ಭತ್ಯೆ ನೀಡದೇ ಬಿಟ್ಟಿ ಕೆಲಸ!
ಬೆಂಗಳೂರು: ಕ್ರೀಡಾಕೂಟ ನಡೆಯದಿದ್ದರೂ ವಿದ್ಯಾರ್ಥಿಗಳ ಹೆಸರಲ್ಲಿ ಲೆಕ್ಕ ಬರೆದುಕೊಂಡು ಹಣ ಗುಳುಂ ಮಾಡಲು ಇಲಾಖೆ ಬಳಿ ಕೋಟ್ಯಂತರ ರೂಪಾಯಿ ಹಣವಿದೆ. ಆದರೆ, ಆದರೆ ಕಷ್ಟಪಟ್ಟು ಪ್ರಶ್ನೆ ಪತ್ರಿಕೆ ಹಾಗೂ ಪಠ್ಯಕ್ರಮ ರೂಪಿಸುವ ಉಪನ್ಯಾಸಕರಿಗೆ ಭತ್ಯೆ ನೀಡಲು ಮಾತ್ರ ಖಜಾನೆಯಲ್ಲಿ ಹಣವಿಲ್ಲ!
ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಹತ್ತಾರು ವರ್ಷಗಳಿಂದ ಬಿಡಾರ ಹೂಡಿರುವ ಅಧಿಕಾರಿಗಳಿಗೆ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ.
2011-12ನೇ ಸಾಲಿನಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಹಾಗೂ ಪ್ರಥಮ ಪಿಯುಸಿಯ ನೂತನ ಪಠ್ಯಕ್ರಮ ರಚನೆ ಸಂದರ್ಭದಲ್ಲಿ 2 ಸಾವಿರಕ್ಕೂ ಅಧಿಕ ಉಪನ್ಯಾಸಕರ ಸೇವೆ ಪಡೆಯಲಾಗಿದೆ.
ಇದು ಕಳೆದ 2011ರ ಡಿಸೆಂಬರ್‌ನಲ್ಲಿ ನಡೆದ ಪ್ರಕ್ರಿಯೆ. ಆದರೆ ಈ ಉಪನ್ಯಾಸಕರಿಗೆ ನಯಾ ಪೈಸೆ ಭತ್ಯೆ ಪಾವತಿ ಮಾಡುವ ಕಾಳಜಿಯನ್ನು ಯಾವೊಬ್ಬ ಅಧಿಕಾರಿಯೂ ತೋರಿಸಿಲ್ಲ. ಬದಲಾಗಿ ಪ್ರಸ್ತುತ ವರ್ಷದ ಪ್ರಶ್ನೆ ಪತ್ರಿಕೆಯನ್ನು ರೂಪಿಸಲು ಬರದಿದ್ದರೆ ಕಳೆದ ವರ್ಷದ ಭತ್ಯೆಯನ್ನೂ ನೀಡುವುದಿಲ್ಲ ಎಂಬ ಒಕ್ಕಣಿಕೆಯ ಎಚ್ಚರಿಕೆ ಪತ್ರವನ್ನು ಇಲಾಖೆ ಕಳುಹಿಸಿದೆ.
ವರ್ಷವಾದರೂ ಭತ್ಯೆ ನೀಡಲಿಲ್ಲ: ಪ್ರಥಮ ಹಾಗೂ ದ್ವಿತೀಯ ಪಿಯುಸಿಯ 32 ವಿಷಯದ ಪ್ರಶ್ನೆ ಪತ್ರಿಕೆ ರೂಪಿಸುವ ಸಲುವಾಗಿ ಕಳೆದ ಡಿಸೆಂಬರ್‌ನಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಸಾವಿರಕ್ಕೂ ಅಧಿಕ ಉಪನ್ಯಾಸಕರು ಬೆಂಗಳೂರಿಗೆ ಬಂದಿದ್ದರು. ಪ್ರಥಮ ಪಿಯುಸಿ ಪರೀಕ್ಷೆಗಳು ಜಿಲ್ಲಾಮಟ್ಟದಲ್ಲಿ ನಡೆಯುತ್ತವೆ. ಈ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಯಿಂದ ವಿಷಯವಾರು ಇಬ್ಬರು ಉಪನ್ಯಾಸಕರು ಬೆಂಗಳೂರಿನ ಇಲಾಖೆಯ ಕೇಂದ್ರ ಕಚೇರಿಗೆ ಬರುತ್ತಾರೆ. ಅಂದರೆ ಪ್ರತಿ ವಿಷಯಕ್ಕೆ ಸುಮಾರು 68 ಉಪನ್ಯಾಸಕರು 34 ಶೈಕ್ಷಣಿಕ ಜಿಲ್ಲೆಗಳಿಂದ ಬಂದಿರುತ್ತಾರೆ. ಇದರ ಜತೆ ದ್ವಿತೀಯ ಪಿಯುಸಿಗಾಗಿ ವಿಷಯವಾರು 3 ಉಪನ್ಯಾಸಕರು ಪ್ರಶ್ನೆ ಪತ್ರಿಕೆ ರೂಪಿಸುತ್ತಾರೆ. ಪಠ್ಯಕ್ರಮ ಬದಲಾವಣೆಗೂ 200ಕ್ಕೂ ಅಧಿಕ ಉಪನ್ಯಾಸಕರನ್ನು ಬಳಸಿಕೊಳ್ಳಲಾಗಿದೆ. ಇವೆಲ್ಲವನ್ನೂ ಸೇರಿಸಿದಾಗ ಸುಮಾರು 2 ಸಾವಿರಕ್ಕೂ ಅಧಿಕ ಉಪನ್ಯಾಸಕರನ್ನು ಇಲಾಖೆ ಬಳಸಿಕೊಂಡಂತಾಗಿದೆ. ಆದರೆ ಇಲಾಖೆ ಯಾರಿಗೂ ಭತ್ಯೆ ನೀಡದೆ ಸತಾಯಿಸುತ್ತಿದೆ. ಆದರೆ ಈಗ ಹೊಸದಾಗಿ ಉಪನ್ಯಾಸಕರಿಗೆ ಮತ್ತೊಂದು ಪತ್ರವನ್ನು ಬರಯಲಾಗಿದೆ. ಪತ್ರದ ಸಾರಾಂಶ ಹೀಗಿದೆ. 'ಸೋಮವಾರದಿಂದ ಪ್ರಶ್ನೆ ಪತ್ರಿಕೆ ರೂಪಿಸಲು ತಾವು ಬೆಂಗಳೂರಿಗೆ ಬರಬೇಕು. ಈ ಸಂದರ್ಭದಲ್ಲಿಯೇ ಕಳೆದ ವರ್ಷದ ಭತ್ಯೆ ನೀಡಲಾಗುವುದು'. ಒಂದೊಮ್ಮೆ ಬರದಿದ್ದರೆ ಭತ್ಯೆ ನೀಡುವುದಿಲ್ಲ. ಇದು ಒಂದು ರೀತಿಯಲ್ಲಿ ಬೆದರಿಕೆಯಂತಿದೆ. ಪ್ರಶ್ನೆ ಪತ್ರಿಕೆ ರೂಪಿಸಲು ಉಪನ್ಯಾಸಕರು ಬೆಂಗಳೂರಿಗೆ ಒಮ್ಮೆ ಬಂದು ಹೋಗಿದ್ದಾರೆ. ಆದರೆ ಪಠ್ಯಕ್ರಮ ಬದಲಾವಣೆಗೆ ನಿಯುಕ್ತರಾದ ಉಪನ್ಯಾಸಕರು 10ಕ್ಕೂ ಅಧಿಕ ಬಾರಿ ಬಂದಿದ್ದಾರೆ. ಪ್ರತಿಯೊಬ್ಬರೂ ತಮ್ಮ ಸ್ವಂತ ಖರ್ಚಿನಲ್ಲೇ ಇವೆಲ್ಲ ಕೆಲಸವನ್ನು ಇಲಾಖೆಗೆ ಮಾಡಿಕೊಟ್ಟಿದ್ದಾರೆ.
ಕೊಡುವ ಭತ್ಯೆಯೂ ಸಮರ್ಪಕವಾಗಿಲ್ಲ: ಪದವಿ ಪೂರ್ವ ಶಿಕ್ಷಣ ಇಲಾಖೆಯೂ ಉಪನ್ಯಾಸಕರಿಗೆ ನೀಡುತ್ತಿರುವ ಭತ್ಯೆಯೂ ಸಮರ್ಪಕವಾಗಿಲ್ಲ. ಸರ್ಕಾರ ಕೊಡುತ್ತಿರುವ ದಿನ ಭತ್ಯೆ 267, ಆದರೆ ಪ್ರಯಾಣ ಭತ್ಯೆಯೂ ಕೇವಲ 1.10 (ಪ್ರತಿ.ಕಿ.ಮೀ.) ಆಗಿದೆ. ಉಡುಪಿಯ ಉಪನ್ಯಾಸಕರೊಬ್ಬರು ಹೇಳಿದ ಹಾಗೇ, 'ಬೆಂಗಳೂರಿಗೆ ಬಂದು ಹೋಗಲು 1450 ಖರ್ಚಾದರೆ, ಇಲಾಖೆಯಿಂದ ಕೇವಲ 890 ಸಿಗುತ್ತಿದೆ. ನಮ್ಮ ಸ್ವಂತ ಖರ್ಚಿನಲ್ಲಿಯೇ ಬಂದು ಹೋಗಿ, ಅವರು ಕೊಡುವ ಅತ್ಯಲ್ಪ ಹಣಕ್ಕಾಗಿ ವರ್ಷಗಟ್ಟಲೇ ಕಾಯಬೇಕಾಗಿದೆ'.
ಚುನಾವಣೆ ಚಕ್ರವರ್ತಿ
ಕಳೆದ ಸಪ್ಟೆಂಬರ್‌ನಲ್ಲಿ ಹಿರಿಯ ಐಎಎಸ್ ಅಧಿಕಾರಿ ಚಕ್ರವರ್ತಿ ಮೋಹನ್ ಅವರು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ನೇಮಕಗೊಂಡರು. ಅದಾದ ಕೆಲವೇ ದಿನಗಳಲ್ಲಿ ಸರ್ಕಾರಿ ಕಾರ್ಯನಿಮಿತ್ತ ವಿದೇಶ ಪ್ರವಾಸ ಕೈಗೊಂಡರು. ಅಲ್ಲಿಂದ ಬಂದ ಎರಡೇ ವಾರದ ಬಳಿಕ ಗುಜರಾತ್ ಹಾಗೂ ಹಿಮಾಚಲ ಪ್ರದೇಶಕ್ಕೆ ಚುನಾವಣೆ ವೀಕ್ಷಕರಾಗಿ ತೆರಳಿದರು. ಈಗ ಮತ್ತೆ ನಾಗಾಲ್ಯಾಂಡ್ ಚುನಾವಣೆಗೆ ವೀಕ್ಷಕರಾಗಿ ತೆರಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಫೆ.23ರಿಂದ ಚುನಾವಣೆ ಪ್ರಕ್ರಿಯೆ ನಡೆಯುತ್ತವೆ. ಮುಂದಿನ ಶೈಕ್ಷಣಿಕ ವರ್ಷದ ಮಹತ್ವದ ನಿರ್ಣಯಗಳು ಈ ಅವಧಿಯಲ್ಲೇ ಆಗುತ್ತವೆ. ಇಲಾಖೆಯ ನೊಗ ಹೊತ್ತಿರುವ ನಿರ್ದೇಶಕರೇ ಪದೇಪದೆ ಹೀಗೆ ಮಾಯವಾದರೆ ಹೇಗೆ ? ರಾಜ್ಯ ಸರ್ಕಾರ ಈ ಬಗ್ಗೆ ಗಮನ ನೀಡಬೇಕಿದೆ. ಸದಾ ಚಟುವಟಿಕೆಯಲ್ಲೇ ಇರಬೇಕಾದ ಇಲಾಖೆಯ ನಿರ್ದೇಶಕರನ್ನು ಇತರೇ ಕೆಲಸಗಳಿಗೆ ಉಪಯೋಗಿಸಿಕೊಳ್ಳುವುದು ಎಷ್ಟು ಸಮಂಜಸ.
ಇವರಿಗೇಕೆ ವಿಶೇಷ ಬಡ್ತಿ
ಕಳೆದ 2011ರ ಸಂದರ್ಭದಲ್ಲಿ ಕೌನ್ಸೆಲಿಂಗ್ ಮೂಲಕ ರಾಜ್ಯಾದ್ಯಂತ ಕೆಲ ಪ್ರಾಂಶುಪಾಲ ಹುದ್ದೆಗಳಿಗೆ ಬಡ್ತಿ ನೀಡಲಾಗಿತ್ತು. ಆಗ 13 ಉಪನ್ಯಾಸಕರ ಬಡ್ತಿಯನ್ನು ತಡೆಹಿಡಿಯಲಾಗಿತ್ತು. ಇವರ ವಾರ್ಷಿಕ ಮೌಲ್ಯಮಾಪನ ವರದಿಯ ಬಗ್ಗೆ ಆಕ್ಷೇಪವಿರುವುದು ಇದಕ್ಕೆ ಪ್ರಮುಖ ಕಾರಣವಾಗಿತ್ತು. ಆದರೆ ಈಗ ಮತ್ಯಾವುದೇ ಕೌನ್ಸೆಲಿಂಗ್ ನಡೆಸದೇ 13 ಉಪನ್ಯಾಸಕರಿಗೆ ವಿಶೇಷ ಬಡ್ತಿ ನೀಡಲು ತೆರೆಮರೆಯ ಸಿದ್ಧತೆ ನಡೆಸಿದೆ. ಸೋಮವಾರ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆಯಿದೆ. ಬಡ್ತಿ ಅಥವಾ ನೇಮಕಾತಿ ಪದ್ಧತಿಯಲ್ಲಿ ಎಲ್ಲರಿಗೂ ಒಂದೇ ನಿಯಮವಿರುತ್ತದೆ. ಇಲಾಖೆ ಇದನ್ನು ಮನಗಾಣಲಿ.
-ರಾಜೀವ ಹೆಗಡೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.