ನಿಯಮ ಉಲ್ಲಂಘನೆ ಮಾಡುವರ ಮೇಲೆ ನೀವೇ ಕಣ್ಣಿಡಿ
ಬೆಂಗಳೂರು: ಇದು ಕಣ್ಣಿನ ವಿಚಾರ. ಅಂದರೆ 'ಪಬ್ಲಿಕ್ ಐ'.
ಇದೇನಿದು 'ಪಬ್ಲಿಕ್ ಐ' ಎನ್ನಬೇಡಿ. ನಗರ ಸಂಚಾರ ಪೊಲೀಸರನ್ನು ನೀವು ಈಗ ಕಣ್ಣಿನ ಮೂಲಕ ಸಂಪರ್ಕಿಸಬಹುದು.
ದೂರುಗಳನ್ನು ದಾಖಲಿಸಲು ಮಾತ್ರ. ಫೇಸ್‌ಬುಕ್‌ನಲ್ಲಿ ಪೊಲೀಸರು ಲಭ್ಯವಿದ್ದಾರೆ. ಇದಾವುದಿದು ಕಣ್ಣು?
ಹೌದು, ಕಣ್ಣಿಗೂ ಸಾಮಾಜಿಕ ತಾಣ ಫೇಸ್‌ಬುಕ್‌ಗೂ ಒಂದಕ್ಕೊಂದು ಸಂಬಂಧವಿಲ್ಲ. ಅಲ್ಲಿ ನೀವು ಸಮಸ್ಯೆ ಹೇಳಿಕೊಳ್ಳಬಹುದು, ಪೊಲೀಸರಿಗೆ ಮಾಹಿತಿ ನೀಡಬಹುದು, ಅವರ ತಪ್ಪು, ಜನರ ತಪ್ಪುಗಳನ್ನು ತೋರಿಸಬಹುದು, ಅಗತ್ಯಬಿದ್ದಲ್ಲಿ ಇಂತಹ ನಿಯಮ ಉಲ್ಲಂಘನೆ ಫೋಟೋ ಕಳುಹಿಸಬಹುದು. ಆದರೆ, ಅದಕ್ಕೂ ಮುನ್ನ ನೀವು ಅವರ ಜೊತೆ ಸ್ನೇಹ ಬೆಳೆಸಬೇಕು.
ಆದರೆ, ಕಣ್ಣಿನಲ್ಲಿ ಹಾಗಲ್ಲ. 'ಪಬ್ಲಿಕ್ ಐ' ಯೋಜನೆ ಕೇವಲ ದೂರುಗಳಿಗೆ ಮಾತ್ರ ಸೀಮಿತ. ನಿಮ್ಮ ಕ್ಯಾಮರಾ ಕಣ್ಣಿನಲ್ಲಿ ಫೋಟೋ ಕ್ಲಿಕ್ಕಿಸಿ ಯಾರು ಬೇಕಾದರೂ ದೂರು ನೀಡಬಹುದು.
ನೀವೂ ತೊಡಗಿಸಿಕೊಳ್ಳಿ: 'ಪಬ್ಲಿಕ್ ಐ' ಯೋಜನೆಯಲ್ಲಿ ಸಾರ್ವಜನಿಕರು ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದು. ಸಂಚಾರ ನಿಯಮ ಉಲ್ಲಂಘನೆ ಮಾಡುವವರ ಫೋಟೋಗಳನ್ನು ನಿಮ್ಮ 'ಐ'ನಲ್ಲಿ ಸೆರೆಹಿಡಿಯಬೇಕು. ಸೆರೆಹಿಡಿದ ಫೋಟೋಗಳನ್ನು ಸಂಚಾರ ಪೊಲೀಸರಿಗೆ ಕಳುಹಿಸಿದರೆ, ತನಿಖೆ ವೇಳೆ ಹಾಗೂ ಆರೋಪಿ ಪತ್ತೆಗೆ ಅದು ಸಹಾಯವಾಗುತ್ತದೆ. ಇಲ್ಲವಾದಲ್ಲಿ ದಂಡ ವಿಧಿಸಲು ಅನುಕೂಲವಾಗುತ್ತದೆ. ಪೊಲೀಸರು ಎಲ್ಲೆಡೆ ಇರುವುದಿಲ್ಲ. ಅವರನ್ನು ಕಂಡರೆ ಆರೋಪಿಗಳು ಪರಾರಿಯಾಗುವ ಸಾಧ್ಯತೆ ಇದೆ. ತಪ್ಪು ಮಾಡುವವರು ಹಿಂದೆ ಮುಂದೆ ನೋಡುತ್ತಾರೆ. ಪೊಲೀಸ್ ಇಲ್ಲದಿದ್ದರೆ ನಿಯಮ ಉಲ್ಲಂಘಿಸುವುದರಲ್ಲಿ ಜನ ಎತ್ತಿದ ಕೈ. ಆದ್ದರಿಂದ ಸಾರ್ವಜನಿಕರು ಪೊಲೀಸರಿಗೆ ಸಹಾಯ ಮಾಡಲಿ ಎಂಬ ಉದ್ದೇಶದಿಂದ ಈ 'ಪಬ್ಲಿಕ್ ಐ' ಯೋಜನೆ ಜಾರಿಗೆ ತರಲಾಗಿದೆ. ಈ ಮೂಲಕ ನೀವು ಸಹ ಪೊಲೀಸ್ ರೀತಿ ಕೆಲಸ ಮಾಡಬಹುದು.
ಹೀಗೆ ಸಂಪರ್ಕಿಸಿ: ನೀವು ತೆಗೆದ ಫೋಟೋ ಪೊಲೀಸರಿಗೆ ಕಳಿಸುವ ಮುನ್ನ ಅವರ ಜೊತೆ ಸ್ನೇಹಿತರಾಗಬೇಕಿಲ್ಲ. ಅದನ್ನು ಸಾಮಾಜಿಕ ತಾಣ ಫೇಸ್‌ಬುಕ್‌ನಲ್ಲೂ ಅಪ್‌ಲೋಡ್ ಮಾಡುವಂತಿಲ್ಲ. ನೀವು ಮಾಡಬೇಕಾದ್ದಿಷ್ಟು.
www.bangaloretrafficpolice. gov.inಗೆ ಭೇಟಿ ಕೊಡಿ. ಅಲ್ಲಿ ಒಂದು 'ಕಣ್ಣಿನ' ಚಿತ್ರವಿರುತ್ತದೆ. ಅದನ್ನು ಕ್ಲಿಕ್ಕಿಸಿ. ಅದರಲ್ಲಿ ಫೋಟೋ ಅಪ್‌ಲೋಡ್ ಮಾಡುವ ಬಗ್ಗೆ ಒಂದು ಬಟನ್ ಇರುತ್ತದೆ. ನೀವು ಅದನ್ನು ಒತ್ತಿ. ಅಲ್ಲಿರುವ ವಿವಿಧ ಮಾಹಿತಿಗಳನ್ನು ತುಂಬುತ್ತಾ ಹೋಗಿ, ಕೊನೆಗೆ ಫೋಟೋ ಅಪ್‌ಲೋಡ್ ಮಾಡಿ. ನಂತರ ನಿಮಗೆ ಒಂದು ಸಂಖ್ಯೆ ಸಿಗುತ್ತದೆ. ನೀವು ಫೋಟೋ ಕಳಿಸಿದ್ದಕ್ಕೆ ಅರ್ಥಾತ್ ದೂರು ದಾಖಲಿಸಿದ್ದಕ್ಕೆ ಆ ಸಂಖ್ಯೆ ಕೊಡಲಾಗುತ್ತದೆ. ಅಲ್ಲಿಗೆ ನಿಮ್ಮ ಕೆಲಸ ಮುಗಿಯಿತು. ಮುಂದೆ ಪೊಲೀಸರದ್ದು.
ತಪಾಸಣೆ ಮಾಡಿ: ಫೋಟೋ ಅಪ್‌ಲೋಡ್ ಮಾಡಿದ ನಂತರ ನಿಮ್ಮ ಕೆಲಸ ಮುಗಿಯಿತು ಸರಿ. ಆದರೆ, ಅದಕ್ಕೆ ಪ್ರತಿಫಲ ಸಿಕ್ಕಿದೆಯೇ ಎಂಬುದನ್ನು ನೀವು ಪರಿಶೀಲಿಸಬಹುದು. ಮತ್ತೆ www.bangaloretrafficpolice.gov.inಗೆ ಭೇಟಿ ಕೊಡಿ. 'ಕಣ್ಣಿನ' ಚಿತ್ರ ಕ್ಲಿಕ್ಕಿಸಿ. ಅಲ್ಲಿ 2ನೇ ಲೇನ್‌ನಲ್ಲಿ ಹಳೆಯ ದೂರು ವಿಚಾರಣೆ ಬಗ್ಗೆ ಸಂದೇಶವಿರುತ್ತದೆ. ಅದನ್ನು ಕ್ಲಿಕ್ ಮಾಡಿ. ನಂತರ ನಿಮಗೆ ನೀಡಿರುವ ದೂರಿನ ಸಂಖ್ಯೆಯನ್ನು ಅಲ್ಲಿ ನಮೂದಿಸಿ.
ಅದು ಇತ್ಯರ್ಥವಾಗಿದೆಯೇ, ಯಾವಾಗ ಆಗಿದೆ. ಒಂದು ವೇಳೆ ಇತ್ಯರ್ಥ್ಯವಾಗಿಲ್ಲದಿದ್ದರೆ ಅದಕ್ಕೆ ಕಾರಣವೇನು ಎಂಬಿತ್ಯಾದಿ ವಿವರಗಳನ್ನು ಸಂಪೂರ್ಣವಾಗಿ ನೀಡಲಾಗಿರುತ್ತದೆ. ಅಗತ್ಯಬಿದ್ದಲ್ಲಿ ಸಂಬಂಧಿಸಿದ ಪೊಲೀಸರಿಂದ ಸಮಜಾಯಿಷಿ ತೆಗೆದುಕೊಳ್ಳಬಹುದು.
ಉದ್ದೇಶ: ಸಾರ್ವಜನಿಕರಿಗೆ ಸಹಾಯವಾಗುವ ದೃಷ್ಟಿಯಿಂದ ಸಂಚಾರ ಪೊಲೀಸರು ಈ ಹಿಂದೆ ಸಾಮಾಜಿಕ ತಾಣ 'ಫೇಸ್‌ಬುಕ್' ಜೊತೆ ಜನರೊಂದಿಗೆ ಸಂಪರ್ಕ ಬೆಳೆಸಿದ್ದರು. ಅದು ಯಶಸ್ವಿಯಾಗಿದೆ. ಈಗ 'ಪಬ್ಲಿಕ್ ಐ' ಎಂಬ ವಿನೂತನ ಕಲ್ಪನೆಯ ಯೋಜನೆಯನ್ನು ಹೊರತಂದಿದೆ. ಅಪಘಾತ ತಡೆಗಟ್ಟುವುದು ಹಾಗೂ ಪಾದಚಾರಿಗಳ ಸುರಕ್ಷತೆ ಕಾಪಾಡುವುದು. ಅಂದರೆ ರಸ್ತೆಗಳ ಮೇಲೆ ಹೆಚ್ಚು ಸುರಕ್ಷೆ ತರುವುದು, ಪ್ರಾಣಹಾನಿ ಹಾಗೂ ಅಪಘಾತ ನಿಯಂತ್ರಿಸುವುದು ಇದರ ಉದ್ದೇಶ.
ಸಾರ್ವಜನಿಕರು ತಮ್ಮ ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿದ ಫೋಟೋಗಳನ್ನು ಪೊಲೀಸರಿಗೆ ಕಳುಹಿಸಿದರೆ, ಅದನ್ನು ಪರಿಶೀಲಿಸಿ ನಂತರ ಅದನ್ನು ಆರ್‌ಟಿಓ ಕಚೇರಿಗೆ ಕಳುಹಿಸಿಕೊಡಲಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಕಾನೂನು ರೀತ್ಯಾ ಕ್ರಮಕೈಗೊಳ್ಳಲಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.