ಸಾರಿಗೆ ಸಂಸ್ಥೆ ಪರ್ಯಾಯ ಮಾರ್ಗ ಚಾಲಕ ಹೈರಾಣು
ಬೆಂಗಳೂರು: ಡೀಸೆಲ್ ದರ ಹೆಚ್ಚಳದಿಂದ ಆಗಬಹುದಾದ ನಷ್ಟ ತಪ್ಪಿಸಲು ಸಾರಿಗೆ ಸಂಸ್ಥೆ ಕಂಡುಕೊಂಡಿರುವ ಪರ್ಯಾಯ 'ಮಾರ್ಗ' ಸಂಸ್ಥೆಯ ಚಾಲಕರನ್ನು ಅವಧಿಗೂ ಮೀರಿ 'ರಸ್ತೆ'ಯಲ್ಲಿ ಉಳಿಯುವಂತೆ ಮಾಡಿದೆ..!
ಕೇಂದ್ರ ಸರ್ಕಾರ ಡೀಸೆಲ್ ದರ ನಿಯಂತ್ರಣ ಮುಕ್ತಗೊಳಿಸಿರುವುದರಿಂದ ಹೆಚ್ಚಾಗಿರುವ ಡೀಸೆಲ್ ಬೆಲೆಯಿಂದ ಆಗಬಹುದಾದ ನಷ್ಟ ತಪ್ಪಿಸಲು ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಖಾಸಗಿ ಬಂಕ್‌ಗಳಿಂದ ಡೀಸೆಲ್ ಭರ್ತಿ ಮಾಡಿಕೊಳ್ಳುವ ಪರ್ಯಾಯ ಮಾರ್ಗ ಕಂಡುಕೊಂಡಿವೆ.
ಆ ಮೂಲಕ ಪ್ರಯಾಣ ದರ ಏರಿಸಿ ಸಾರ್ವಜನಿಕರ ಮೇಲೆ ಹೊರೆಯಾಗಿಸುವುದನ್ನು ಸಾರಿಗೆ ಸಂಸ್ಥೆಗಳು ತಪ್ಪಿಸಿವೆ. ಆದರೆ, ಇದು ಸಂಸ್ಥೆಯ ಚಾಲಕರ ಕೆಲಸದ ಹೊರೆಯನ್ನು ಹೆಚ್ಚಿಸಿದೆ. ಅಲ್ಲದೆ, ಡೀಸೆಲ್ ಭರ್ತಿಮಾಡಿಕೊಳ್ಳುವುದಕ್ಕಾಗಿ ಚಾಲಕರು ತಮ್ಮ ಪಾಳಿ ಅವಧಿ ಮುಗಿದ ಮೇಲೂ ರಸ್ತೆ ಬದಿಯಲ್ಲಿ ಬಂಕ್‌ಗಳ ಮುಂದೆ ಕಾದು ಹೈರಾಣಾಗುವಂತೆ ಮಾಡಿದೆ.
ಕೇಂದ್ರ ಸರ್ಕಾರ ಡೀಸೆಲ್ ದರ ನಿಯಂತ್ರಣ ಮುಕ್ತಗೊಳಿಸಿರುವುದರಿಂದ ಖಾಸಗಿ ಬಂಕ್‌ಗಳಲ್ಲಿ ಲೀ.ಗೆ 50 ಪೈಸೆ ಏರಿಕೆಯಾಗಿದ್ದರೆ, ಸಗಟು ಖರೀದಿದಾರರಾದ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಮುಂತಾದ ಸಂಸ್ಥೆಗಳಿಗೆ ಲೀ.ಗೆ # 11.95 ಹೆಚ್ಚಾಗಿದೆ. ಹಾಗಾಗಿ ಸಗಟು ರೂಪದಲ್ಲಿ ತೈಲ ಸಂಸ್ಥೆಗಳಿಂದ ಡೀಸೆಲ್ ಖರೀದಿಸಿದಲ್ಲಿ ಆಗಬಹುದಾದ ಕೋಟ್ಯಂತರ ರುಪಾಯಿ ನಷ್ಟ ತಪ್ಪಿಸಲು ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಕಳೆದೆರಡು ದಿನದಿಂದ ಖಾಸಗಿ ಬಂಕ್‌ಗಳಲ್ಲಿ ಡೀಸೆಲ್ ಭರಿಸಿಕೊಳ್ಳುತ್ತಿವೆ.
ಈ ಮೊದಲು ಚಾಲಕರು ತಮ್ಮ ಕರ್ತವ್ಯ ಮುಗಿಯುತ್ತಿದ್ದಂತೆ ಡಿಪೋಗಳಲ್ಲಿ ವಾಹನಗಳನ್ನು ಬಿಟ್ಟು ಮನೆಗೆ ತೆರಳುತ್ತಿದ್ದರು. ಹಾಗೂ ಡಿಪೋದಲ್ಲೇ ಡೀಸೆಲ್ ಭರ್ತಿ ಮಾಡಲಾಗುತ್ತಿತ್ತು. ಆದರೆ, ಈಗ ಸಂಸ್ಥೆ ಸಗಟು ರೂಪದಲ್ಲಿ ಡೀಸೆಲ್ ಖರೀದಿ ನಿಲ್ಲಿಸಿರುವುದರಿಂದ ಖಾಸಗಿ ಬಂಕ್‌ಗಳಲ್ಲಿ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಅದಕ್ಕಾಗಿ ಚಾಲಕರನ್ನೇ ಬಳಸಿಕೊಳ್ಳಲಾಗುತ್ತಿದ್ದು, ಪಾಳಿ ಮುಗಿಸಿ ಬಂದ ಅವರು ಡಿಪೋಗೆ ಹತ್ತಿರದಲ್ಲಿ ಸಂಸ್ಥೆ ನಿಗದಿಪಡಿಸಿರುವ ಖಾಸಗಿ ಬಂಕ್‌ಗೆ ತೆರಳಿ ಡೀಸೆಲ್ ಭರ್ತಿ ಮಾಡಿಸಿಕೊಳ್ಳಬೇಕು.
ಹೆಚ್ಚಿನ ಅವಧಿ ಕಾರ್ಯ ನಿರ್ವಹಣೆ: ನಗರದಲ್ಲಿರುವ ವಿವಿಧ ಡಿಪೋಗಳಡಿ ಸುಮಾರು 6 ಸಾವಿರಕ್ಕೂ ಅಧಿಕ ಬಿಎಂಟಿಸಿ ಬಸ್‌ಗಳು ದಿನಂಪ್ರತಿ ಕಾರ್ಯಾಚರಣೆ ನಡೆಸುತ್ತಿವೆ. ಈ ಎಲ್ಲ ಬಸ್‌ಗಳಿಗೂ ಸದ್ಯ ಖಾಸಗಿ ಬಂಕ್‌ಗಳಿಂದಲೇ ಡೀಸೆಲ್ ಭರಿಸಿಕೊಳ್ಳಬೇಕಾಗಿರುವುದರಿಂದ ಬಂಕ್‌ಗಳ ಮುಂದೆ ಬಸ್‌ಗಳ ದಂಡೇ ನೆರೆದಿರುತ್ತದೆ. ಹೀಗೆ ಸರದಿಯಲ್ಲಿ ಬಸ್ ನಿಲ್ಲಿಸಿಕೊಂಡು ಕಾಯುವ ಚಾಲಕರು ಕನಿಷ್ಠ ಒಂದೆರಡು ಗಂಟೆ ಹೆಚ್ಚಾಗಿ ಕಾರ್ಯನಿರ್ವಹಿಸಬೇಕಾಗಿದೆ. ಮೊದಲೇ ನಿತ್ಯದ ಪಾಳಿ, ಅವಧಿ ಮೀರಿ ಕೆಲಸ ಮಾಡುತ್ತಿರುವ ಚಾಲಕರು ಈಗ ಮತ್ತೆ ಒಂದೆರಡು ಗಂಟೆ ಹೆಚ್ಚುವರಿ ಕೆಲಸ ಮಾಡಬೇಕಾಗಿದೆ.
ಮೈಸೂರು 'ದೂರ': ರಾಜ್ಯದ ಇತರ ವಿಭಾಗಗಳಿಂದ ಬರುವ ಕೆಎಸ್‌ಆರ್‌ಟಿಸಿ ಬಸ್‌ಗಳು ಬರುವಾಗಲೇ ಡೀಸೆಲ್ ಭರ್ತಿ ಮಾಡಿಕೊಂಡು ಬರುತ್ತಿವೆ. ಆದರೆ, ನಗರದ ಕೇಂದ್ರೀಯ ವಿಭಾಗದ 6 ಡಿಪೋಗಳಡಿ ಕಾರ್ಯನಿರ್ವಹಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳು ನಗರದ ಬಂಕ್‌ಗಳಲ್ಲೇ ಡೀಸೆಲ್ ಭರ್ತಿಮಾಡಿಕೊಳ್ಳಬೇಕು. ಅವುಗಳಲ್ಲಿ ಮೈಸೂರು, ಚಾಮರಾಜನಗರ ಮುಂತಾದ ಕಡೆಗೆ ಸಾಗುವ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ನಾಯಂಡಹಳ್ಳಿಯಲ್ಲಿರುವ ಖಾಸಗಿ ಬಂಕ್‌ನಲ್ಲಿ ಡೀಸೆಲ್ ತುಂಬಿಸಲಾಗುತ್ತಿದೆ. ಸಾಮಾನ್ಯವಾಗಿ ಪ್ರಯಾಣಿಕರನ್ನು ಇಳಿಸಿದ ಬಳಿಕ ಖಾಲಿ ಬಸ್‌ಗಳನ್ನು ಬಂಕ್‌ಗಳಿಗೆ ಕೊಂಡೊಯ್ದು ಡೀಸೆಲ್ ಭರ್ತಿ ಮಾಡಿಕೊಳ್ಳಲಾಗುತ್ತದೆ. ಆದರೆ, ಮೈಸೂರು ಕಡೆಗೆ ಸಾಗುವ ಕೆಲವು ಬಸ್‌ಗಳನ್ನು ಪ್ರಯಾಣಿಕರ ಸಹಿತ ಬಂಕ್‌ಗಳಿಗೆ ಕೊಂಡೊಯ್ದು ಡೀಸೆಲ್ ಭರಿಸಿಕೊಳ್ಳಲಾಗುತ್ತದೆ. ಮೈಸೂರು ಮುಂತಾದ ಕಡೆಗೆ ಈಗಾಗಲೇ ಸಂಚಾರ ದಟ್ಟಣೆಯಿಂದ ತಡವಾಗುತ್ತಿರುವ ಪ್ರಯಾಣ ಈಗ ಮತ್ತಷ್ಟು ವಿಳಂಬವಾಗುತ್ತಿದೆ. ಹಾಗಾಗಿ, ಹೆಚ್ಚುವರಿ ಶ್ರಮದ ಜತೆಗೆ ಪ್ರಯಾಣಿಕರಿಂದಲೂ ಅಸಮಾಧಾನದ ಮಾತು ಕೇಳುವಂತಾಗಿದೆ ಎಂದು ಚಾಲಕರು ತಿಳಿಸಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.