ಫಿಲ್ಟರ್ ಮರಳು; ಜೀವಕ್ಕೆ ಉರುಳು
ಹೆಬ್ಬಗೋಡಿ: ಇತ್ತೀಚೆಗೆ ನಗರದಲ್ಲಿ ಖಾಲಿ ಜಾಗ ಗುರುತಿಸುವುದೇ ಕಷ್ಟ. ಎಲ್ಲಿ ನೋಡಿದರೂ ಕಟ್ಟಡಗಳೇ ತುಂಬಿವೆ. ಇದೇ ಕಾರಣಕ್ಕೆ ಬೆಂಗಳೂರನ್ನು ಕಾಂಕ್ರಿಟ್ ಕಾಡು ಎಂದು ಜರಿಯುವುದುಂಟು.
ತ್ವರಿತಗತಿಯಲ್ಲಿ ಅಭಿವೃದ್ಧಿಯಾಗುತ್ತಿರುವ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಗಳಿಗೆ ಸರಬರಾಜು ಮಾಡುವ ಮರಳು ಎಲ್ಲಿಯದು ಎಂಬುದರ ಅರಿವಾದರೆ ಅಚ್ಚರಿ ಖಚಿತ. ಈಗೆಲ್ಲ ಬೆಂಗಳೂರಿಗೆ ಬರುವುದು ಬಹಪಾಲು ಫಿಲ್ಟರ್ ಮರಳು. ನಗರಕ್ಕೆ ಅಂಟಿರುವ ಬಹುದೊಡ್ಡ ಭೂತ ಫಿಲ್ಟರ್ ಮರಳು ದಂಧೆ. ಖದೀಮರ ಈ ದಂಧೆಗೆ ಬೆಂಗಳೂರಿನ ಹೊರವಲಯಗಳೇ ಅಡ್ಡೆಗಳು.
ಬೆಂಗಳೂರು ನಗರ ಜಿಲ್ಲೆಗೆ ಸೇರಿದ್ದರೂ ಬಹುಪಾಲು ಗ್ರಾಮಗಳೇ ಇರುವ ಆನೇಕಲ್ ತಾಲೂಕಿನ ಸುತ್ತಮುತ್ತಲ ಪ್ರದೇಶಗಳಾದ ಇಂಡ್ಲುವಾಡಿ, ತಮ್ಮನಾಯಕನಹಳ್ಳಿ, ಚಿಕ್ಕಹೊಸಳ್ಳಿ, ಮರಳುವಾಡಿ, ಬಗ್ಗನದೊಡ್ಡಿ, ಸರ್ಜಾಪುರ ಹಾಗೂ ಬನ್ನೇರುಘಟ್ಟ ಅರಣ್ಯ ಪ್ರದೇಶ ವ್ಯಾಪ್ತಿಗಳಲ್ಲಿ ಈ ಕಳ್ಳ ಕೆಲಸ ದಿನೇ, ದಿನೇ ಹೆಚ್ಚುವುದರೊಂದಿಗೆ ತನ್ನ ಕಬಂಧ ಬಾಹುಗಳನ್ನು ವಿಸ್ತಾರವಾಗಿ ಚಾಚುತ್ತಲೇ ಇದೆ.
ಇದಲ್ಲದೆ ಪಕ್ಕದ ತಮಿಳುನಾಡಿನಿಂದಲೂ ಫಿಲ್ಟರ್ ಮರಳು ಅಕ್ರಮ ಮಾರ್ಗದಲ್ಲಿ ಬರುತ್ತಿದೆ. ರಾಜ್ಯದ ಗಡಿ ಭಾಗವು ಕೂಡ ಆಗಿರುವ ಆನೇಕಲ್ ತಮಿಳುನಾಡಿನ ಗಡಿಗೆ ಹೊಂದಿಕೊಂಡಿದ್ದು, ಅಡ್ಡ ದಾರಿಗಳ ಮೂಲಕ ಫಿಲ್ಟರ್ ಮರಳು ಹೊತ್ತು ಬರುವ ವಾಹನಗಳು ತಾವು ತಂದ ಮರಳನ್ನು ನಿರ್ಭಯವಾಗಿ ಮಾರಾಟ ಮಾಡಿ ಮರಳುತ್ತವೆ.
ಕೆರೆಯಲ್ಲಿ ಶೇಖರಣೆಯಾಗಿರುವ ಮಣ್ಣನ್ನೇ ಬಗೆದು ತಂದು ನೀರಿನಲ್ಲಿ ತೊಳೆದು ಕೃತಕ ಮರಳು ಸೃಷ್ಟಿ ಮಾಡಿ ಮಾರುವುದೇ ಈ ದಂಧೆ. ಪಾಳುಬಿದ್ದ ಭೂಮಿಯಲ್ಲಿ ಮೋಟಾರು, ಕೊಳವೆ ಬಾವಿಗಳ ವ್ಯವಸ್ಥೆಯನ್ನು ಮಾಡಿಕೊಳ್ಳುವ ದಂಧೆಕೋರರು, ಭೂಮಿಗೆ ನೇರಾವಾಗಿ ಅತಿ ರಭಸದಿಂದ ನೀರನ್ನು ಬಿಡುತ್ತಾರೆ.
ಆ ವೇಳೆಯಲ್ಲಿ ಭೂಮಿಯಲ್ಲಿನ ಕಲ್ಲಿನಂತಹ ಅಂಶವುಳ್ಳ ಮಣ್ಣು ಮತ್ತು ನುಣುಪಾದ ಮಣ್ಣು ಬೇರೆಯಾಗುತ್ತದೆ. ಆಗ ಕಲ್ಲಿನಂತಹ ಅಂಶವುಳ್ಳ ಮಣ್ಣನ್ನು ತೆಗೆದು ಕೊಳಚೆ ನೀರಿನಲ್ಲಿ ತೊಳೆಯಲಾಗುತ್ತದೆ. ನಂತರ ಅದನ್ನು ಟ್ರಾಕ್ಟರ್ ಹಾಗೂ ಲಾರಿಗಳಿಗೆ ಹೇರಿ ಸಾಗಿಸಲಾಗುತ್ತದೆ.
ಹೀಗೆ ತಯಾರಿಸಿದ ಫಿಲ್ಟರ್ ಮರಳಿಗೆ ಪ್ರಸಕ್ತ ಮಾರುಕಟ್ಟೆಯಲ್ಲಿ ರು. 30-35 ಸಾವಿರ (ಒಂದು ಲಾರಿ ಲೋಡಿಗೆ) ಮೌಲ್ಯ ಖಚಿತ. ಬಹುಪಾಲು ಸರ್ಕಾರಿ ಗೋಮಾಳಗಳು ಹಾಗೂ ಕೃಷಿ ಭೂಮಿಗಳು ಫಿಲ್ಟರ್ ಮರಳಿನ ಮೂಲಗಳಾಗಿವೆ.
ಇಂತಹ ಕಳ್ಳ ಮರಳನ್ನು ಮಾರಾಟ ಮಾಡಲು ಚಂದಾಪುರ, ಬೊಮ್ಮಸಂದ್ರ, ಹುಸ್ಕೂರು ಗೇಟ್, ಸಿಲ್ಕ್ ಬೋರ್ಡ್ ಜಂಕ್ಷನ್ ಆಶ್ರಯ ತಾಣಗಳಾಗಿವೆ. ಎಲ್ಲೆಂದರಲ್ಲಿ ಕಡಲೆಕಾಯಿ ವ್ಯಾಪಾರದಂತೆ ಈ ದಂಧೆ ಬೆಳೆಯುತ್ತಲೇ ಇದೆ.
ಫಿಲ್ಟರ್ ಮರಳು ತಯಾರಿಗೆ ಸಂಪೂರ್ಣವಾಗಿ ಅವೈಜ್ಞಾನಿಕವಾಗಿರುವುದರಿಂದ ಆ ಮರಳು ಬಳಸಿ ಕಟ್ಟುವ ಕಟ್ಟಡದ ಆಯಸ್ಸಿನ ಮೇಲೆ ನೇರ ಪ್ರಭಾವ ಬೀರುತ್ತದೆ. ಹಾಗೂ ಕಟ್ಟಡಗಳ ಗೋಡೆಗಳು ಬೇಗ ಬಿರುಕು ಬಿಡುತ್ತವೆ. ಅಕ್ರಮ ಮರಳು ಗಣಿಗಾರಿಕೆ ಮೇಲೆ ಮತ್ತು ಇಂತಹ ಅಮೂಲ್ಯ ವಸ್ತುವಿನ ರಕ್ಷಣೆಗಾಗಿ ಕಠಿಣ ಕಾನೂನನ್ನು ಸರ್ಕಾರ ಜಾರಿಗೊಳಿಸಿದ್ದರೂ ಅಧಿಕಾರಿಗಳ ವೈಫಲ್ಯದಿಂದ ಪ್ರಯೋಜನಕ್ಕೆ ಬಾರದಂತಾಗಿದೆ. ಮರಳಿಗಾಗಿ ಭೂಮಿಯನ್ನ ಬಗೆಯುತ್ತಾ ಸಾಗಿದರೆ ಮಣ್ಣಿನ ಸವೆತದ ಜೊತೆ, ಅಂತರ್ಜಲದ ಮೇಲೂ ದುಷ್ಪರಿಣಾಮ ಖಂಡಿತ.
ಸರ್ಕಾರದ ಕಣ್ಣುತಪ್ಪಿಸಿ ಜರುಗುತ್ತಿರುವ ಈ ದಂಧೆಗೆ ಅಧಿಕಾರಿಗಳು ಈಗಲಾದರೂ ಕಡಿವಾಣ ಹಾಕಬೇಕಿದೆ. ಒಮ್ಮೆ ದಾಳಿ ನಡೆದ ಜಾಗದಲ್ಲೇ ಪದೇ ಪದೇ ಈ ದಂಧೆ ಮುಂದುವರಿಯುತ್ತಿರುವುದು ಈ ವ್ಯವಸ್ಥೆಯ ಹಿಂದಿನ ಶಕ್ತಿಗಳ ಕೈವಾಡವನ್ನು ಬಯಲುಗೊಳಿಸುತ್ತದೆ.
ಈಗಿರುವ ಮರಳು ಅಡ್ಡೆಗಳನ್ನು ಮುಚ್ಚುವುದರೊಂದಿಗೆ, ಆ ಸ್ಥಳಗಳಲ್ಲಿ ಅಧಿಕಾರಿಗಳು ಸಂಪೂರ್ಣ ನಿಗಾ ಇಡಬೇಕು. ದಂಧೆಯಲ್ಲಿ ತೊಡಗಿರುವವರಿಗೆ ಮತ್ತವರಿಗೆ ಬೆನ್ನೆಲುಬಾಗಿ ನಿಂತವರನ್ನು ಮುಲಾಜಿಲ್ಲದೆ ಮಟ್ಟ ಹಾಕಬೇಕು. ಕೆರೆಗಳು ಹಾಗೂ ಇಂತಹ ಚಟುವಟಿಕೆಗಳು ನಡೆಯುತ್ತಿರುವ ಬನ್ನೇರುಘಟ್ಟ ಪ್ರದೇಶದ ಸುತ್ತಮುತ್ತ ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಬೇಕು.
ಫಿಲ್ಟರ್ ಮರಳಿನ ಅವಗುಣಗಳ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಸರ್ಕಾರ ಏರ್ಪಡಿಸುವುದರ ಜೊತೆಗೆ ಕಠಿಣ ಕಾನೂನನ್ನು ದಂಧೆಕೋರರ ವಿರುದ್ಧ ಜಾರಿಗೊಳಿಸುವುದು ಸೂಕ್ತ. ಇಲ್ಲದಿದ್ದರೆ ಫಿಲ್ಟರ್ ಮರಳಿನಾಂದಾಗುವ ಅನಾಹುತಗಳನ್ನು ತಡೆಯುವುದು ಅಸಾಧ್ಯ.
-ಮಾಲತೇಶ ಎಂ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.