ವಿಜಯಾ ಬ್ಯಾಂಕ್ 126 ಕೋಟಿ ಆದಾಯ: ಉಪೇಂದ್ರ ಕಾಮತ್
ಬೆಂಗಳೂರು: ವಿಜಯಾ ಬ್ಯಾಂಕ್ ತನ್ನ ಒಟ್ಟಾರೆ ವಹಿವಾಟಿನಲ್ಲಿ 1,50,000 ಕೋಟಿ ದಾಖಲೆ ಮೊತ್ತದ ಗಡಿ ದಾಟಿದ್ದಲ್ಲದೇ, ಪ್ರಸಕ್ತ ಹಣಕಾಸು ವರ್ಷದ 3ನೇ ತ್ರೈಮಾಸಿಕದಲ್ಲಿ 126.73 ಕೋಟಿ ನಿವ್ವಳ ಆದಾಯ ಗಳಿಸಿದೆ.
2012-13ನೇ ಸಾಲಿನಲ್ಲಿ ಬ್ಯಾಂಕ್ನ ಸಾಧನೆ ಹಾಗೂ 3ನೇ ತ್ರೈಮಾಸಿಕದಲ್ಲಿನ ವಹಿವಾಟು ವಿವರ ಕುರಿತು ಬ್ಯಾಂಕ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಚ್.ಎಸ್. ಉಪೇಂದ್ರ ಕಾಮತ್ ಗುರುವಾರ ಪ್ರಧಾನ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ವ್ಯತಿರಿಕ್ತ ಆರ್ಥಿಕ ಸ್ಥಿತಿ ನಡುವೆಯೂ ವಿಜಯಾ ಬ್ಯಾಂಕ್ ಉತ್ತಮ ಸಾಧನೆ ತೋರಿದ್ದು, ಬ್ಯಾಂಕ್ನ ಒಟ್ಟಾರೆ ವಹಿವಾಟು 1,54,320 ಕೋಟಿ ತಲುಪಿದೆ. ಇದು ಈವರೆಗಿನ ಗರಿಷ್ಠ ವಹಿವಾಟು ಮೊತ್ತವಾಗಿದ್ದು, ಬ್ಯಾಂಕ್ ಈ ಮೂಲಕ ದಾಖಲೆ ನಿರ್ಮಿಸಿ, ಒಟ್ಟಾರೆ ವಹಿವಾಟಿನಲ್ಲಿ ಶೇ.12ರಷ್ಟು ಪ್ರಗತಿ ಕಂಡಿದೆ. ಜತೆಗೆ, ಪ್ರಸಕ್ತ ಸಾಲಿನ 3ನೇ ತ್ರೈಮಾಸಿಕದ 126.73 (ಕಳೆದ ವರ್ಷ 3ನೇ ತ್ರೈಮಾಸಿಕದಲ್ಲಿ 124.27) ಕೋಟಿ ನಿವ್ವಳ ಆದಾಯ ಗಳಿಸಿದೆ. ಮುಂಗಡಗಳ ಮೇಲಿನ ಬಡ್ಡಿ ಆದಾಯ ಈ ತ್ರೈಮಾಸಿಕದಲ್ಲಿ ಶೇ.7.50 ಹಾಗೂ ಠೇವಣಿಗಳ ಮೇಲಿನ ಆದಾಯ ಶೇ.13.03 ಏರಿಕೆ ಕಂಡಿದೆ ಎಂದು ಉಪೇಂದ್ರ ಕಾಮತ್ ಅವರು ತಿಳಿಸಿದರು.
ಕಳೆದ 9 ತಿಂಗಳಲ್ಲಿ ಬ್ಯಾಂಕ್ನ ಒಟ್ಟು ಬಡ್ಡಿ ಆದಾಯ 5025.1 ಕೋಟಿಯಾಗಿದ್ದು ಇದು ಕಳೆದ ಸಾಲಿನ 3 ತ್ರೈಮಾಸಿಕಗಳ ಬಡ್ಡಿ ಆದಾಯ (4403.21ಕೋಟಿ)ಕ್ಕಿಂತ ಶೇ.14.12 ಅಧಿಕ. ಅಲ್ಲದೆ ಪ್ರಸಕ್ತ ಸಾಲಿನ 3 ತ್ರೈಮಾಸಿಕಗಳ ಠೇವಣಿ ಆದಾಯ 1591.28 ಕೋಟಿ ಯಾಗಿದ್ದು, ಇದು ಕಳೆದ ವರ್ಷದ 3 ತ್ರೈಮಾಸಿಕಗಳ ಠೇವಣಿ ಆದಾ ಯಕ್ಕಿಂತ (1380.68 ಕೋಟಿ) ಹೆಚ್ಚು. ಜತೆಗೆ, ಬ್ಯಾಂಕ್ನ ಒಟ್ಟು ಶಾಖೆಗಳ ಸಂಖ್ಯೆ 1333 ತಲುಪಿದ್ದು, 49 ಹೊಸ ಎಟಿಎಂಗಳ ಸ್ಥಾಪನೆ ಮೂಲಕ ಎಟಿಎಂಗಳ ಸಂಖ್ಯೆ 803 ತಲುಪಿದೆ ಎಂದು ಅವರು ತಿಳಿಸಿದರು.
ಮುಂದಿನ ಗುರಿ: ಮುಂದಿನ ಆರ್ಥಿಕ ವರ್ಷ ಬ್ಯಾಂಕ್ 1,65,000 ವಹಿವಾಟು ನಡೆಸುವ ಜತೆಗೆ 98,000 ಕೋಟಿ ಠೇವಣಿ ಹೊಂದುವ ಹಾಗೂ 67,000 ಕೋಟಿ ಮುಂಗಡ ನೀಡುವ ಗುರಿ ಇರಿಸಿಕೊಂಡಿದೆ ಎಂದು ಅವರು ತಿಳಿಸಿದರು. ಬ್ಯಾಂಕ್ನ ಕಾರ್ಯನಿರ್ವಾಹಕ ನಿರ್ದೇಶಕ ಕೆ.ರಾಮದಾಸ್ ಶೆಣೈ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.