ಆಪ್ತ ಸಹಾಯಕರಿಗಾಗಿ ನಿಯಮ ಸಡಿಲಿಸಿದ ಶಂಕರಮೂರ್ತಿ
ಬೆಂಗಳೂರು: ತಮ್ಮ ಆಪ್ತ ಸಹಾಯಕರಿಗಾಗಿ ವಿಧಾನಮಂಡಲದ ನಿಯಮವನ್ನೇ ಸಡಿಲಿಸಿರುವ ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ನಾಲ್ವರು ಸಿಬ್ಬಂದಿ ಜತೆ ವಿದೇಶಕ್ಕೆ ಹಾರಿದ್ದಾರೆ.
ಸಭಾಪತಿಯಾದ ನಂತರ ಆಗಾಗ ಕಚೇರಿ ನವೀಕರಣ ಮಾಡಿಸುವ ಮೂಲಕ ಶಂಕರಮೂರ್ತಿ ಸುದ್ದಿಯಲ್ಲಿದ್ದರು. ಆದರೆ ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿರುವ ಅವರು ತಮ್ಮ ವಿಶೇಷ ಕರ್ತವ್ಯಾಧಿಕಾರಿ ಡಾ.ಆರ್. ನರಸಿಂಹಮೂರ್ತಿ ಸೇರಿದಂತೆ ನಾಲ್ವರು ಸಿಬ್ಬಂದಿಯನ್ನು ವಿದೇಶಕ್ಕೆ ಕರೆದೊಯ್ಯಲು ವಿಧಾನ ಮಂಡಲದ ನಿಯಮ 487ನ್ನೇ ಸಡಿಲಿಸಿದ್ದಾರೆ. ವಿಧಾನ ಪರಿಷತ್ ಸದಸ್ಯರ ಜತೆ ತಾವು ಕೈಗೊಳ್ಳುವ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಹಾಗೂ ಹಾಂಕಾಂಗ್ ಪ್ರವಾಸ ಸಂದರ್ಭದಲ್ಲಿ ಈ ನಾಲ್ವರು ಜತೆಯಾಗಿರಬೇಕೆಂಬ ಕಾರಣಕ್ಕಾಗಿ ಸಭಾಪತಿಗಳು ಈ 'ರೂಲಿಂಗ್' ನೀಡಿದ್ದಾರೆ!
ಹೌದು. ವಿಧಾನ ಪರಿಷತ್ನ 20 ಸದಸ್ಯರ ಜತೆ ಡಿ.ಎಚ್. ಶಂಕರಮೂರ್ತಿ ಅವರು ಜ.18ರಂದು ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಜ.31ರ ವರೆಗೂ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಹಾಗೂ ಹಾಂಕಾಂಗ್ನಲ್ಲಿ ಮೇಲ್ಮನೆ ಸದಸ್ಯರ ಅಧ್ಯಯನ ಪ್ರವಾಸ ನಡೆಯುತ್ತದೆ. ಆದರೆ ನಿಯಮ ಪ್ರಕಾರ ಅವರ ವಿಶೇಷ ಕರ್ತವ್ಯಾಧಿಕಾರಿ ಡಾ.ಆರ್. ನರಸಿಂಹಮೂರ್ತಿ, ಶಾಖಾಧಿಕಾರಿ ಕೆ.ಸಿ.ಪ್ರಭು, ಆರ್ಥಿಕ ಅಧಿಕಾರಿ ಎಂ.ಜಿ. ಸುಬ್ರಹ್ಮಣ್ಯ, ಅಭಿಲೇಖನಾಧಿಕಾರಿ ಜಿ. ರಮೇಶ್ ಅವರ ಮೂಲ ವೇತನ ಕಡಿಮೆ ಇರುವುದರಿಂದ ನಿಯಮ 487ರ ಪ್ರಕಾರ ವಿಮಾನ ಮೂಲಕ ಪ್ರಯಾಣಿಸಿದಾಗ ಹಣ ಸಂದಾಯ ಮಾಡುವುದಕ್ಕೆ ಅವಕಾಶವೇ ಇಲ್ಲ. ಈ ಕಾರಣಕ್ಕಾಗಿ ನಿಯಮ 487ನ್ನು ಸಡಿಲಿಸಲು ಆದೇಶ ನೀಡಿರುವ ಶಂಕರಮೂರ್ತಿ, ಪ್ರವಾಸದ ಪ್ರಯಾಣ/ದಿನ ಭತ್ಯೆಯ ರೂಪದಲ್ಲಿ # 5,75,875 ಬಿಡುಗಡೆ ಮಾಡುವಂತೆ ಆದೇಶಿಸಿದ್ದಾರೆ. ಮಾತ್ರವಲ್ಲ ಜನವರಿ 11ರಂದೇ ಈ ಬಗ್ಗೆ ಅಧೀನ ಕಾರ್ಯದರ್ಶಿ ಎಸ್. ಶಕುಂತಲಾ ಅವರ ಮೂಲಕ ಪ್ರಯಾಣ ಭತ್ಯೆಯಲ್ಲಿ # 5,15,000ನ್ನು ಮುಂಗಡವಾಗಿ ಪಾವತಿ ಮಾಡುವುದಕ್ಕೆ ವ್ಯವಸ್ಥೆ ಮಾಡಿದ್ದಾರೆ. ಶಂಕರಮೂರ್ತಿಯವರು ಸದಾ ನಿಯಮ ಪಾಲಿಸುವುದಕ್ಕೆ ಹೆಸರುವಾಸಿ. ವಿದೇಶ ಪ್ರವಾಸಕ್ಕಾಗಿ ಸಿಬ್ಬಂದಿ ಪ್ರೀತಿ ಮೆರೆಯುವುದಕ್ಕಾಗಿ ನಿಯಮ ಸಡಿಲಿಸಿರುವುದು ಎಷ್ಟು ಸರಿ?
ಯಾರ್ಯಾರು ಹೋಗಿದ್ದಾರೆ?: ಸಭಾಪತಿಜತೆ ಪರಿಷತ್ ಸದಸ್ಯರಾದ ಸೋಮಣ್ಣ ಬೇವಿನಮರದ, ಅಮರನಾಥ್ ಪಾಟೀಲ, ಅಲ್ಲಮಪ್ರಭು ಪಾಟೀಲ, ರಾಮಚಂದ್ರಗೌಡ, ಡಾ.ಎಚ್. ಶಿವಯೋಗಿಸ್ವಾವು, ಸದಾನಂದಗೌಡ, ಜಿ. ಎಚ್. ತಿಪ್ಪಾರೆಡ್ಡಿ, ಗೋ. ಮಧುಸೂದನ, ದಯಾನಂದ, ಮೃತ್ಯಂಜಯ ಜಿನಗಾ, ಲೆಹರ್ಸಿಂಗ್, ಕೆ.ವಿ. ನಾರಾಯಣಸ್ವಾಮಿ, ವಿಜಯಶಂಕರ್, ಪ್ರೊ. ದೊರೆಸ್ವಾಮಿ, ಆರ್.ಕೆ. ಸಿದ್ದರಾಮಣ್ಣ, ಜಿ.ಎಸ್. ನ್ಯಾಮಗೌಡ, ರಘುನಾಥರಾವ್ ಮಲ್ಕಾಪುರೆ, ಪ್ರೊ.ಪಿ.ವಿ. ಕೃಷ್ಣ ಭಟ್, ಸೈಯದ್ ಮುದೀರ್ ಆಗಾ, ಶಿವರಾಜ್ ಸಜ್ಜನ್ ಅವರ ಜತೆ ವಿದೇಶಕ್ಕೆ ತೆರಳಬೇಕಿತ್ತು. ಆದರೆ ರಘುನಾಥ್ರಾವ್ ಮಲ್ಕಾಪುರೆ, ಡಾ.ಎಚ್. ಶಿವಯೋಗಿಸ್ವಾವು, ಸೋಮಣ್ಣ ಬೇವಿನಮರದ ಕೊನೆಗೆ ಗಳಿಗೆಯಲ್ಲಿ ಹಿಂದೆ ಸರಿದಿದ್ದಾರೆ ಎಂದು ತಿಳಿದು ಬಂದಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.