ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ನಗರ

ತಾಂತ್ರಿಕತೆಯ 'ವಿಶ್ವರೂಪಂ'

Parashurama
Updated On : 27 Jan 2013, 12:27 pm

ಬೆಂಗಳೂರು: ಧರ್ಮದ ಬಣ್ಣ ಬಳಿದು ಒಂದು ಚಿತ್ರದ ಪ್ರದರ್ಶನವನ್ನೇ ತಡೆ ಹಿಡಿಯುವ ಅಗತ್ಯ ಇತ್ತೇ?
ನಿಜಕ್ಕೂ ಈ ಚಿತ್ರದ ಅಸಲಿ ಮುಖ ಯಾವುದು?
ಬಹುಕೋಟಿ ವೆಚ್ಚದ 'ವಿಶ್ವರೂಪಂ' ಚಿತ್ರ ನೋಡಿದಾಗ ಮೂಡುವ ಪ್ರಶ್ನೆ ಇದು. ನಟ ಕಮಲ್‌ಹಾಸನ್ ಅಭಿನಯಿಸಿ, ನಿರ್ದೇಶಿಸಿ, ನಿರ್ಮಾಣ ಮಾಡಿರುವ ಈ ಚಿತ್ರ ತೆರೆಗೆ ಬರುವಾಗ ಒಂದು ಸಮುದಾಯ ಆಕ್ಷೇಪ ಎತ್ತಿತು. 'ಚಿತ್ರದಲ್ಲಿ ಮುಸ್ಲಿಂರನ್ನು ಭಯೋತ್ಪಾದಕರಂತೆ ಚಿತ್ರಿಸಲಾಗಿದೆ. ಕೋಮು ಸೌಹಾರ್ದ ಕದಡುವ ಅಂಶಗಳಿವೆ' ಎಂಬುದು ಒಂದು ಗುಂಪಿನ ವಾದ. ಆದರೆ ಕೋಮು ಸೌಹಾರ್ದ ರಕ್ಷಣೆಯ ಹೆಸರಿನಲ್ಲಿ ಒಬ್ಬ ಕಲಾವಿದನ ಕನಸಿನ ಚಿತ್ರದ ವಿರುದ್ಧ ಇಲ್ಲಸಲ್ಲದ ಗುಲ್ಲೆಬ್ಬಿಸಿ, ಚಿತ್ರದ ಪೋಸ್ಟರ್‌ಗಳನ್ನು ಹರಿದು ಹಾಕಿದ್ದು, ಅವರ ಕಚೇರಿ ಮೇಲೆ ದಾಳಿ ಮಾಡಿದ್ದು ಸರಿಯೇ? ಚಿತ್ರದಲ್ಲಿ ನಿಜವಾಗಲೂ ಒಂದು ಕೋಮಿಗೆ ಅವಮಾನ ಮಾಡಲಾಗಿದೆಯೇ?
ಚಿತ್ರವನ್ನೇ ನೋಡದೆ ಈ ರೀತಿ ಗಲಾಟೆ ಮಾಡುವುದರಿಂದ ಯಾವ ಕೋಮು ಸೌಹಾರ್ದದ ರಕ್ಷಣೆಯಾಗುತ್ತದೆ? ಎಂಬುದು ಚಿತ್ರ ನೋಡಿದವರ ಖಡಕ್ ಪ್ರಶ್ನೆ.
ಚಿತ್ರದ ಹೈಲೈಟ್ಸ್: ಕಥೆಗಿಂತ ಚಿತ್ರದಲ್ಲಿ ಬಳಸಿದ ತಾಂತ್ರಿಕತೆ ಪ್ರೇಕ್ಷಕನ ಗಮನ ಸೆಳೆಯುತ್ತದೆ. ಪಾದರಸದಂತೆ ಓಡಾಡಿರುವ ಸಂಕಲನಕಾರನ ಕತ್ತರಿ, ಸಣ್ಣ ಸಣ್ಣ ಅಂಶಗಳನ್ನೂ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿರುವ ಛಾಯಾಗ್ರಹಣ ಚಿತ್ರದ ನಿಜವಾದ ಜೀವಾಳ. ಅದರಲ್ಲೂ ಅಘ್ಫಾನಿಸ್ತಾನದಲ್ಲಿ ಬರುವ ಚಿತ್ರದ ಭಾಗಗಳು ಯಾವುದೇ ಹಾಲಿವುಡ್ ಚಿತ್ರಗಳ ಮೇಕಿಂಗ್‌ಗೂ ಕಡಿಮೆಯಿಲ್ಲ. ಚೇಸಿಂಗ್, ಆ್ಯಕ್ಷನ್ ಎಲ್ಲವೂ ಸೂಪರ್. ಒಟ್ಟಾರೆ ತಾಂತ್ರಿಕತೆ ಚಿತ್ರಕ್ಕೆ ಅಂತಾರಾಷ್ಟ್ರೀಯ ಗುಣಮಟ್ಟವನ್ನು ತಂದುಕೊಟ್ಟಿದೆ. ಇದರ ಜೊತೆಗೆ ಎಂದಿನಂತೆ ಕಮಲ್‌ಹಾಸನ್ ಶ್ರಮ ಎದ್ದು ಕಾಣುತ್ತದೆ. ಪ್ರತಿ ದೃಶ್ಯದಲ್ಲೂ ಅವರ ದೈಹಿಕ ಕಸರತ್ತು ಅಡಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಆರಂಭದಲ್ಲೇ ಬರುವ ಭರತನಾಟ್ಯ ಎಪಿಸೋಡ್‌ನಲ್ಲಿ ಕಮಲ್‌ಗೆ ಅವರೇ ಸಾಟಿ ಎನ್ನುವಂತಿದೆ.
ವಿವಾದಯಾಕೆ?: ಈ ಚಿತ್ರದಲ್ಲಿ ಎಲ್ಲ ಮುಸ್ಲಿಮರನ್ನೂ ಭಯೋತ್ಪಾದಕರೆಂದು ಚಿತ್ರಿಸಿಲ್ಲ. ಅಥವಾ ಕಮಲ್‌ಹಾಸನ್‌ರಂಥ ಒಬ್ಬ ಶ್ರೇಷ್ಠ ಕಲಾವಿದನಿಗೆ ಒಂದು ಕೋಮಿನವರನ್ನು ಅವಹೇಳನಕಾರಿಯಾಗಿ ಬಳಸುವ ಅಗತ್ಯವಿಲ್ಲ. ಆದರೂ ಚಿತ್ರಕ್ಕೆ ಧರ್ಮದ ಬಣ್ಣ ಕಟ್ಟಲಾಯಿತು! 'ಈತ ಬಿನ್ ಲಾಡೆನ್ ಈತನೇ ಭಯೋತ್ಪಾದಕರ ಮುಖ್ಯಸ್ಥ, ಈತ ಸದ್ದಾಂ ಹುಸೇನ್ ಅಮೆರಿಕ ವಿರೋಧಿ' ಎನ್ನುವಂತೆ ಹೇಳಿಲ್ಲ. ಬಿನ್ ಲಾಡೆನ್‌ನನ್ನು ಹೋಲುವ ಪಾತ್ರಧಾರಿ ಕಂಡಾಗಲೂ ಆತನ ಹೆಸರನ್ನು ಉಲ್ಲೇಖ ಮಾಡಿಲ್ಲ.

ಅಮೆರಿಕ ಹಿತಾಸಕ್ತಿಗೆ 'ಭಾರತೀಯ'ನ ಹೆಗಲು
ವಿಶ್ವರೂಪಂ ಸಿನಿಮಾ ಕೋಮು ಸೌಹಾರ್ದಕ್ಕೆ ಧಕ್ಕೆ ಎನ್ನುವ ಹುಸಿ ಆರೋಪಗಳು ಚಿತ್ರದ ನಿಜವಾದ ಮುಖವನ್ನು ದಿಕ್ಕು ತಪ್ಪಿಸಿದೆ. ಅಮೆರಿಕನ್ ಕಟ್ಟಡಗಳ ಮೇಲಿನ ದಾಳಿ, ಪ್ರತಿಯಾಗಿ ಅಘ್ಫಾನಿಸ್ತಾನದ ಮೇಲಿನ ಅಮೆರಿಕ ದಾಳಿ, ಬಿನ್ ಲಾಡೆನ್, ಸದ್ಧಾ ಹುಸೇನ್‌ರ ಸಾವಿನ ಹಿನ್ನೆಲೆಯಲ್ಲಿ ಚಿತ್ರವನ್ನು ನೋಡಿದಾಗ 'ವಿಶ್ವರೂಪಂ' ಅಮೆರಿಕದ ಮುಖವಾಣಿಯಂತೆ ಕಾಣುತ್ತದೆ.

-ಆರ್. ಕೇಶವಮೂರ್ತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments