ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ನಗರ

ಇಲಾಖೆಗೆ 'ಹೆಚ್ಚು' ಶುಲ್ಕದ 'ವರಿ' ಇಲ್ಲ

Parashurama
Updated On : 27 Jan 2013, 11:39 am

ಬೆಂಗಳೂರು: ಹೆಚ್ಚುವರಿ ಶುಲ್ಕ ಪಡೆದ ಕಾಲೇಜುಗಳು 15 ದಿನದಲ್ಲಿ ಉತ್ತರ ನೀಡದಿದ್ದರೆ ಮಾನ್ಯತೆ ರದ್ದತಿಗೆ ಶಿಫಾರಸು ಮಾಡುತ್ತೇವೆ. ಸುಪ್ರೀಂ ಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುತ್ತೇವೆ...!
ರಾಜ್ಯ ಸರ್ಕಾರ ಕಳೆದ 2012ರ ಅಕ್ಟೋಬರ್ 20ರಂದು ಇಂತಹ ಹೇಳಿಕೆ ನೀಡಿತ್ತು. ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಅವರೇ ಪತ್ರಿಕಾಗೋಷ್ಠಿ ನಡೆಸಿ ಖಾಸಗಿ ಕಾಲೇಜುಗಳಿಗೆ ಬಹಿರಂಗ ಎಚ್ಚರಿಕೆ ನೀಡಿದ್ದರು.
ಆದರೆ, ಸರ್ಕಾರ ಖಡಕ್ ಎಚ್ಚರಿಕೆ ಕೊಟ್ಟು ಮೂರು ತಿಂಗಳಾಯಿತು, ಇಂದಿನವರೆಗೆ ಯಾವೊಂದು ಕಾಲೇಜು ಸಹ ಸರ್ಕಾರದ ನೋಟಿಸ್‌ಗೆ ಉತ್ತರ ನೀಡಿಲ್ಲ. ಇನ್ನು ಉನ್ನತ ಶಿಕ್ಷಣ ಇಲಾಖೆ ಅತ್ತ ಗಮನವನ್ನೇ ಹರಿಸಿಲ್ಲ.
2012- 13ನೇ ಸಾಲಿನ ವೃತ್ತಿಪರ ಕೋರ್ಸ್‌ಗಳ ಪ್ರವೇಶದ ಸಂದರ್ಭದಲ್ಲಿ 10ಕ್ಕೂ ಅಧಿಕ ಕಾಲೇಜುಗಳು ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ಪಡೆದಿದ್ದವು. ಈ ಸಂಬಂಧ 'ಕನ್ನಡಪ್ರಭ' ಸರಣಿ ಲೇಖನಗಳನ್ನು ಪ್ರಕಟಿಸಿತ್ತು. ಇದಾದ ಬಳಿಕ ರಚಿತವಾದ ವೃತ್ತಿಪರ ಮಹಾವಿದ್ಯಾಲಯಗಳ ಪ್ರವೇಶ ಮೇಲ್ವಿಚಾರಣೆ ಸಮಿತಿ ಕೂಡ ಸರ್ಕಾರಕ್ಕೆ ದಾಖಲೆ ಸಮೇತ ವರದಿ ನೀಡಿತ್ತು.
ಇವೆಲ್ಲ ಅಂಶಗಳನ್ನು ಪರಿಗಣಿಸಿ ಕಳೆದ ಅ.20ರಂದು ಉನ್ನತ ಶಿಕ್ಷಣ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳ ಸಭೆ ನಡೆಸಿ ಖಾಸಗಿ ಕಾಲೇಜುಗಳಿಗೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ್ದರು.
ಸಭೆಯ ನಿರ್ಣಯ ಹೀಗಿತ್ತು?: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಹೆಚ್ಚುವರಿ ಶುಲ್ಕ ಪಡೆದ ಕಾಲೇಜುಗಳು ವಿದ್ಯಾರ್ಥಿಗಳಿಗೆ ಒಂದು ವಾರದೊಳಗೆ ಹೆಚ್ಚುವರಿ ಶುಲ್ಕ ಮರುಪಾವತಿ ಮಾಡಿ, 15ದಿನದೊಳಗೆ ಪ್ರಕರಣವಾರು ಉತ್ತರ ನೀಡುವಂತೆ ತಿಳಿಸಲಾಗಿತ್ತು. ಈ ಸಂಬಂಧ ರಾಜ್ಯ ಸರ್ಕಾರ ಎಲ್ಲ ಕಾಲೇಜುಗಳಿಗೆ ನೋಟಿಸ್ ಜಾರಿ ಮಾಡಿತ್ತು.
ಆದರೆ ಹೆಚ್ಚುವರಿ ಶುಲ್ಕ ನೀಡಿದ ವಿದ್ಯಾರ್ಥಿಗಳು 'ಕನ್ನಡಪ್ರಭ'ಕ್ಕೆ ತಿಳಿಸಿದಂತೆ ಕಾಲೇಜು ಆಡಳಿತ ಮಂಡಳಿಗಳು ಯಾವುದೇ ಶುಲ್ಕವನ್ನು ಮರುಪಾವತಿ ಮಾಡಿಲ್ಲ. ಇಲಾಖೆಯ ಹಿರಿಯ ಅಧಿಕಾರಿಗಳೇ ಸ್ಪಷ್ಟಪಡಿಸಿರುವಂತೆ ಯಾವುದೇ ಕಾಲೇಜು ಪ್ರಕರಣವಾರು ಉತ್ತರ ನೀಡಿಲ್ಲ. ಉನ್ನತ ಶಿಕ್ಷಣ ಇಲಾಖೆಯ ನೋಟಿಸ್‌ನ್ನು ಕಾಲ ಕೆಳಗಿನ ಕಸ ಮಾಡಿಕೊಂಡು ಆಡಳಿತ ಮಂಡಳಿಗಳು ಆರಾಮಾಗಿವೆ. ಇತ್ತ ಕಡೆ ಸರ್ಕಾರವೂ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ನೆಪ ಮಾತ್ರದ ಮೇಲ್ವಿಚಾರಣೆ ಸಮಿತಿ: ಪ್ರೊ.ವೆಂಕಟರಾಮಯ್ಯ ಅವರ ಮೇಲ್ವಿಚಾರಣೆ ಸಮಿತಿಯು ಪ್ರವೇಶ ಪ್ರಕ್ರಿಯೆ ಸಂಬಂಧ ಪ್ರಮುಖವಾದ 2 ವರದಿಗಳನ್ನು ನೀಡಿದೆ. ಪ್ರಥಮ ವರದಿಯು ಎಂಜಿನಿಯರಿಂಗ್ ಕಾಲೇಜುಗಳ ಹೆಚ್ಚುವರಿ ಶುಲ್ಕದ ಸಂಬಂಧವಿದೆ. ಇದರಲ್ಲಿ ಸುಮಾರು 10 ಕಾಲೇಜುಗಳ ಅಕ್ರಮಗಳನ್ನು ದಾಖಲೆ ಸಮೇತ ನೀಡಲಾಗಿದೆ. ಮತ್ತೊಂದೆಡೆ ಅಲ್ಪಸಂಖ್ಯಾತ ಕಾಲೇಜುಗಳ ಪ್ರವೇಶ ಅವ್ಯವಹಾರದ ಬಗೆಗೂ ವರದಿ ನೀಡಲಾಗಿದೆ.
ಪ್ರವೇಶ ಅವ್ಯವಹಾರದ ಬಗ್ಗೆ ಕೂಗು ಕೇಳಿಬಂದಾಗ ಸಮಿತಿ ರಚಿಸಲಾಗಿತ್ತು. ಆದರೆ ಸರ್ಕಾರದ ಪ್ರಸ್ತುತ ಕಾರ್ಯವೈಖರಿ ಗಮನಿಸಿದರೆ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಮಂಕುಬೂದಿ ಎರಚಲು ಇಂತಹ ಕ್ರಮಕ್ಕೆ ಮುಂದಾಗಿದ್ದು ಸ್ಪಷ್ಟವಾಗುತ್ತದೆ.
ಪತ್ರಿಕೆಗಳಲ್ಲಿ ಬಂದ ವರದಿ ಆಧರಿಸಿ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪ್ರವೇಶ ಪ್ರಕ್ರಿಯೆ ಸಂದರ್ಭದಲ್ಲಿ ಹೇಳಿದ್ದರು. ಆದರೆ ಸರ್ಕಾರವೇ ನೇಮಿಸಿದ ಸಮಿತಿ ಈಗ ದಾಖಲೆ ಸಮೇತ ವರದಿ ನೀಡಿದ್ದರೂ ಮೀನಮೇಷ ಎಣಿಸಲಾಗುತ್ತಿದೆ.

ಗೆಟ್ ಯೂ ಬ್ಯಾಕ್!
ಹೆಚ್ಚುವರಿ ಶುಲ್ಕಕ್ಕೆ ಸಂಬಂಧಿಸಿ ಎಂಜಿನಿಯರಿಂಗ್ ಕಾಲೇಜುಗಳಿಗೆ ಜಾರಿ ಮಾಡಿದ ನೋಟಿಸ್ ಹಾಗೂ ಕಾಲೇಜುಗಳ ಉತ್ತರದ ಬಗ್ಗೆ ಕಳೆದ 15 ದಿನದಿಂದ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯಲ್ ಅವರನ್ನು ಸಂಪರ್ಕಿಸಲಾಗುತ್ತಿದೆ. ಆದರೆ ಪತ್ರಿಕೆಗೆ ಸಿಗುತ್ತಿರುವ ಉತ್ತರ ಮಾತ್ರ ಒಂದೇ ಆಗಿದೆ, 'ಗೆಟ್ ಯೂ ಬ್ಯಾಕ್‌'. ಏಕೆಂದರೆ ಹೇಳಲು ಯಾವುದೇ ಉತ್ತರ ಅವರ ಬಳಿಯೂ ಇಲ್ಲ.

ಸಚಿವರೇ ನಿಮ್ಮ ಉತ್ತರವೇನು?
ಈ ಸಂಬಂಧ ಕಳೆದ 4 ತಿಂಗಳಿಂದ ಸಚಿವರನ್ನು ಪ್ರಶ್ನಿಸಿದರೆ ಸಿಕ್ಕ ಉತ್ತರ ಏನೆಂದರೆ, 'ಖಾಸಗಿ ಕಾಲೇಜುಗಳ ವಿರುದ್ಧ ಮೃಧು ಧೋರಣೆ ತಾಳಲು ಸಾಧ್ಯವಿಲ್ಲ. ವರದಿ ಬಂದ ಬಳಿಕ ಕ್ರಮ ತೆಗೆದುಕೊಳ್ಳುವುದು ಶತಃಸಿದ್ಧ. ವಿದ್ಯಾರ್ಥಿಗಳು ದೂರು ನೀಡಲಿ' ಎಂದಿದ್ದರು. ಆದರೆ ಯಾವುದೇ ಒಂದು ವಿದ್ಯಾರ್ಥಿಗೂ ಸರ್ಕಾರದಿಂದ ನ್ಯಾಯ ದೊರಕಲಿಲ್ಲ. ದೂರು ನೀಡಿದ ವಿದ್ಯಾರ್ಥಿಗಳು ಕಾಲೇಜುಗಳಿಂದ ಶೋಷಣೆಗೆ ಒಳಗಾಗುತ್ತಿದ್ದಾರಷ್ಟೆ.

-ರಾಜೀವ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments