ಪ್ರಭಾವಿ ಜಿಲ್ಲೆಗಳಿಗೆ ಮಾತ್ರ ಸೌಲಭ್ಯವೇ?
ಬೆಂಗಳೂರು: ರಾಜಕೀಯವಾಗಿ ಪ್ರಭಾವ ಹೊಂದಿರುವ ಜಿಲ್ಲೆಗಳಿಗೆ ಮಾತ್ರ ರಾಜ್ಯ ಸರ್ಕಾರ ತನ್ನ ಸವಲತ್ತುಗಳನ್ನು ನೀಡುತ್ತದೆಯೇ ಎಂದು ಹೈಕೋರ್ಟ್ ವಿಭಾಗೀಯ ಪೀಠ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಸವಲತ್ತು ಕೋರಿ ಅಥವಾ ಸಮಸ್ಯೆ ಬಗೆಹರಿಸುವಂತೆ ಸರ್ಕಾರದ ಮುಂದೆ ಕಣ್ಣೀರು ಸುರಿಸುವವರಿಗೆ ಮಾತ್ರ ಸರ್ಕಾರದ ಯೋಜನೆಗಳು ಸೀಮಿತವಾಗಿವೆ ಎನಿಸುತ್ತದೆ. ಆದರೆ ಪ್ರಾದೇಶಿಕ ಸಮತೋಲನ ಕಾಪಾಡಿಕೊಳ್ಳಲು ಸರ್ಕಾರ ವಿಫಲವಾಗಿದೆ ಎಂದು ನ್ಯಾ. ಶ್ರೀಧರ ರಾವ್ ಹಾಗೂ ನ್ಯಾ. ಅಬ್ದುಲ್ ನಜೀರ್ ಅವರ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ತೆರೆಯಲು ಮುಂದಾಗದ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಶಂಕರ್ ಭಟ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಸಂದರ್ಭದಲ್ಲಿ ನ್ಯಾಯ ಪೀಠ ಈ ರೀತಿ ಹೇಳಿದೆ.
ಸಾಸಂಸ್ಕೃತಿಕ ಹಾಗೂ ಭೌಗೋಳಿಕವಾಗಿ ಉ.ಕ ಜಿಲ್ಲೆ ವಿಶಿಷ್ಟವಾಗಿದೆ. ರಾಜಕೀಯ ಪ್ರಾಬಲ್ಯ ಇಲ್ಲದಿದ್ದರೆ ನಿರ್ಲಕ್ಷ್ಯ ಮಾಡುವುದು ಸೂಕ್ತವಲ್ಲ. ಆ ಜಿಲ್ಲೆಯನ್ನು ಏಕೆ ನಿರ್ಲಕ್ಷಿಸಲಾಗಿದೆ, ವೈದ್ಯಕೀಯ ಕಾಲೇಜನ್ನು ಏಕೆ ಸ್ಥಾಪಿಸಲು ಅನುಮತಿ ನೀಡಿಲ್ಲ ಎಂಬ ಕುರಿತಂತೆ ಲಿಖಿತ ಉತ್ತರ ನೀಡಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ಮಾಡಿದೆ.
ಕಳೆದ 2012ರ ಅ.18ರಂದು ಗುಲ್ಬರ್ಗದಲ್ಲಿ ನಡೆದ ಸಂಪುಟ ಸಭೆಯಲ್ಲಿ ರಾಜ್ಯದಲ್ಲಿ 7 ವೈದ್ಯ ಕಾಲೇಜು ಪ್ರಾರಂಭಿಸುವ ಕುರಿತಂತೆ ನಿರ್ಣಯ ಕೈಗೊಳ್ಳಲಾಗಿತ್ತು. ಅಂತಿಮ ಕ್ಷಣದವರೆಗೂ ಉತ್ತರ ಕನ್ನಡ ಜಿಲ್ಲೆಯಲ್ಲೂ ಒಂದು ಕಾಲೇಜು ಸ್ಥಾಪಿಸುವ ಕುರಿತಂತೆ ಪ್ರಸ್ತಾವನೆಗಳಿದ್ದವು. ಆದರೆ ಸಂಪುಟ ಸಭೆಯ ನಿರ್ಣಯದಲ್ಲಿ ಉತ್ತರ ಕನ್ನಡವನ್ನು ಕೈ ಬಿಡಲಾಗಿತ್ತು. ಕರಾವಳಿ ಹಾಗೂ ಪಶ್ಚಿಮ ಘಟ್ಟವನ್ನು ಹೊಂದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಾವುದೇ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಲು ಸಾಧ್ಯವಿಲ್ಲ. ಆದ್ದರಿಂದ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಲು ಸಾರ್ಕರ ಮುಂದಾಗಬೇಕು.
ಇವತ್ತಿನವರೆಗೂ ಉ.ಕ. ಜಿಲ್ಲೆಯಲ್ಲಿ ಯಾವುದೇ ವೈದ್ಯಕೀಯ ಕಾಲೇಜಿಲ್ಲ. ಪ್ರಾರಂಭಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರ ಶಂಕರ ಭಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕೋರಿದ್ದರು. ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ವಾರದಲ್ಲಿ ಉತ್ತರಿಸುವಂತೆ ಕೋರ್ಟ್ ಸೂಚಿಸಿದೆ.
ಉಪನ್ಯಾಸಕರ ಕೊರತೆಗೆ ಪರಿಹಾರವೇನು?: ರಾಜ್ಯ ಸರ್ಕಾರ ಹೊಸದಾಗಿ 7 ವೈದ್ಯಕೀಯ ಕಾಲೇಜು ಪ್ರಾರಂಭಿಸುತ್ತಿದೆ. ಆದರೆ ಈಗಿರುವ ಕಾಲೇಜುಗಳಲ್ಲಿಯೇ ಉಪನ್ಯಾಸಕರ ಕೊರತೆಯಿದೆ. ಮುಂದಿನ 5 ವರ್ಷಗಳಲ್ಲಿ ಎಂಸಿಐ ಸೂಕ್ತ ಪರಿಹಾರ ಹುಡುಕದಿದ್ದರೆ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಉಪನ್ಯಾಸಕರೇ ಇರುವುದಿಲ್ಲ. ಶಿಕ್ಷಣದ ಗುಣಮಟ್ಟ ಕುಸಿಯುವ ಅಪಾಯವಿದೆ ಎಂದು ವಿಭಆಗೀಯ ಪೀಠ ಎಚ್ಚರಿಸಿದೆ.
ಸೀಟ್ ಬ್ಲಾಕಿಂಗ್ಗೆ ಉತ್ತರಿಸಿ
ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ನಡೆಯುತ್ತಿರುವ ಸೀಟ್ ಬ್ಲಾಕಿಂಗ್ ದಂಧೆ ಕುರಿತಂತೆ ಒಂದು ವಾರದೊಳಗೆ ಉತ್ತರ ನೀಡುವಂತೆ ವೈದ್ಯಕೀಯ ಶಿಕ್ಷಣ ಇಲಾಖೆ, ಕಾಮೆಡ್-ಕೆ ಹಾಗೂ ಖಾಸಗಿ ಕಾಲೇಜುಗಳಿಗೆ ಸೂಚಿಸಿದೆ.
ನಗರದ ಖಾಸಗಿ ಕಾಲೇಜೊಂದರಲ್ಲಿ 24ಕ್ಕೂ ಅಧಿಕ ಸೀಟುಗಳನ್ನು ಸೀಟ್ ಬ್ಲಾಕಿಂಗ್ ಮೂಲಕ ಅವ್ಯವಹಾರ ನಡೆಸಲಾಗಿದೆ. ಸಿಇಟಿ ಹಾಗೂ ಕಾಮೆಡ್-ಕೆ ಮೂಲಕ ಸೀಟು ಪಡೆದ ವಿದ್ಯಾರ್ಥಿಗಳು ತರಗತಿಗೆ ಹಾಜರಾಗದೇ ಸೀಟುಗಳನ್ನು ಮಾರಿಕೊಂಡಿದ್ದಾರೆ. ಇದರಲ್ಲಿ ಆಡಳಿತ ಮಂಡಳಿ ಶಾಮೀಲಾಗಿದೆ ಎಂದು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿತ್ತು. ಈಗಾಗಲೇ ಒಮ್ಮೆ ನೋಟಿಸ್ ನೀಡದ್ದರೂ ಯಾವುದೇ ಪ್ರತಿವಾದಿಗಳು ಆಕ್ಷೇಪಣೆ ಹೇಳಿಕೆ ಸಲ್ಲಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಸೋಮವಾರದ ನಡೆದ ವಿಚಾರಣೆಯಲ್ಲಿ ಆಕ್ಷೇಪಣೆ ಹೇಳಿಕೆ ಸಲ್ಲಿಸಲು ಮತ್ತೊಂದು ಅವಕಾಶ ನೀಡಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.