ಅಕ್ಕಿ ಅಕ್ರಮ ದಾಸ್ತಾನುಗಳ ಮೇಲೆ ದಾಳಿ: ಜೀವರಾಜ್
ಬೆಂಗಳೂರು: ಅಗತ್ಯಕ್ಕಿಂತ ಹೆಚ್ಚು ಅಕ್ಕಿ-ಬತ್ತ ದಾಸ್ತಾನು ಹೊಂದಿರುವ ಗಿರಣಿ ಅಥವಾ ದಾಸ್ತಾನು ಮಳಿಗೆಗಳ ಮೇಲೆ ದಾಳಿ ನಡೆಸಿ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಹಾರ ಸಚಿವ ಡಿ.ಎನ್. ಜೀವರಾಜ್ ತಿಳಿಸಿದ್ದಾರೆ.
ವಿದೇಶದಲ್ಲಿ ಸೋನಾ ಮಸೂರಿ ಅಕ್ಕಿಗೆ ಹೆಚ್ಚು ಬೇಡಿಕೆ ಇರುವುದರಿಂದ, ಇಲ್ಲಿಂದ ಭಾರಿ ಪ್ರಮಾಣದಲ್ಲಿ ರಫ್ತಾಗುತ್ತಿದೆ. ಇದಕ್ಕಾಗಿ ಹೆಚ್ಚು ದಾಸ್ತಾನು ಮಾಡಲಾಗುತ್ತಿದೆ. ಇದು ಸಾಮಾನ್ಯ ಅಕ್ಕಿ ಬೆಲೆ ಹೆಚ್ಚಳಕ್ಕೂ ಕಾರಣವಾಗಿದೆ. ಆದ್ದರಿಂದ ಅಕ್ರಮ ದಾಸ್ತಾನು ಆಗದಂತೆ ತಡೆಯಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಹೇಳಿದರು. ಅಕ್ಕಿ ಹಾಗೂ ಬತ್ತದ ಅಕ್ರಮ ದಾಸ್ತಾನು ಹೊಂದಿರುವ ತಾಣಗಳ ಮೇಲೆ ದಾಳಿ ನಡೆಸಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಕೇಂದ್ರದ ಕಾನೂನಿನ ಪ್ರಕಾರ ಈ ದಾಳಿ ನಡೆಸಿ ಕ್ರಮ ತೆಗೆದುಕೊಳ್ಳಬಹುದು ಎಂದರು.
ಕಳೆದ ಮೂರ್ನಾಲ್ಕು ವಾರದಿಂದ ಅಕ್ಕಿ ಬೆಲೆ ಏರಿಕೆ ಆಗುತ್ತಲೇ ಇದೆ. ರಫ್ತು ತಡೆಯಲು ಅಥವಾ ಅಂತಾರಾಜ್ಯದಲ್ಲಿ ಅಕ್ಕಿ-ಬತ್ತ ಸಾಗಣೆ ನಿಲ್ಲಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ. ಆದರೂ ಈ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಚರ್ಚೆ ನಡೆಸಿ, ಕಾನೂನು ಇಲಾಖೆ ಸಹಕಾರ ಪಡೆದುಕೊಂಡು ಕ್ರಮ ಕೈಗೊಳ್ಳಲು ಆಲೋಚಿಸಲಾಗುತ್ತಿದೆ ಎಂದರು.
5000 ಸ್ಕೇಲ್ ಅಳವಡಿಕೆ: ರಾಜ್ಯದಲ್ಲಿರುವ 5000 ನ್ಯಾಯಬೆಲೆ ಅಂಗಡಿಗಳಲ್ಲಿ ಫೆಬ್ರವರಿ ಅಂತ್ಯಕ್ಕೆ ವಿದ್ಯುದ್ದೀಕರಣದ ಅತ್ಯಾಧುನಿಕ ಮಾಪನ ಯಂತ್ರ (ಸ್ಕೇಲ್)ಗಳನ್ನು ಅಳವಡಿಸಲಾಗುತ್ತದೆ. ಈಗಾಗಲೇ ತುಮಕೂರು ಜಿಲ್ಲೆಯಲ್ಲಿ 1100 ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ 499 ಪಡಿತರ ಅಂಗಡಿಗಳಲ್ಲಿ ಸ್ಕೇಲ್ ಅಳವಡಿಸಲಾಗಿದೆ. ಇದರಲ್ಲಿ ಸದ್ಯಕ್ಕೆ ಬೆಂಗಳೂರಿನಲ್ಲಿ 9 ಸೇರಿದಂತೆ 200 ಮಾತ್ರ ಕಾರ್ಯನಿರ್ವಹಿಸುತ್ತಿವೆ. ಇದರಿಂದ ಪಡಿತರ ಪಡೆದವರು ಹಾಗೂ ಪಡೆಯದವರ ಮಾಹಿತಿ ಆನ್ಲೈನ್ನಲ್ಲೇ ಲಭ್ಯವಾಗುತ್ತಿದೆ ಎಂದರು.
ಬೆಳಗಾವಿ, ಧಾರವಾಡ, ರಾಯಚೂರು ಹಾಗೂ ಮೈಸೂರು ಜಿಲ್ಲೆಯಲ್ಲಿ ಫೆಬ್ರವರಿ ಅಂತ್ಯಕ್ಕೆ ಈ ಯಂತ್ರಗಳನ್ನು ಅಳವಡಿಸುವ ಕಾರ್ಯ ಪೂರ್ಣಗೊಳ್ಳಲಿದೆ ಎಂದರು. ಸೋನಾಮಸೂರಿ ಅಕ್ಕಿ ರಫ್ತು ನಿರ್ಬಂಧಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುತ್ತದೆ ಎಂದು ಸಚಿವ ಜೀವರಾಜ್ ತಿಳಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.