ಕಿರುಕುಳ ಸಹಿಸಲಾಗದೆ ಕೊಂದೆ
ಬೆಂಗಳೂರು: ನಾನು ಜೈಲಿಗೆ ಹೋದರೂ ಪರವಾಗಿಲ್ಲ. ಇನ್ನಾದರೂ ಇಲಾಖೆಯಲ್ಲಿನ ಕಿರಿಯ ಸಿಬ್ಬಂದಿ ಅನುಭವಿಸುವ ಕಿರುಕುಳ, ಅವರ ಮೇಲಿನ ದೌರ್ಜನ್ಯ ನಿಲ್ಲಿಸಲಿ.
ಹೀಗೆಂದದ್ದು ರಾಜಾನುಕುಂಟೆ ಠಾಣೆಯ ಪಿಎಸ್ಐ ವಿಜಯ್ಕುಮಾರ್ರನ್ನು ಕೊಲೆ ಮಾಡಿದ್ದ ಪೊಲೀಸ್ ಪೇದೆ ಆನಂದ್ಕುಮಾರ್.
ಕೊಲೆ ಪ್ರಕರಣದ ತನಿಖಾ ತಂಡದ ಅಧಿಕಾರಿ ಬಿಪಿನ್ ಗೋಪಾಲಕೃಷ್ಣ ಅವರ ನೇತೃತ್ವದಲ್ಲಿ ಮಂಗಳವಾರ ಬೆಳಗ್ಗೆ ಆನಂದ್ಕುಮಾರ್ನನ್ನು ಠಾಣೆಗೆ ಕರೆದುಕೊಂಡು ಬರಲಾಯಿತು.
ವಿಜಯ್ಕುಮಾರ್ ನನ್ನನ್ನೂ ಸೇರಿ ಎಲ್ಲಾ ಸಿಬ್ಬಂದಿಗೂ ಕಿರುಕುಳ ಕೊಡುತ್ತಿದ್ದರು. ಅವರ ವರ್ತನೆಯಿಂದ ಸಾಕಾಗಿತ್ತು. ಇನ್ನಾದರೂ ಇಂತಹ ದೌರ್ಜನ್ಯ ಕೊನೆಗೊಳ್ಳಲಿ ಎಂದು ನಿರ್ಧರಿಸಿ ಹೀಗೆ ಮಾಡಿದೆ ಎಂದು ಅಧಿಕಾರಿಗಳೊಡನೆ ಹೇಳಿದ ಆನಂದ್ ಬಿಕ್ಕಿಬಿಕ್ಕಿ ಅತ್ತ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬೆಳಗ್ಗೆ ಸುಮಾರು 10 ಗಂಟೆ ವೇಳೆಗೆ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದ ಅಧಿಕಾರಿಗಳ ತಂಡ ಮಧ್ಯಾಹ್ನ 2 ಗಂಟೆಯವರೆಗೆ ಠಾಣೆಯಲ್ಲಿ ಆನಂದ್ರನ್ನು ವಿಚಾರಣೆಗೊಳಪಡಿಸಿದ್ದರು. ಎಲ್ಲಾ ಪ್ರಶ್ನೆಗಳಿಗೂ 'ನನಗೆ ಕಿರುಕುಳ ಕೊಡುತ್ತಿದ್ದರು, ಸಹಿಸಲಾಗದೆ ಕೊಂದೆ' ಎಂಬ ಒಂದೇ ಉತ್ತರವನ್ನು ಆನಂದ್ ನೀಡುತ್ತಿದ್ದರು.
ವಿಚಾರಣೆ ನಂತರ ಮಧ್ಯಾಹ್ನದ ವೇಳೆಗೆ ಆರೋಪಿಯನ್ನು ಗೌರಿಬಿದನೂರಿಗೆ ಕರೆದುಕೊಂಡು ಹೋಗಲಾಯಿತು. ಅದಕ್ಕೂ ಮುನ್ನ ಆರೋಪಿಯ ಪತ್ನಿ ಸುಜಾತ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಆಗತ್ಯ ಮಾಹಿತಿ ಕಲೆಹಾಕಿದರು.
ಈ ವೇಳೆ ಆನಂದ್- ಸುಜಾತ ಕೆಲ ನಿಮಿಷ ಕುಶಲೋಪರಿ ನಡೆಸಿದರು. ನನ್ನ ಬಗ್ಗೆ ಚಿಂತಿಸಬೇಡ. ಮಕ್ಕಳು ಹಾಗೂ ಪೋಷಕರ ಬಗ್ಗೆ ಗಮನಹರಿಸು ಎಂದಷ್ಟೇ ಹೇಳಿ, ಕಣ್ಣೀರು ಹಾಕಿದ ಆನಂದ್ನನ್ನು ಅಧಿಕಾರಿಗಳು ಕರೆದುಕೊಂಡು ಹೋದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.