ದೆ ಅಲಂಕರಿಸಿದ್ದರು. ಈ ಸಾಲಿನಲ್ಲಿ ಇದು ಎರಡನೇ ನೇಮಕ.
ಕಾನೂನು ತೊಡಕು: 2012ರ ಜನವರಿ 21ರಂದು ಎರಡನೇ ಲೋಕಾಯುಕ್ತರಾಗಿ ನಿವೃತ್ತ ನ್ಯಾ.ಚಂದ್ರಶೇಖರಯ್ಯ ನೇಮಕಗೊಂಡಿದ್ದರು. ಆದರೆ, ನೇಮಕ ಪ್ರಕ್ರಿಯೆ ಸರಿಯಿಲ್ಲ. ನೇಮಕ ಸಂದರ್ಭದಲ್ಲಿ ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ ಸೆಕ್ಷನ್ 3(2)(ಎ) ಪ್ರಕಾರ ತಮ್ಮ ಅಭಿಪ್ರಾಯವನ್ನು ಪರಿಗಣಿಸಿಲ್ಲ ಎಂದು ಆಕ್ಷೇಪಿಸಿ ಅಂದಿನ ಮುಖ್ಯ ನ್ಯಾಯಮೂರ್ತಿಗಳು ರಾಜ್ಯಪಾಲರಿಗೆ ಪತ್ರ ಬರೆದಿದ್ದರು.
ಈ ಸಂಬಂಧ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಲೋಕಾಯುಕ್ತ, ಉಪಲೋಕಾಯುಕ್ತ ನೇಮಕ ಪ್ರಕ್ರಿಯೆಯಲ್ಲಿ ಮುಖ್ಯ ನ್ಯಾಯಮೂರ್ತಿಗಳ ಆಯ್ಕೆಯೇ ಅಂತಿಮವಾಗಿರಬೇಕು ಎಂದು ತೀರ್ಪು ನೀಡಿತ್ತಲ್ಲದೆ, ನ್ಯಾ.ಚಂದ್ರಶೇಖರಯ್ಯ ಅವರ ನೇಮಕವನ್ನು ರದ್ದುಗೊಳಿಸಿತ್ತು.
ಈ ನಡುವೆ, ನ್ಯಾಯಪೀಠದ ಆದೇಶ ಪ್ರಶ್ನಿಸಿ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಲೋಕಾಯುಕ್ತ, ಉಪಲೋಕಾಯುಕ್ತ ನೇಮಕ ಪ್ರಕ್ರಿಯೆಯ ಅಂತಿಮ ನಿರ್ಧಾರ ಮುಖ್ಯಮಂತ್ರಿಗಳದ್ದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು.
ಈ ಕಾನೂನು ತೊಡಕುಗಳು ನಿವಾರಣೆಯಾದ ನಂತರ ಖಾಲಿ ಇದ್ದ ಲೋಕಾಯುಕ್ತ ಹುದ್ದೆಗೆ ನ್ಯಾ.ಭಾಸ್ಕರರಾವ್ ಅವರನ್ನು ಸರ್ಕಾರ ನೇಮಿಸಿದೆ. ಇದೀಗ ಎರಡನೇ ಲೋಕಾಯುಕ್ತ ಹುದ್ದೆಯ ಭರ್ತಿ ಮುಂದಾಗಿದೆ. ಇನ್ನೊಂದು ಉಪಲೋಕಾಯುಕ್ತ ಹುದ್ದೆಯಲ್ಲಿ ನ್ಯಾ.ಮಜಗೆ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
-ಸುಪ್ರೀತಾ ಹೆಬ್ಬಾರ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.